ಯಾದಗಿರಿ: ಅಂದಿನ ಹೈದರಾಬಾದ್ ಕರ್ನಾಟಕ ಹೋರಾಟಗಾರರು ಈ ಭಾಗದಲ್ಲಿ ಎರಡು ಬಾರಿ ಹೋರಾಟ ನಡೆಸಿದರು. ಅವರ ಬಗ್ಗೆ ಪಠ್ಯಪುಸ್ತಕವಾಗಲಿ, ಸ್ಮಾರಕ, ಪುತ್ಥಳಿ ಸೇರಿದಂತೆ ಹೋರಾಟಗಾರರ ನೆನಪು ಹಸಿರಾಗಿಸುವ ಕಾರ್ಯಗಳು ಇಂದಿಗೂ ಆಗಿಲ್ಲ ಎನ್ನುವುದು ಅಭಿಮಾನಿಗಳ ಆಕ್ರೋಶವಾಗಿದೆ.
1947ರ ಆಗಸ್ಟ್ 15 ರಂದು ದೇಶದೆಲ್ಲೆಡೆ ಜನತೆ ಸ್ವಾತಂತ್ರ್ಯೋತ್ಸವದ ಹಿತವನ್ನು ಅನುಭವಿಸುತ್ತಿದ್ದರೆ ಹೈದರಾಬಾದ್ ಪ್ರಾಂತ್ಯ ಮಾತ್ರ ಮತ್ತೊಂದು ಹೋರಾಟಕ್ಕೆ ಅಣಿಯಾಯಿತು. ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಿಜಾಮನ ಕಪಿಮುಷ್ಠಿಯಿಂದ ಹೊರ ಬರಲು 13 ತಿಂಗಳು ಬೇಕಾಯಿತು. ಸೆಪ್ಟೆಂಬರ್ 17ರಂದು ಈ ಭಾಗ ನಿಜಾಮನಿಂದ ಮುಕ್ತಿ ಪಡೆಯಿತು.
ನಿಜಾಮನ ವಿರುದ್ಧ ಹೋರಾಡಿದವರು ವೃತ್ತಿಯಲ್ಲಿ ಕೃಷಿಕರಾಗಿದ್ದರೂ ಪ್ರವೃತ್ತಿಯಲ್ಲಿ ವಿಮೋಚನಾ ಹೋರಾಟಗಾರರಾಗಿ ರೂಪುಗೊಂಡಿದ್ದರು. ಹೈದರಾಬಾದ್ ಸಂಸ್ಥಾನದ ವಿರುದ್ಧ ನಡೆದ ಹೋರಾಟದಲ್ಲಿ ‘ವಂದೇ ಮಾತರಂ’ ಪ್ರಮುಖ ಸ್ಥಾನ ವಹಿಸಿ ಈ ಮೂಲಕ ಹೋರಾಟಕ್ಕೆ ಸ್ಫೂರ್ತಿ ನೀಡಿತ್ತು.
ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಕಪಿಮುಷ್ಠಿಯಲ್ಲಿ ಬದುಕಿದ ಜನರಿಗೆ ದೇಶದ ಸ್ವಾತಂತ್ರ್ಯ ನಂತರ ನಿಜಾಮನ ಗುಲಾಮಗಿರಿಯಿಂದ ಬದುಕುವಂತೆ ಆಗಿತ್ತು. ನಿಜಾಮ ಸರ್ಕಾರದ ರಜಾಕಾರರು ಜನರ ಮೇಲೆ ಬಲವಂತದ ಹೇರಿಕೆಗಳನ್ನು ಸಹಿಸಿಕೊಳ್ಳದೇ ಜನರು ದಂಗೆ ಏಳುವಂತಾಯಿತು. ಜಿಲ್ಲೆಯಲ್ಲಿ ಮುಖ್ಯವಾಗಿ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಅವರ ಮುಂಚೂಣಿ ನಾಯಕತ್ವದಲ್ಲಿ ಅನೇಕ ಹೋರಾಟಗಾರರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಅಂದಿನ ಕಲಬುರಗಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ವಿಮೋಚನಾ ಸೇನಾನಿಗಳಾದ ವಿಶ್ವನಾಥ ರೆಡ್ಡಿ ಮುದ್ನಾಳ, ಕೋಲೂರು ಮಲ್ಲಪ್ಪ, ವಿರೂಪಾಕ್ಷಪ್ಪ, ಮಲ್ಲಣ್ಣ ಅಂಬಿಗರ, ವಿದ್ಯಾಧರ ಗುರೂಜಿ, ಚಂಡ್ರಿಕಿ ಜಗನ್ನಾಥ ರಾವ್, ಚಟ್ನಳ್ಳಿ ವೀರಣ್ಣ, ಈಶ್ವರಲಾಲ್ ಸೇರಿದಂತೆ ತೆರೆ ಮರೆಯಲ್ಲಿ ಹೋರಾಟಗಾರರು ಈ ಭಾಗದಿಂದ ಮುಂಚೂಣಿಯಲ್ಲಿದ್ದರು.
ಶಹಾಪುರ ತಾಲ್ಲೂಕಿನ ಅಚ್ಚಪ್ಪಗೌಡ ಸುಬೇದಾರ ನೇತೃತ್ವದಲ್ಲಿ ಹಲವು ನಾಯಕರು ಹೆಗಲೆಣಿಯಾಗಿದ್ದರು. ಅದರಲ್ಲಿ ಮುಖ್ಯವಾಗಿ ತಾಲ್ಲೂಕಿನ ಶಂಕರಯ್ಯ ಸ್ವಾಮಿ, ಸೋಪಣ್ಣ, ತಿಮ್ಮಣ್ಣ ಕೈನೂರ್, ಶರಣಪ್ಪ, ವಿಠಲರಾವ್, ಯಲ್ಲಪ್ಪ ಗಲಗ, ಮಲ್ಲಣ್ಣ ಪ್ರಮುಖರು ವಿಮೋಚನೆಯ ಹೋರಾಟದಲ್ಲಿ ತಮ್ಮದೆ ಆದ ಪಾತ್ರ ನಿರ್ವಹಿಸಿದ್ದರು.
‘ಹೋರಾಟಗಾರರ ಕುರಿತು ಪಠ್ಯಪುಸ್ತಕದಲ್ಲಿ ದಾಖಲಿಸುವಂತೆ ಈ ಭಾಗದ ಅನೇಕ ಅಭಿಮಾನಗಳ ಬೇಡಿಕೆಯಾಗಿದೆ. ಅವರ ಹೋರಾಟ ಮುಂದಿನ ಪೀಳಿಗೆಗೆ ತಿಳಿಯಲು ಪಠ್ಯ ಪುಸ್ತಕ, ಸ್ಮಾರಕ, ಪುತ್ಥಳಿ ಸ್ಥಾಪನೆ ಮಾಡಿದರೆ ಅವರ ನೆನಪು ಸದಾ ಇರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಸಬೇಕು’ ಎನ್ನುತ್ತಾರೆ ಸಂಶೋಧಕ ಭೀಮರಾಯ ಎಲ್.
ಹೋರಾಟಗಾರರ ಕುಟುಂಬಗಳಿಗೆ ಸರ್ಕಾರದಿಂದ ಕೇವಲ ಪಿಂಚಣಿ ಹೊರತುಪಡಿಸಿ ಇನ್ನಿತರ ಸೌಲಭ್ಯಗಳು ದೊರಕುತ್ತಿಲ್ಲ. ವರ್ಷಕ್ಕೊಮ್ಮೆ ನೆನಪು ಮಾಡಿಕೊಂಡು ಸುಮ್ಮನಾಗುತ್ತಿದ್ದೇವೆ ಎಂದು ಹೋರಾಟಗಾರರ ಹತ್ತಿರದ ಸಂಬಂಧಿಗಳು ಹೇಳುತ್ತಾರೆ.
ಜುನಾಗಢ, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ, ಸರ್ದಾರ್ ವಲ್ಲಭಭಾಯಿ ಪಟೇಲ್‌ರು ಸೈನ್ಯ ಬಳಸಿ, ರಾಜ್ಯಗಳನ್ನು ನಿಯಂತ್ರಣಕ್ಕೆ ಪಡೆದು, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು. 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಕರ್ನಾಟಕ ದೇಶದ ಒಕ್ಕೂಟದ ವ್ಯವಸ್ಥೆಗೆ ಸೇರ್ಪಡೆಯಾಯಿತು.
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ.
ಸ್ವಾತಂತ್ರ್ಯ ಹೋರಾಟಗಾರ ಕೋಲೂರು ಮಲ್ಲಪ್ಪ ಅವರ ಸ್ಮಾರಕ ನಿರ್ಮಾಣಕ್ಕಾಗಿ 2017–18 ಸಾಲಿನಲ್ಲಿ ₹2 ಕೋಟಿ ಬಿಡುಗಡೆಯಾಗಿತ್ತು. ಈಗ ₹89 ಲಕ್ಷ ಬಡ್ಡಿ ಆಗಿದೆ. ಸ್ಮಾರಕಕ್ಕಾಗಿ 15–20 ಸ್ಥಳ ಪರಿಶೀಲನೆ ಮಾಡಲಾಗಿದೆಉತ್ತರದೇವಿ ಮಠಪತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ
ಕೋಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣ ನನೆಗುದಿಗೆ ಬಿದ್ದಿದೆ. ಅನುದಾನ ಸದ್ಬಳಕೆ ಆಗಬೇಕು. ಸಮಾಧಿ ಸ್ಥಳ ಮಾತ್ರ ಮಲ್ಲಪ್ಪ ಅಭಿಮಾನಿಗಳಿಂದ ಅಭಿವೃದ್ಧಿಯಾಗಿದೆಹಣಮಂತರಾಯಗೌಡ ಮಾಲಿಪಾಟೀಲ ಕೋಲೂರು ಮಲ್ಲಪ್ಪ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ
ಹೈ.ಕ ವಿಮೋಚನೆಗೆ ಸುರಪುರದ ಹಲವಾರು ಹೋರಾಟಗಾರರು ಎಲೆಮರೆ ಕಾಯಿಯಂತೆ ಕೆಲಸ ಮಾಡಿದ್ದಾರೆ. ಅವರ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕುತಮ್ಮಣ್ಣ ಬಾರಿ (ಬಸಪ್ಪ ಬಾರಿ ಅವರ ಪುತ್ರ)
ಹೈ.ಕ ಮುಕ್ತಿ ಸಂಘರ್ಷ ಆರಂಭವಾದದ್ದೇ ಸುರಪುರದಿಂದ. ಈ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ. ಪಠ್ಯ ಪುಸ್ತಕದಲ್ಲಿ ಇಲ್ಲಿನ ಹೋರಾಟಗಾರರ ಕುರಿತು ಮಾಹಿತಿ ಸೇರ್ಪಡೆ ಮಾಡಬೇಕುಕೃಷ್ಣ ದರಬಾರಿ (ತಿಮ್ಮಯ್ಯ ದರಬಾರಿ ಅವರ ಮೊಮ್ಮಗ)
ಹೈ.ಕ ವಿಮೋಚನೆಗೆ ಸುರಪುರದ ಕೊಡುಗೆ ಅನನ್ಯ
ಸುರಪುರ: ಹೈದರಾಬಾದ್ ನಿಜಾಮನ ಜೊತೆ ಸ್ನೇಹ ಸಂಬಂಧ ಹೊಂದಿದ್ದ ಸುರಪುರದ ದೊರೆಗಳು ದೇಶದ ಸ್ವಾತಂತ್ರ್ಯ ನಂತರ ದೇಶದ ಒಕ್ಕೂಟ ಸೇರಲು ವಿರೋಧಿಸಿದ್ದ ಅವರೊಡನೆ ಸಂಘರ್ಷಕ್ಕೆ ಇಳಿದ ರೀತಿ ಅನನ್ಯ. ಇಲ್ಲಿನ ಸಂಸ್ಥಾನಿಕ ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ ವಿಮೋಚನಾ ಚಳವಳಿಯ ನೇತೃತ್ವ ವಹಿಸಿದ್ದರು. ನಿಜಾಮನ ಸೈನಿಕರ ದಬ್ಬಾಳಿಕೆಯ ವಿರುದ್ಧ ಅನೇಕ ಯುವಕರನ್ನು ಸಂಘಟಿಸಿ ಹೋರಾಟಕ್ಕೆ ಸ್ಪೂರ್ತಿ ತುಂಬಿದರು. ಆಯುರ್ವೇದಿಕ ವೈದ್ಯರಾಗಿದ್ದ ಜಿ.ಸುಬ್ಬಯ್ಯ ನಿಜಾಮರ ವಿರುದ್ಧ ಹೋರಾಡಿ ಗಾಯಗೊಳ್ಳುತ್ತಿದ್ದವರಿಗೆ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ನೀಡುವವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ನಿಜಾಮನ ಬೆದರಿಕೆಗೆ ಜಗ್ಗಲಿಲ್ಲ. ಬಸಪ್ಪ ಬಾರಿ ಎಂಬುವವರು ಹೋರಾಟಗಾರರಿಗೆ ಉಚಿತವಾಗಿ ತ್ರಿವರ್ಣ ಧ್ವಜ ಹೊಲೆದುಕೊಡುತ್ತಿದ್ದರು. ಕನ್ನಡ ಭಾಷೆ ಮಾತನಾಡಬಾರದು ಎಂಬ ಆದೇಶವಿದ್ದರೂ ಕನ್ನಡ ಸಾಹಿತ್ಯ ಸಂಘವನ್ನು ಸ್ಥಾಪಿಸಿ ಕನ್ನಡ ಪರ ಕಾರ್ಯಕ್ರಮಗಳನ್ನು ಎಂ.ಆರ್. ಬುದ್ಧಿವಂತಶೆಟ್ಟಿ ಆಯೋಜಿಸುತ್ತಿದ್ದರು. ಮಹಾದೇವಪ್ಪ ಹೂಗಾರ ಅವರು ನಿಜಾಮ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದರು. ಅವರನ್ನು ಹೈದರಾಬಾದ್ ಕರ್ನಾಟಕದ ಮದನಲಾಲ್ ದಿಂಗ್ರಾ ಎಂದು ಕರೆಯುತ್ತಿದ್ದರು. ಅದೇ ರೀತಿ ಅಪ್ಪಾರಾವ ವಕೀಲ ಹಣಮಂತರಾಯ ದರಬಾರಿ ತಮ್ಮಣ್ಣ ಬಾಸೂತಕರ್ ಎಂ.ಜಿ.ಕುಲಕರ್ಣಿ ಕೆಂಭಾವಿ ಡಿ. ಗೋವಿಂದಪ್ಪ ರಾಮಣ್ಣ ಬೋಡಾ ಇತರರು ನಿಜಾಮಶಾಹಿಯ ವಿರುದ್ಧ ಹೋರಾಡಿ ವಿಮೋಚನೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಕುಟುಂಬಸ್ಥರಿಗೆ ಸೀಮಿತವಾಗಿರುವ ಹೋರಾಟಗಾರರು
ಶಹಾಪುರ: ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ತಾಲ್ಲೂಕಿನ ಹಲವಾರು ಮಹನೀಯರು ಜೀವದ ಹಂಗು ತೊರೆದು ಹೋರಾಟದ ಕೆಚ್ಚು ಹಚ್ಚಿಸಿ ವಿಮೋಚನೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಗಣ್ಯರನ್ನು ಮರೆತಿದ್ದೇವೆ. ಕೇವಲ ಕುಟುಂಬಸ್ಥರಿಗೆ ಸೀಮಿತವಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ವಿಮೋಚನಾ ಹೋರಾಟ ನಡೆಸಿದ ಸಗರ ಗ್ರಾಮದ ಅಚ್ಚಪ್ಪಗೌಡ ಸುಬೇದಾರ ಪ್ರಮುಖರಾಗಿದ್ದಾರೆ. ಆದರೆ ತಾಲ್ಲೂಕು ಆಡಳಿತವು ಅವರ ಸ್ಮರಣೆಗಾಗಿ ಸ್ಮಾರಕವನ್ನು ನಿರ್ಮಿಸಿಲ್ಲ ಎಂಬ ಕೊರಗು ಕುಟುಂಬಸ್ಥರನ್ನು ಕಾಡುತ್ತಲಿದೆ.‘ವಿಮೋಚನೆಯಲ್ಲಿ ಭಾಗವಹಿಸಿದ ತಾಲ್ಲೂಕಿನ ಪ್ರಮುಖ ಹೋರಾಟಗಾರರಾದ ಮಾಣಿಕರೆಡ್ಡಿ ದರ್ಶನಾಪುರ ಹೋಳಿ ಶೇಷಗಿರಿರಾವ್ ಬಾಪುಗೌಡ ದರ್ಶನಾಪುರ ಕಲ್ಯಾಣಪ್ಪ ಮಲಗೊಂಡ ಅಗಸರ ಶಿವರಾಯ ಶಿವಣ್ಣ ನಂದಿಕೋಲ ನರಸಪ್ಪ ನಾಯಿದರ ಶಂಕ್ರಯ್ಯ ಉಕ್ಕಿನಾಳ ನಾಗಪ್ಪ ಶೆಟ್ಟರ್ ಆರಬೋಳ ಸಿದ್ದಪ್ಪ ದೊಡ್ಡಪ್ಪ ಗೌಡರು ವೀರಣ್ಣ ಪಡಶೆಟ್ಟಿ ರಾಮರಾವ್ ಮಿರ್ಜಿ ಮಲ್ಲಣ್ಣಗೌಡರು ಮಲ್ಲಪ್ಪ ಚೌಡಗುಂಡ ಸಗರದ ಮಹಾಂತಪ್ಪ ಗಣಪತರಾವ್ ಕುಲಕರ್ಣಿ ಮುಂತಾದವರು ಹೋರಾಟಕ್ಕೆ ಜೀವ ಹಾಗೂ ಧೈರ್ಯವನ್ನು ತುಂಬಿದ ಮಹನೀಯರು ಆಗಿದ್ದಾರೆ. ಅಂತಹ ಮಹನೀಯರ ಬಗ್ಗೆ ಯುವ ಸಮುದಾಯಕ್ಕೆ ಪರಿಚಯಿಸುವುದು ಅಗತ್ಯವಾಗಿದೆ’ ಎನ್ನುತ್ತಾರೆ ಭಾಸ್ಕರರಾವ ಮುಡಬೂಳ.
ಹೋರಾಟಗಾರರ ಅಧ್ಯಯನಕ್ಕೆ ಬೇಕಿದೆ ಆಸಕ್ತಿ
ಗುರುಮಠಕಲ್: ದೇಶದ ಸ್ವಾತಂತ್ರ್ಯ ಮತ್ತು ರಜಾಕಾರರ ವಿರುದ್ಧದ ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕಿನ ಹೋರಾಟಗಾರರ ಕುರಿತು ಸಂಪೂರ್ಣ ಅಧ್ಯಯನ ಮಾಡುವ ಅವಶ್ಯಕತೆಯಿದೆ. ‘ದೇಶದ ವಿವಿಧೆಡೆ ನಡೆದ ಸಂಶೋಧನೆ ಮತ್ತು ಅಧ್ಯಯನದ ಕಾರಣ ಆ ಭಾಗದಲ್ಲಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಸೇನಾನಿಗಳ ಕುರಿತು ಮಾಹಿತಿ ಲಭ್ಯವಿದೆ. ಅಂತೆಯೇ ಗುರುಮಠಕಲ್ ತಾಲ್ಲೂಕಿನ ಹೋರಾಟಗಾರರ ಕುರಿತು ಈವರೆಗೂ ಸಂಪೂರ್ಣ ಮತ್ತು ಅಕಾಡೆಮಿಕ್ ಅಧ್ಯಯನ ನಡೆಸಿಲ್ಲ. ಇದರಿಂದಾಗಿ ಈ ಭಾಗದ ಹೋರಾಟಗಾರರ ಇತಿಹಾಸ ಬಹುತೇಕ ಮಸುಕಾಗಿದೆ. ಸಂಪೂರ್ಣ ಮರೆಯಾಗುವ ಮುನ್ನವೇ ನಾವು ಎಚ್ಚೆತ್ತುಕೊಳ್ಳುವುದು ಅವಶ್ಯ’ ಎನ್ನುತ್ತಾರೆ ಮುಖಂಡರಾದ ಬಸ್ಸಪ್ಪ ಮತ್ತು ರಾಮಕೃಷ್ಣ. ‘ರಾಮಗಿರಿ ಮಹರಾಜರ ಪ್ರೇರಣೆಯ ತಂಡದಲ್ಲಿದ್ದ ನಮ್ಮ ತಾತನವರು ಮತ್ತು ಅವರ ಜೊತೆಗಾರರ ಕುರಿತು ಮಾತ್ರ ನನಗೆ ತಿಳಿದಿದೆ. ಉಳಿದಂತೆ ಇನ್ನೂ ತುಂಬಾ ಜನ ಹೋರಾಟದಲ್ಲಿ ಭಾಗವಹಿಸಿದ್ದರು. ಅನೇಕರು ಗುಂಪುಗಳಲ್ಲಿ ಹೋರಾಟದಲ್ಲಿ ತೊಡಗಿದ್ದರು. ಅವರೆಲ್ಲರ ನಡುವೆ ಸಂಪರ್ಕ ಖಂಡಿತವಾಗಿ ಇತ್ತೆಂದು ಹೇಳಬಹುದು. ಆದರೆ ಆ ಮಾಹಿತಿ ನನ್ನಲ್ಲಿಲ್ಲ’ ಎಂದು ವಿಮೋಚನಾ ಚಳವಳಿಯ ಹೋರಾಟಗಾರ ಹಣಮಂತರಾವ ಗೋಂಗ್ಲೆ ವಂಶಸ್ಥ ನರೇಶ ಗೋಂಗ್ಲೆಯವರ ಅಭಿಪ್ರಾಯ.ಆರ್ಯ ಸಮಾಜದ ಪ್ರಚಾರಕರಾಗಿದ್ದ ರಾಮಗಿರಿ ಮಹಾರಾಜ ಗುರುನಾಥರೆಡ್ಡಿ ಹಣಮಂತರಾವ ರಾಮರೆಡ್ಡಿ ಪಾಟೀಲ ಶಂಕ್ರಣ್ಣ ನರಸಪ್ಪ ವಿದ್ಯಾಧರ ಗುರೂಜಿ ಲಕ್ಷ್ಮಣರಾವ ನಾರಾಯಣರಾವ ಹಬೀಬ್ ಮಹಾದೇವ ಶಾಸ್ತ್ರಿ ನಾರಾಯಣರಾವ ಮೇಂಗಜಿ ಬೂದೂರು ಬುಗ್ಗಪ್ಪ ಬುಡ್ಡಪ್ಪ ಹೌಜಿ ಪೆಂಟೋಜಿ ಸುತ್ರಾವೆ ಗಂಟಪ್ಪ ಮಾಣಿಕಪ್ಪ ಕಾಮಿನ ವಿಠ್ಠಪ್ಪ ಬುದ್ದಿ ಶೇಷರಾವ ಕಂಬದ ಖಂಡೇರಾವ ಪೋಳ ಲಕ್ಷ್ಮಣ ಪಾಂಚಾಳ ಲಿಂಗಣ್ಣ ನೌದಿ ಕಿಶನ ಜನಾರ್ಧನ ಮಲ್ಲಪ್ಪ ಚೌದರಿ ಹೆಸರುಗಳ ಮಾತ್ರ ಸದ್ಯ ಲಭ್ಯವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.