ಬುಧವಾರ, ಜನವರಿ 20, 2021
17 °C
ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರು ಸದುಪಯೋಗ ಪಡಿಸಿಕೊಳ್ಳಿ: ದೇವರಕಲ್‌

ಉಚಿತ ತರಬೇತಿ ಕೇಂದ್ರ ಉದ್ಘಾಟನೆ ನವೆಂಬರ್ 30ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಆರ್.ವಿ.ವಿದ್ಯಾ ಸಂಸ್ಥೆಯಲ್ಲಿ ದಿ. ವೀರಭದ್ರಪ್ಪ ದೇವರಕಲ್ ಪ್ರತಿಷ್ಠಾನದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ 45 ದಿನಗಳ ತರಬೇತಿ ನೀಡಲಾಗುವುದು ಎಂದು ಕಾರ್ಯದರ್ಶಿ ಎಸ್‌.ಎಸ್‌.ದೇವರಕಲ್‌ ಹೇಳಿದರು.

ಬ್ಯಾಂಕಿಂಗ್‌, ರೈಲ್ವೆ, ನೀಟ್‌, ಎಫ್‌ಡಿಸಿ, ಎಫ್‌ಡಿಎ ಸೇರಿದಂತೆ ಕೆಪಿಎಸ್‌ಸಿ, ಯುಪಿಸಿಎಸ್‌ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುವುದು. ಇದು ನಿರಂತರವಾಗಿ ನಡೆಯಲಿದೆ. ನವೆಂಬರ್ 30ರಂದು ತರಬೇತಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಭಾಗಕ್ಕೆ 371 (ಜೆ) ವರದಾನವಾಗಿದೆ. ಆದರೆ, ಸೂಕ್ತ ಅಭ್ಯರ್ಥಿಗಳು ಸಿಗದೆ ಬ್ಯಾಕ್‌ಲಾಗ್‌ ಹುದ್ದೆಗಳು ಉಳಿಯುತ್ತಿವೆ. ಈ ನಿಟ್ಟಿನಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಈ ಭಾಗದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು. ಈಗಾಗಲೇ ಒಂದು ವರ್ಷದಿಂದ ಇಚ್ಛೆಯುಳ್ಳವರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನವೆಂಬರ್ 30ರಂದು ಬೆಳಿಗ್ಗೆ 11.30ಕ್ಕೆ ತರಬೇತಿ ಕಾರ್ಯಕ್ರಮವನ್ನು ಹೆಡಗಿಮದ್ರ ಶಾಂತಶಿವಯೋಗಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ನರೇಂದ್ರ ಬಡಶೇಶಿ, ಖಾಜಾ ಖಲೀಲ ಉಲ್ಲಾ, ಪ್ರೊ. ಜಯಪ್ರಕಾಶ, ಸಲಹೆಗಾರರಾಗಿ ಡಾ.ಚಂದ್ರಕಾಂತ ಪಾಟೀಲ, ಶಂಕರಗೌಡ ಹೊಸಮನಿ, ಮುಖ್ಯ ಅತಿಥಿಯಾಗಿ ಉಪನ್ಯಾಸಕಿ ಜ್ಯೋತಿಲತಾ ತಡಿಬಿಡಿಮಠ ಆಗಮಿಸುವರು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷೆ ಕಮಲಾ ನಾಗಭೂಷಣ್‌ ದೇವರಕಲ್ ಮಾತನಾಡಿ, ಕಳೆದ 12 ವರ್ಷಗಳಿಂದ ಆರ್‌.ವಿ. ವಿದ್ಯಾಸಂಸ್ಥೆ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿದೆ. ಈಗ ನಮ್ಮ ಭಾಗದವರು ಸರ್ಕಾರಿ ಉದ್ಯೋಗದಲ್ಲಿ ಸೇರಲು ಉತ್ತಮ ತರಬೇತಿ ಅವಶ್ಯವಿದೆ. ಇದನ್ನು ನಮ್ಮ ಸಂಸ್ಥೆಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಪ್ರಾಚಾರ್ಯ ಸುರೇಶ್ ಹವಾಲ್ದಾರ್ ಮಾತನಾಡಿ, ದಿ.ವೀರಭದ್ರಪ್ಪ ದೇವರಕಲ್‌ ಅವರ ಹೆಸರಿನಲ್ಲಿ ಉಚಿತ ವಾಚನಾಲಯ ತೆರೆಯಲಾಗಿದೆ. ವಿದೇಶಗಳಲ್ಲಿ ಉದ್ಯೋಗ ಪಡೆಯುವ ಪುಸ್ತಕಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 96867 70005 ಸಂಪರ್ಕಿಸುವಂತೆ ತಿಳಿಸಿದರು.

ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಸಿ.ಎಂ.ನೀಲಂಗಿ, ಎಸ್‌.ಎಸ್‌.ಪಾಟೀಲ, ಡಾ. ಸಂಕೀರ್ಣ, ವೀರು ದೇವರಕಲ್, ಬಸನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು