ಹುಣಸಗಿ: ತಾಲ್ಲೂಕಿನ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಜೊತೆಯಲ್ಲಿ ಲಕ್ಷ್ಯ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳಿಸಿದ್ದರಿಂದಾಗಿ ತಾಲ್ಲೂಕಿನ ರಾಜನಕೋಳುರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪತ್ರ ಬಂದಿದ್ದು, ಸುರಕ್ಷಿತ ಹೆರಿಗೆ ಜೊತೆಯಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಉತ್ತಮ ನಿರ್ವಹಣೆ ಮಾಡಿದ್ದು, ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಪ್ರಶಸ್ತಿಗೆ ಪಾತ್ರವಾಗಿದೆ. ಸುರಕ್ಷಿತ ಮಾತೃತ್ವ ಅಭಿಯಾನ ಅಡಿಯಲ್ಲಿ ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ಶೇ100 ಪ್ರಗತಿ ಸಾಧಿಸಿದೆ.
ಇಲ್ಲಿನ ವೈದ್ಯರು, ತಂತ್ರಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿಯ ಕಾಳಜಿಯಿಂದಾಗಿ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಮೂರು ವರ್ಷದಿಂದಲೂ ಪ್ರತಿ ತಿಂಗಳು ಸುಮಾರು 100ಕ್ಕೂ ಹೆಚ್ಚು ಹೆರಿಗೆಯನ್ನು ಈ ಲಕ್ಷ್ಯ ಕಾರ್ಯಕ್ರಮದ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದು, ಕಳೆದ ಮೂರು ವರ್ಷದಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ ಹಾಗೂ ವೈದ್ಯ ಡಾ.ಧರ್ಮರಾಜ ಹೊಸಮನಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಈ ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ತುರ್ತು ಆರೋಗ್ಯ ಸೇವೆ ಒದಗಿಸುವ ಜೊತೆಯಲ್ಲಿ ಇಲ್ಲಿಯವರೆಗೂ ಸುಮಾರು 15 ಸಾವಿರಕ್ಕೂ ಹೆಚ್ಚು ಸುರಕ್ಷತೆ ಹೆರಿಗೆಗಳನ್ನು ಮಾಡಿಸಿರುವದು ನಮ್ಮ ಜಿಲ್ಲೆಯ ಹೆಮ್ಮೆಯ ಆಸ್ಪತ್ರೆಯಾಗಿದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಎಂ.ಎಸ್. ಸಾಜೀದ್ ಹಾಗೂ ಜಿಲ್ಲಾ ಗುಣ ನಿಯಂತ್ರಣ ಖಾತ್ರಿ ಸಲಹೆಗಾರ ಡಾ.ಪ್ರಸಾದ ಕುಲಕರ್ಣಿ ಸಂತಸ ವ್ಯಕ್ತ ಪಡಿಸಿದರು.
1998 ರಲ್ಲಿಯೇ ತಾಲ್ಲೂಕಿನ ರಾಜನಕೋಳೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಗೆ ಆರಂಭವಾಗಿದ್ದು 2005 ರಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಹಿಂದುಳಿದ ಭಾಗದ ಹಣೆಪಟ್ಟಿಯನ್ನು ಕಳಚುವ ನಿಟ್ಟಿನಲ್ಲಿ ನಮ್ಮ ಮತಕ್ಷೇತ್ರದ ವೈದ್ಯರ ಕಾರ್ಯ ವೈಖರಿ ಹಾಗೂ ಅವರ ಸೇವೆ ಮಾದರಿಯಾಗಿದೆ.- ರಾಜಾ ವೆಂಕಟಪ್ಪನಾಯಕ, ಶಾಸಕ ಸುರಪುರ
ಲಕ್ಷ್ಯ ಯೋಜನೆ ಅಡಿಯಲ್ಲಿ ಕೇಂದ್ರದಿಂದ ರಾಷ್ಟ್ರಮಟ್ಟದ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಆಯ್ಕೆಯಾಗಿದ್ದು ನಮ್ಮ ರಾಜ್ಯ ತಂಡಕ್ಕೆ ಅತ್ಯಂತ ಸಂತಸ ತಂದಿದೆ.ಡಾ.ಪ್ರಭುಲಿಂಗ ಮಾನಕರ್, ಡಿಎಚ್ಒ ಯಾದಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.