ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ

ಯಾದಗಿರಿ, ಗುರುಮಠಕಲ್; ಎರಡನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್?
Last Updated 1 ಏಪ್ರಿಲ್ 2023, 14:46 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಶಹಾಪುರ, ಸುರಪುರ ಕಾಂಗ್ರೆಸ್‌ ಟಿಕೆಟ್ ಘೋಷಣೆ ಮಾಡಲಾಗಿದ್ದು, ಯಾದಗಿರಿ, ಗುರುಮಠಕಲ್ ಕ್ಷೇತ್ರಗಳಲ್ಲಿ ಇನ್ನೂ ಅಂತಿಮವಾಗಿಲ್ಲ.

ಶಹಾಪುರ ಮತಕ್ಷೇತ್ರಕ್ಕೆ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸುರಪುರ ಕ್ಷೇತ್ರಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೆಸರನ್ನು ಅಂತಿಮಗೊಳಿಸಿದೆ. ಉಳಿದ ಎರಡು ಕ್ಷೇತ್ರಗಳು ಜಿದ್ದಾಜಿದ್ದಿನಿಂದ ಕೂಡಿದ್ದು ಅಭ್ಯರ್ಥಿಗಳನ್ನು ಅಳೆದು ತೂಗಿ ಅಂತಿಮ ಮಾಡಲಾಗುತ್ತಿದೆ. ಎರಡನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಕುತೂಹಕಾರಿಯಾಗಿದೆ.

ಚಿಂಚನಸೂರು ಕಾಂಗ್ರೆಸ್‌ ಸೇರ್ಪಡೆ: ಬಾಬುರಾವ ಚಿಂಚನಸೂರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಗುರುಮಠಕಲ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಅಸಮಾಧಾನ ಉಂಟುಮಾಡಿದೆ. ಗುರುಮಠಕಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿ ಎಂಟು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಏಕಾಏಕಿ ಚಿಂಚನಸೂರು ಪಕ್ಷ ಸೇರ್ಪಡೆಯಿಂದ ಆಕಾಂಕ್ಷಿಗಳು ಈಗ ಕಂಗಲಾಗುವ ಸ್ಥಿತಿ ಬಂದಿದೆ.

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮತ್ತು ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಾಬುರಾವ ಕಾಂಗ್ರೆಸ್‌ ಸೇರಿದ್ದು, ಟಿಕೆಟ್‌ ಖಚಿತಪಡಿಸಿಕೊಂಡೇ ‘ಕೈ’ ಸೇರ್ಪಡೆಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರಿಂದ 8 ಜನ ಆಕಾಂಕ್ಷಿಗಳು ಕೈಗೆ ಬಂದು ತುತ್ತು ಬಾಯಿಗೆ ಬಂದಿಲ್ಲ ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ, ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದ ಟಿಕೆಟ್‌ ಆಕಾಂಕ್ಷಿಗಳು, ಈಚೆಗೆ ಸೈದಾಪುರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಉತ್ಸಾಹ ತೋರದೇ ಅಷ್ಟಕಷ್ಟೆ ಭಾಗಿಯಾಗಿದ್ದರು ಎನ್ನಲಾಗಿದೆ.

ಇನ್ನೂ ಯಾದಗಿರಿ ಮತಕ್ಷೇತ್ರದಲ್ಲೂ 18 ಜನ ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್‌ ಎನ್ನುವ ಆತಂಕದಲ್ಲಿ ಇದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗಳನ್ನು ಗ್ರಾಮಗಳಲ್ಲಿ ವಿತರಿಸಿ ತಮ್ಮ ಸ್ಪರ್ಧೆಯನ್ನು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.

ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಬಿಜೆಪಿ ಬಿಟ್ಟು, ಕಾಂಗ್ರೆಸ್‌ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರೇ ಹೇಳುತ್ತಿದ್ದಾರೆ. ಅಲ್ಲದೇ ಇವರ ಪುತ್ರಿ ಡಾ.ಅನುರಾಗ ಮಾಲಕರೆಡ್ಡಿ ಕಾಂಗ್ರೆಸ್‌ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು, ಮಾಲಕರೆಡ್ಡಿ ಕಾಂಗ್ರೆಸ್‌ಗೆ ಬಂದರೆ ತಮಗೆ ಟಿಕೆಟ್‌ ಕೈ ತಪ್ಪಲಿದೆ ಎಂದು ಒಳಗೊಳಗೆ ಆತಂಕ ಪಡುತ್ತಿದ್ದಾರೆ.

ಬಿಜೆಪಿಯಲ್ಲಿ ಇನ್ನೂ ಟಿಕೆಟ್‌ ಘೋಷಣೆ ಮಾಡಿಲ್ಲ. ಇದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಯಾದಗಿರಿ, ಗುರುಮಠಕಲ್‌, ಶಹಾಪುರ ಮತಕ್ಷೇತ್ರದಲ್ಲಿ ಮೂವರಿಗಿಂತ ಹೆಚ್ಚು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಸುರಪುರ ಕ್ಷೇತ್ರ ಪರಿಶಿಷ್ಟ ಪ‍ಂಗಡಕ್ಕೆ ಮೀಸಲಾಗಿದ್ದರಿಂದ ಹಾಲಿ ಶಾಸಕ ನರಸಿಂಹ ನಾಯಕ (ರಾಜೂಗೌಡ) ಒಬ್ಬರೇ ಆಕಾಂಕ್ಷಿಗಳಾಗಿದ್ದಾರೆ. ಶುಕ್ರವಾರ ನಡೆದ ಬಿಜೆಪಿ ಅಭಿಪ್ರಾಯ ಸಂಗ್ರಹದಲ್ಲಿ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಹಾಲಿ ಶಾಸಕರಿರುವ ಯಾದಗಿರಿ, ಸುರಪುರ ಮತಕ್ಷೇತ್ರಗಳಿಗೆ ಅವರೇ ಅಭ್ಯರ್ಥಿಗಳು ಎನ್ನಲಾಗುತ್ತಿದ್ದು, ಗುರುಮಠಕಲ್‌, ಶಹಾಪುರದಲ್ಲಿ ಗೊಂದಲ ನಿರ್ಮಾಣವಾಗಿದೆ. ಇಲ್ಲಿ ಯಾರಿಗೆ ಟಿಕೆಟ್ ಘೋಷಣೆ ಮಾಡಿದರೂ ಅಸಮಾಧಾನ ಭುಗಿಲೇಳುವ ಆತಂಕ ಪಕ್ಷಕ್ಕಿದೆ.

ಜೆಡಿಎಸ್‌ ಗುರುಮಠಕಲ್‌ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಉಳಿದ ಮೂರು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಎನ್ನುವುದು ನಿರ್ಧಾರವಾಗಿಲ್ಲ. ಈಚೆಗೆ ಪಂಚರತ್ನ ನಡೆದಾಗ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತಿದೆ ಎಂದು ಟಿಕೆಟ್‌ ಆಕಾಂಕ್ಷಿಗಳು ಕಾದಿದ್ದರು. ಆದರೆ, ಜೆಡಿಎಸ್‌ ಕಾದು ನೋಡುವ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ.

***

ಯಾದಗಿರಿ, ಗುರುಮಠಕಲ್‌ ‘ಕೈ’ ಟಿಕೆಟ್ ಆಕಾಂಕ್ಷಿಗಳು

ಯಾದಗಿರಿ ಮತಕ್ಷೇತ್ರ: ಚನ್ನಾರೆಡ್ಡಿ ಪಾಟೀಲ ತುನ್ನೂರ, ಮರಿಗೌಡ ಹುಲ್ಕಲ್, ಡಾ.ಭೀಮಣ್ಣ ಮೇಟಿ,
ಶರಣಪ್ಪ ಸಲಾದಪುರ, ಡಾ.ಎಸ್‌.ಬಿ.ಕಾಮರೆಡ್ಡಿ ಬೆಂಡೆಬೆಂಬಳಿ, ಬಸರೆಡ್ಡಿ ಅನಪುರ, ಮಾಣಿಕರೆಡ್ಡಿ ಕುರಕುಂದಿ, ಶ್ರೀನಿವಾಸರೆಡ್ಡಿ ಕಂದಕೂರ, ಸತೀಶ ಕಂದಕೂರ, ಎ.ಸಿ.ಕಾಡ್ಲೂರ, ಡಾ.ಅನುರಾಗ ಮಾಲಕರಡ್ಡಿ, ಬಸ್ಸುಗೌಡ ಬಿಳ್ಹಾರ, ನಿಖಿಲ್ ಶಂಕರ್‌, ವಿನೋದ ಪಾಟೀಲ, ರಾಯಪ್ಪಗೌಡ ದರ್ಶನಾಪುರ, ಗುಲಾಮುಸ್ ಸಕ್ಲೇನ್, ಜಹೀರುದ್ದೀನ್, ಇಬ್ರಾಹಿಂ ಸಿರವಾರ.

ಗುರುಮಠಕಲ್ ಮತಕ್ಷೇತ್ರ: ಶರಣಪ್ಪ ಮಾನೇಗಾರ, ಶ್ರೇಣಿಕುಮಾರ ದೋಕಾ, ಬಸರೆಡ್ಡಿ ಅನಪುರ, ಸಾಯಿಬಣ್ಣ ಬೋರಬಂಡಾ, ತಿಪ್ಪಣ್ಣ ಕಮಕನೂರ, ನಿತ್ಯಾನಂದ ಪೂಜಾರಿ, ಡಾ.ಉದಯಕುಮಾರ, ಡಾ.ಯೋಗೇಶ ಬೆಸ್ತರ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT