ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ

ಗ್ರಾಮದಲ್ಲಿಲ್ಲ ಮಹಿಳಾ ಶೌಚಾಲಯ; ಪ್ರಯಾಣಕ್ಕೆ ಖಾಸಗಿ ವಾಹನಗಳ ಅವಲಂಬನೆ
Last Updated 22 ಫೆಬ್ರುವರಿ 2021, 16:38 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಕಚಕನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕನಳ್ಳಿ ಗ್ರಾಮ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದೆ. ಜನರು ಪರಿಸ್ಥಿತಿಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಲೀನ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗಿದೆ.

ತಗ್ಗುಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಅಧಿಕವಾಗಿ ಸಾಂಕ್ರಾಮಿಕ ರೋಗಗಳ ವಾಹಕಗಳಾಗಿವೆ. ಮಹಿಳಾ ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರ ಪಾಡು ದೇವರೇ ಬಲ್ಲ. ರಾತ್ರಿ ಸಮಯದಲ್ಲೋ ಅಥವಾ ಮುಳ್ಳುಕಂಟೆಯ ಮರೆಯಲ್ಲೋ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ.‌

ವೈಯಕ್ತಿಕ ಶೌಚಾಲಯಗಳ ಸಂಖ್ಯೆಯೂ ಕಡಿಮೆ. ರಸ್ತೆಗಳಲ್ಲಿ, ಸಂದಿ ಗೊಂದಿಗಳಲ್ಲಿ ಮಲ ಮೂತ್ರದ ಗಬ್ಬು ವಾಸನೆ ಇದೆ. ಎಲ್ಲೆಂದರಲ್ಲಿ ಕಸದ ತಿಪ್ಪೆಗಳು ಬೇರೆ. ಗ್ರಾಮ ಪ್ರವೇಶ ಮಾಡಬೇಕಾದರೆ ಮೂಗು ಮುಚ್ಚಿಕೊಂಡು ಬರಬೇಕು. ಸಿ.ಸಿ. ರಸ್ತೆಗಳು ಇಲ್ಲ. ಬಸ್‍ ನಿಲ್ದಾಣ ಇಲ್ಲ. ಸಾರಿಗೆ ವ್ಯವಸ್ಥೆ ಅಷ್ಟಕ್ಕಷ್ಟೆ. ಖಾಸಗಿ ವಾಹನ ಇಲ್ಲವೇ ಸ್ವಂತ ವಾಹನಗಳನ್ನೇ ಇಲ್ಲಿನ ಜನ ಅವಲಂಬಿಸಿದ್ದಾರೆ.

ಹುಣಸಗಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಿದ್ದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಚಿಕಿತ್ಸೆಗೆ 12 ಕಿ.ಮೀ ಅಂತರದಲ್ಲಿರುವ ಪೇಠ ಅಮ್ಮಾಪುರಕ್ಕೆ ಬರಬೇಕು. ಜಾನುವಾರುಗಳ ಸಂಖ್ಯೆಯೂ ಅಧಿಕವಾಗಿದ್ದು ಚಿಕಿತ್ಸೆಗೆ 7 ಕಿ.ಮೀ ದೂರದ ಹೆಬ್ಬಾಳಕ್ಕೆ ಹೋಗಬೇಕು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 5 ಕೊಳವೆಬಾವಿಗಳು ಇವೆ. ಅದರಲ್ಲಿ 2-3 ದುರಸ್ತಿಯಲ್ಲಿರುತ್ತವೆ. 3 ತೆರೆದ ಬಾವಿಗಳು ಇದ್ದರೂ ಬಳಕೆ ಇಲ್ಲದಿರುವುದರಿಂದ ನೀರು ಕೆಟ್ಟಿವೆ. ಕಿರು ನೀರು ಸರಬರಾಜು ಯೋಜನೆ ಅಳವಡಿಸಿ ಮನೆ ಮನೆಗೆ ನಲ್ಲಿ ಜೋಡಣೆ ಮಾಡುವ ಬೇಡಿಕೆ ಇದೆ.

ಟಿ.ಸಿ. ಒಂದೇ ಇರುವುದರಿಂದ ವಿದ್ಯುತ್ ಸಮಸ್ಯೆ ಇದೆ. ಇನ್ನೊಂದು ಟಿ.ಸಿ.ಯ ಅಗತ್ಯ ಇದೆ. ಕಾಲುವೆ ಕೊನೆ ಭಾಗಕ್ಕೆ ಬರುವುದರಿಂದ ಜಮೀನುಗಳಿಗೆ ನೀರು ಲಭ್ಯ ಇಲ್ಲ. ಹಳ್ಳಗಳಿಗೆ ಪಂಪ್‍ಸೆಟ್ ಅಳವಡಿಸಿ ನೀರಾವರಿ ಮಾಡಿಕೊಂಡಿದ್ದಾರೆ.

ಕೆಲಸವಿಲ್ಲದೆ ಶೇ 30 ಕಾರ್ಮಿಕರು ಗುಳೆ ಹೋಗುವುದು ಸಾಮಾನ್ಯ. 8ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಹಾಜರಾತಿ ಚೆನ್ನಾಗಿದೆ. ಶಿಕ್ಷಕರ ಕೊರತೆ ಇದೆ. ಪ್ರೌಢಶಾಲೆಗೆ 3 ಕಿ.ಮೀ ದೂರದ ಬಾಚಿಮಟ್ಟಿಗೆ ಹೋಗಬೇಕು. ಬಸ್ ಸೌಕರ್ಯ ಇಲ್ಲದಿರುವುದರಿಂದ ಮಕ್ಕಳು ನಡೆದುಕೊಂಡೇ ಹೋಗುತ್ತಾರೆ. ಮುಜರಾಯಿ ಇಲಾಖೆಗೆ ಒಳಪಡುವ ಸುಪ್ರಸಿದ್ಧ ರೇಣುಕಾದೇವಿ ದೇವಸ್ಥಾನ ಇದೆ. ರೇಣುಕಾದೇವಿ ಜಾತ್ರೆ ಮತ್ತು ಮೋಹರಂನ್ನು ಗ್ರಾಮಸ್ಥರು ಸೌಹಾರ್ದತೆಯಿಂದ ಅಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT