ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮೂಲಸೌಕರ್ಯ ವಂಚಿತ ನೀಲಹಳ್ಳಿ ಗ್ರಾಮ, ಚರಂಡಿ, ಕುಡಿಯುವ ನೀರಿನ ಸಮಸ್ಯೆ

Last Updated 14 ಜುಲೈ 2021, 19:30 IST
ಅಕ್ಷರ ಗಾತ್ರ

ನೀಲಹಳ್ಳಿ (ಸೈದಾಪುರ): ಗ್ರಾಮದಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇತರೆ ಮೂಲಸೌಕರ್ಯಗಳ ಕೊರತೆ ಹೆಚ್ಚಿದ್ದು, ಇವು ನಿತ್ಯ ಗ್ರಾಮಸ್ಥರನ್ನು ಹೈರಾಣಾಗಿಸಿವೆ.

ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಇದು ಗ್ರಾಮಸ್ಥರಲ್ಲಿ ಮತ್ತೊಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ನೀಲಹಳ್ಳಿ ಗ್ರಾಮವು ಸುಮಾರು 2 ಸಾವಿರ ಜನಸಂಖ್ಯೆಯನ್ನು ಒಳಗೊಂಡಿದೆ. ಗ್ರಾಮದ ಸಾಹೇಬ ಹುಸೇನ್ ಕಂಬಾರ ಮನೆಯಿಂದ ವಗ್ಗಮಾಯಿ ದೇವಸ್ಥಾನದವರೆಗೆ ಸಿಸಿ ರಸ್ತೆ ಇಲ್ಲದೇ ಗ್ರಾಮಸ್ಥರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ.

ಈ ಗ್ರಾಮದ ಹಲವು ಕಡೆ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಲಾದ ಚರಂಡಿಗಳ ತಡೆಗೋಡೆಗಳು ಕುಸಿದು ಬಿದ್ದು ಚರಂಡಿಯಲ್ಲಿ ಸರಾಗವಾಗಿ ಸಾಗಬೇಕಾದ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅದರಲ್ಲಿಯೇ ದ್ವಿಚಕ್ರ, ತ್ರಿಚಕ್ರ ವಾಹನಗಳು ಸೇರಿದಂತೆ ವಿವಿಧ ರೀತಿಯ ದೊಡ್ಡ ವಾಹನಗಳು ಸಂಚರಿಸುತ್ತಿವೆ. ಇದರಿಂದ ರಸ್ತೆಯಲ್ಲಿ ದೊಡ್ಡದಾದ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ವಾಹನ ಸವಾರರು, ಮಕ್ಕಳು, ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ.

ಹಾಳಾದ ನೀರಿನ ಘಟಕ: ಗ್ರಾಮದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವು ಹಾಳಾಗಿ ಸುಮಾರು ಒಂದು ವರ್ಷ ಕಳೆದರೂ ಕೂಡ ಅದನ್ನು ದುರಸ್ತಿಗೊಳಿಸದೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 2 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಕೇವಲ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದೆ. ಅದು ಕೂಡ ಹಾಳಾಗಿರುವುದರಿಂದ ಗ್ರಾಮದ ಜನರಿಗೆ ಕೊಳವೆ ಬಾವಿಗಳ ನೀರೇ ಆಸರೆಯಾಗಿದೆ.

ಕೊಳಾಯಿ ನೀರು ಬಿಡುವ ಪಂಪ್ ಆಪರೇಟರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಎರಡು– ಮೂರು ದಿನಗಳಿಗೊಮ್ಮೆ ಮೋಟಾರ್ ಸುಟ್ಟಿದೆ. ವಿದ್ಯುತ್ ಇಲ್ಲ ಎಂಬ ನೆಪಗಳನ್ನು ಹೇಳುತ್ತಾರೆ ಎಂದು ಸಾರ್ವಜನಿಕರ ಆರೋಪ ಮಾಡುತ್ತಾರೆ.

ಅಭಿವೃದ್ಧಿ ಕಾಣದ ಕೆರೆ: ನೀಲಹಳ್ಳಿ ಗ್ರಾಮಕ್ಕೆ ಅಂಟಿಕೊಂಡಿರುವ ಕೆರೆಯು ಅಭಿವೃದ್ಧಿ ಕಾಣದೆ ಪಾಳು ಬಿದ್ದಂತಾಗಿದೆ. ಕೆರೆಯ ದಡದಲ್ಲಿಯೇ ರೈತರು ತಮ್ಮ ಜಾನುವಾರಗಳ ಸಗಣಿ, ಕಸಕಡ್ಡಿ ಹಾಗೂ ಮನೆಯ ತ್ಯಾಜ್ಯವನ್ನು ತಂದು ಸುರಿಯುತ್ತಾರೆ. ಇದರಿಂದಾಗಿ ಕೆರೆಯ ದಡವು ತಿಪ್ಪೆಗುಂಡಿಯಂತಾಗಿದೆ.

ಬೇಸಿಗೆಯಲ್ಲಿ ಈ ಕೆರೆಯ ನೀರು ಅನೇಕ ರೈತರ ಭತ್ತದ ಗದ್ದೆಗಳಿಗೆ ಆಸರೆಯಾಗಿದೆ. ಸರ್ಕಾರ ಇದನ್ನು ಸ್ವಚ್ಛಗೊಳಿಸಿ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

*
ನಮ್ಮ ಊರಾಗ ಸರಿಯಾದ ಸಿಸಿ ರಸ್ತೆ ಮತ್ತು ಚರಂಡಿಗಳಿಲ್ಲ. ಬ್ಯಾಸಗಿ ಮತ್ತು ಮಳೆಗಾಲದಾಗ ಬಚ್ಚಲ ನೀರು ಮತ್ತು ಮಳೆ ನೀರು ಸೇರಿ ರಸ್ತೆಯ ಮೇಲೆ ಹರಿದು ಕೆಸರು ಗದ್ದೆಯಾಗುತ್ತದೆ. ಇದರಲ್ಲಿ ವೃದ್ಧರು, ಮಕ್ಕಳು ನಡೆದುಕೊಂಡು ಹೋಗಲು ಬಹಳ ಕಷ್ಟ ಪಡುವಂತಾಗಿದೆ.
–ಬನ್ನಮ್ಮ ದಂಡಪ್ಪನೋರ್, ನೀಲಹಳ್ಳಿ

*
ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದ ಜನಪ್ರತಿನಿಧಿಗಳು ಇದ್ದರು ಇಲ್ಲದಂತಾಗಿದೆ. ಸಮಸ್ಯೆಗೆ ಪರಿಹಾರ ನೀಡದ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡಿರುವುದು ಶೋಚನೀಯ ಸಂಗತಿಯಾಗಿದೆ.

–ಬಸಲಿಂಗಪ್ಪ ನಾಯಕ ನೀಲಹಳ್ಳಿ ಗ್ರಾಮಸ್ಥ

*
ಗ್ರಾಮದಲ್ಲಿ ಮೂಲಸೌಕರ್ಯ ಒದಗಿಸಿಕೊಡುವುದರ ಜೊತೆಗೆ, ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು.
–ರಾಜು ಮೇಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT