ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಜಾಗ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚನೆ

ಜಿಲ್ಲೆಯ 509 ಗ್ರಾಮಗಳಲ್ಲಿ 350 ಸಾರ್ವಜನಿಕ ರುದ್ರಭೂಮಿ ಇವೆ: ಡಿಸಿ ಡಾ.ರಾಗಪ್ರಿಯಾ
Last Updated 15 ಜೂನ್ 2021, 15:28 IST
ಅಕ್ಷರ ಗಾತ್ರ

ಯಾದಗಿರಿ: ಸ್ಮಶಾನ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ನಿರ್ಮಾಣಕ್ಕೆ ಜಮೀನು ಕೋರಿ ಬರುವ ಪ್ರಸ್ತಾವನೆಗಳಿಗೆ ತ್ವರಿತವಾಗಿ ಜಮೀನು ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 509 ಗ್ರಾಮಗಳಿವೆ. 350 ಸಾರ್ವಜನಿಕ ರುದ್ರಭೂಮಿಗಳಿವೆ. ಇನ್ನು ರುದ್ರಭೂಮಿ ಬಾಕಿ ಇರುವ ಗ್ರಾಮಗಳಿಗೆ ಸರ್ಕಾರಿ ಜಮೀನು ಗುರುತಿಸಿ ಮಂಜೂರು ಮಾಡಿ ಸ್ಮಶಾನಕ್ಕೆ ತೆರಳಲು ರಸ್ತೆಗಳು ಇಲ್ಲದಿದ್ದರೆ ಅಂಥ ಗ್ರಾಮಗಳನ್ನು ಗುರುತಿಸಿ ರಸ್ತೆ ನಿರ್ಮಿಸಲು ವರದಿ ನೀಡಿ, ಸರ್ವೆ ಇಲಾಖೆಗೆ ಬಂದ ಅರ್ಜಿಗಳನ್ನು ವಿಳಂಬ ಮಾಡದೆ ತುರ್ತಾಗಿ ಅಳತೆ ಕಾರ್ಯ ಮುಗಿಸಬೇಕು. ರೈತ ಸಂಪರ್ಕ ಕೇಂದ್ರಗಳ ನಿವೇಶನಗಳ ಮಂಜೂರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಆಯಾ ಇಲಾಖೆಗಳು ಜಮೀನು ಕೋರಿ ಕಂದಾಯ ಇಲಾಖೆಗೆ ಬೇಡಿಕೆ ಸಲ್ಲಿಸುತ್ತಿವೆ. ಇವುಗಳಿಗೆ ಜಮೀನುಗಳನ್ನು ತ್ವರಿತಗತಿಯಲ್ಲಿ ಆಯಾ ತಹಶೀಲ್ದಾರ್‌ಗಳು ಗುರುತಿಸಿ ಮಂಜೂರಾತಿಗೆ ಸಲ್ಲಿಸಬೇಕು. ಜಮೀನು ಮಂಜೂರಾತಿ ವಿಳಂಬವಾದರೆ ಹಾಸ್ಟೆಲ್ ನಿರ್ಮಾಣವೂ ವಿಳಂಬವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಲಿದೆ. ಆದ್ದರಿಂದ ಹಾಸ್ಟೆಲ್ ಯೋಜನೆಗಳಿಗೆ ತ್ವರಿತಗತಿಯಲ್ಲಿ ಭೂ ಮಂಜೂರು ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಭೂ ಮಂಜೂರಾತಿ ಬಾಕಿ ಇರುವ ಪ್ರಕರಣಗಳಿಗೆ ಮುಂದಿನ 20 ದಿನಗಳಲ್ಲಿಜಮೀನು ಗುರುತಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಸಂಬಂಧಪಟ್ಟ ಇಲಾಖಾಧಿಕಾರಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಭೂ ಮಂಜೂರಾತಿಗೊಳಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಮಾತನಾಡಿ, ಆಯಾ ಇಲಾಖೆಗಳ ಹೆಸರಿನಲ್ಲಿ ಹಾಸ್ಟೆಲ್ ಜಮೀನಗಳನ್ನು ಪಹಣಿಯನ್ನು ತ್ವರಿತವಾಗಿ ಮಾಡಬೇಕು. ಸಿಂಧುತ್ವ ಪ್ರಮಾಣ ಪತ್ರಗಳನ್ನು ವಿಳಂಬವಿಲ್ಲದೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಪಡಿತರ ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಗೋದಾಮಿನಿಂದ ಆಹಾರ ಸಾಮಾಗ್ರಿ ಎತ್ತುವಳಿಯಾದ ನಂತರ ಅವುಗಳು ನ್ಯಾಯ ಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ವಿತರಣೆಯಾಗುತ್ತಿರುವ ಬಗ್ಗೆ ಮೇಲುಸ್ತುವಾರಿ ವಹಿಸಬೇಕು ಎಂದು ತಿಳಿಸಿದರು.

ಈ ವೇಳೆ ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಕೃಷಿ ಉಪನಿರ್ದೇಶಕ ಡಾ.ಬಾಲರಾಜ್ ರಂಗರಾವ್, ಯಾದಗಿರಿ ತಹಶೀಲ್ದಾರ್‌ ಚೆನ್ನಮಲ್ಲಪ್ಪ ಘಂಟಿ, ಶಹಾಪುರ ತಹಶೀಲ್ದಾರ ಜಗನ್ನಾಥರೆಡ್ಡಿ, ವಡಗೇರಾ ತಹಶೀಲ್ದಾರ ಸುರೇಶ ಅಂಗಲಗಿ, ಹುಣಸಗಿ ತಹಶೀಲ್ದಾರ್‌ ಮಹಾದೇವಪ್ಪಗೌಡ ಬಿರಾದಾರ, ವಿವಿಧ ಇಲಾಖಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT