ಸೋಮವಾರ, ಜನವರಿ 18, 2021
21 °C
ಹುಣಸಗಿ ತಾ.ಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

ರೈತರಿಗೆ 10 ಗಂಟೆ ವಿದ್ಯುತ್ ಪೂರೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಆಡಳಿತಾಧಿಕಾರಿ ಮುಕ್ಕಣ್ಣ ಕರಿಗಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಸಭೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಕೃಷಿ ಇಲಾಖೆಯಿಂದ ರೈತರಿಗಾಗಿ ದೊರೆಯುವ ಯೋಜನೆಗಳ ಕುರಿತು ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ ಎಂದು ಕೆಲ ಸದಸ್ಯರು ಆರೋಪಿಸಿದರು.

ವಜ್ಜಲ ತಾಲ್ಲೂಕು ಪಂಚಾಯಿತಿ ಸದಸ್ಯ ಭೀಮರಾಯ ದೊಡ್ಡಮನಿ ಸಭೆಯಲ್ಲಿ ಮಾತನಾಡಿ, ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸುವ ಜತೆಯಲ್ಲಿ 10 ಗಂಟೆ 3 ಫೇಸ್ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.

ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಫಿಕ್ ಮಾತನಾಡಿ, 7 ತಾಸು ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಬಾಲಾಜಿ ಬರದೇವನಾಳ ಮಾತನಾಡಿ, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಸರಬರಾಜು ಆಗುತ್ತಿರುವ ಪಡಿತರ ಹಾಗೂ ಮೊಟ್ಟೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಕ್ಕಣ್ಣ ಕರಿಗಾರ ಮಾತನಾಡಿ ಈ ಕುರಿತು ವರದಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಗ್ರಾಮೀಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿವೆ. ಮಾಳನೂರ, ವಜ್ಜಲತಾಂಡಾ, ಶ್ರೀನಿವಾಸಪುರ ಮತ್ತಿತರ ಗ್ರಾಮಗಳಲ್ಲಿ ಇಂತಹ ಕಟ್ಟಡಗಳು ಇದ್ದು ಅವುಗಳನ್ನು ಪೂರ್ಣಗೊಳಿಸಲು ಬಹುತೇಕ ಸದಸ್ಯರು ಒತ್ತಾಯಿಸಿದರು. ರಾಯನಪಾಳಾ ಗ್ರಾಮದಲ್ಲಿ ಇನ್ನೂ ಈ ಕಟ್ಟಡ ನೆಲ ಮಟ್ಟ (ಬೇಸ್ಮೇಟ್)ನಲ್ಲಿಯೇ ಇದೆ ಎಂದು ಕೊಡೇಕಲ್ಲ ಸದಸ್ಯ ಮೋಹನ ಪಾಟೀಲ ಹೇಳಿದರು.

ನರೇಗಾ ಯೋಜನೆ ಅಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಒಂದು ವಾರದಲ್ಲಿಯೇ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ತಾಲ್ಲೂಕಿನಲ್ಲಿ ಕೋವಿಡ್ -19 ಹತೋಟಿಲ್ಲಿ ಬಂದಿದ್ದು, ಹುಣಸಗಿ ಮತ್ತು ಕೊಡೇಕಲ್ಲಗಳಲ್ಲಿ ತಲಾ ಒಂದು ಮೊಬೈಲ್ ಟೀಮ್ ರಚಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಧರ್ಮರಾಜ ಹೊಸಮನಿ ಸಭೆಗೆ ತಿಳಿಸಿದರು.

ಕುಡಿಯುವ ನೀರು, ಸಾಮಾಜಿಕ ಅರಣ್ಯ, ಸಣ್ಣ ಕೈಗಾರಿಕೆ ಸೇರಿದಂತೆ ಇತರ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.
ಇಒ ಅಧಿಕಾರಿ ಅಮರೇಶ ಸೇರಿದಂತೆ ತಾಲ್ಲೂಕಿನ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು