ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಯಕರ್ತರೇ ಪಕ್ಷದ ಜೀವಾಳ: ಶಾಸಕ ಶರಣಗೌಡ ಕಂದಕೂರ

ಜೆಡಿಎಸ್ ಬೂತ್ ಸಮಿತಿ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ
Published : 9 ಸೆಪ್ಟೆಂಬರ್ 2024, 15:19 IST
Last Updated : 9 ಸೆಪ್ಟೆಂಬರ್ 2024, 15:19 IST
ಫಾಲೋ ಮಾಡಿ
Comments

ಯಾದಗಿರಿ: ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದ ಅಭಿವೃದ್ಧಿಯ ಕನಸಿನೊಂದಿಗೆ ಜೆಡಿಎಸ್ ಸ್ಥಾಪಿಸಿದ್ದಾರೆ. ಹಲವು ರಾಜಕೀಯ ಏಳು ಬೀಳುಗಳಲ್ಲಿಯೂ ಪಕ್ಷವು ಇಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ನಿಲ್ಲಲು ಕಾರ್ಯಕರ್ತರ ಶ್ರಮ ಕಾರಣ. ಕಾರ್ಯಕರ್ತರೇ ಜೆಡಿಎಸ್ ಜೀವಾಳ’ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ನಗರದ ಎಸ್.ಡಿ.ಎನ್. ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಮತ್ತು ಬೂತ್ ಸಮಿತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷ ರಾಜ್ಯಕ್ಕೆ ಹಲವು ಸಿಎಂ, ಪ್ರಧಾನಮಂತ್ರಿ ಜತೆಗೆ ಹಲವು ಮುತ್ಸದ್ಧಿ ನಾಯಕರನ್ನು ನೀಡಿದೆ ಮತ್ತು ಪಕ್ಷ ಅಧಿಕಾರದಲ್ಲಿದ್ದಾಗ ಪ್ರಮುಖ ಯೋಜನೆಗಳ ಅನುಷ್ಟಾನವಾಗಿದೆ’ ಎಂದರು.

‘ಕಾಂಗ್ರೆಸ್, ಬಿಜೆಪಿಯಲ್ಲೂ ಎಚ್.ಡಿ.ದೇವೇಗೌಡರ ಗರಡಿಯಲ್ಲಿ ಬೆಳೆದ ಹಲ ನಾಯಕರಿದ್ದಾರೆ. ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರನ್ನು ಜೆಡಿಎಸ್ ಎಂದೂ ಕೈಬಿಟ್ಟಿಲ್ಲ. ಅದಕ್ಕೆ ನಮ್ಮ ಕುಟುಂಬವೇ ಸಾಕ್ಷಿ’ ಎಂದರು.

ದೇವೆಗೌಡರಿಗೆ ಸದ್ಯ 93 ವರ್ಷ ವಯಸ್ಸು. ಪಕ್ಷದ ಚಟುವಟಿಕೆಯಲ್ಲಿ ಇನ್ನೂ ಕ್ರಿಯಾಶೀಲರಾಗಿದ್ದಾರೆ. ಅವರು ನಮಗೆಲ್ಲ ಪ್ರೇರಣೆ. ರಾಜಕೀಯದಲ್ಲಿ ತಾಳ್ಮೆ ಮತ್ತು ಪಕ್ಷನಿಷ್ಟೆ ಮುಖ್ಯ. 2019ರಲ್ಲಿ ಆಪರೇಶನ್ ಕಮಲದ ಮೂಲಕ ನಮ್ಮನ್ನು ಸೆಳೆಯುವ ಯತ್ನ ನಡೆದಿತ್ತು. ಹಣ, ಅಧಿಕಾರದ ಆಸೆ ತೋರಿದ್ದರು. ಆದರೆ ನಾವು ಕುಮಾರಸ್ವಾಮಿಯವರ ನಾಯಕತ್ವಕ್ಕೆ ಬದ್ದರಾಗಿದ್ದೇವೆ. ಕಾರ್ಯಕರ್ತರು ಪ್ರಾಮಾಣಿಕವಾಗಿ ಸಂಘಟನೆ ಮಾಡಿದರೆ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡೋಣ’ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಭಿಯಾನದ ಜಿಲ್ಲಾ ಉಸ್ತುವಾರಿ ಸುನಿತಾ ದೇವಾನಂದ ಚವಾಣ ಮಾತನಾಡಿ, ‘ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಸಿದೆ. ಹಿರಿಯರ ಮಾರ್ಗದರ್ಶನಲ್ಲಿ ಜನಪರ ಕಾರ್ಯಗಳನ್ನು ಮಾಡುತ್ತಾ ಪಕ್ಷ ಸಂಘಟಿಸೋಣ. ಕಂದಕೂರ ಅವರು ಸ್ಥಳೀಯವಾಗಿ ಎಲ್ಲಾ ಸಮುದಾಯಗಳಿಗೂ ಸಮನ ಅವಕಾಶ ಮತ್ತು ಸ್ಥಾನಮಾನಗಳನ್ನು ನೀಡಿದ್ದಾರೆ. ಶಾಂತಿ ಮತ್ತು ಸಾಮರಸ್ಯಕ್ಕೆ ಅವರು ಶ್ರಮಿಸುತ್ತಿದ್ದಾರೆ. ಕಾರ್ಯಕರ್ತರು ಪಕ್ಷ ಸಂಘಟನೆ ಮತ್ತು ಸದಸ್ಯತ್ವ ನೋಂದಣಿಗೆ ಶ್ರಮವಹಿಸಿ’ ಎಂದು ಕರೆ ನೀಡಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಮಹಮ್ಮದ್ ಅನ್ಸಾರುದ್ದೀನ್ ಅನಾರಿ, ಶಾಂತು ಜಾಧವ, ನಾಗರತ್ನಾ ಅನಪುರ, ಬನದಪ್ಪ ಅರಳಿ, ಕೃಷ್ಣಾ ಮಂಗಿನಾಳ, ಶ್ರವಣಕುಮಾರ ನಾಯಕ, ಬಾಲಮಿತ್ರ, ವಿಠಲ್ ವಗ್ಗಿ, ಪ್ರಕಾಶ ನಿರೇಟಿ, ಸುಭಾಶ್ಚಂದ್ರ ಕಟಕಟಿ, ವಿಶ್ವನಾಥ ಶಿರವಾರ, ಮಲ್ಲಿಕಾರ್ಜುನ ಅರುಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT