ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪಾಲಿಸಿ ರಕ್ಷಣೆ ಪಡೆಯಿರಿ

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಅಭಿಮತ
Last Updated 20 ಡಿಸೆಂಬರ್ 2018, 15:16 IST
ಅಕ್ಷರ ಗಾತ್ರ

ಯಾದಗಿರಿ: ‘ಕಾನೂನು ಪಾಲನೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಹೇಳಿದರು.

ನಗರದ ಆರ್.ವಿ ಪ್ರೌಢಶಾಲೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆರ್.ವಿ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಪೊಲೀಸ್ ದೂರು ಪ್ರಾಧಿಕಾರ ಮತ್ತು ಮೂಲ ಕಾನೂನಿನ ಜ್ಞಾನ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾನೂನುಗಳು ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಹಾಗೂ ಧರ್ಮದ ತಳಹದಿಯ ಮೇಲೆ ನಿಂತಿವೆ. ದೇಶದ ಸಂಸ್ಕೃತಿಗೆ ಧಕ್ಕೆಯಾಗದಂತೆ ವರ್ತಿಸಿದರೆ ಕಾನೂನು ಪಾಲನೆ ಮಾಡಿದಂತಾಗುತ್ತದೆ. ಸಂವಿಧಾನದ 39(ಎ) ವಿಧಿಯು ಪ್ರತಿಯೊಬ್ಬ ನಾಗರಿಕರು ಕಾನೂನಿನ ಅರಿವು ಪಡೆಯಬೇಕು ಮತ್ತು ಅವರಿಗೆ ಉಚಿತವಾಗಿ ಕಾನೂನಿನ ಸೇವೆ ನೀಡಬೇಕು’ ಎಂದು ಹೇಳಿದರು.

‘ಕಾನೂನು ಸೇವಾ ಪ್ರಾಧಿಕಾರವು ಆರ್ಥಿವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು, ಮಹಿಳೆಯರು, ಮಕ್ಕಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಮುಂತಾದವರಿಗೆ ಉಚಿತ ಕಾನೂನು ಸೇವೆ ಮತ್ತು ಸಲಹೆ ನೀಡುತ್ತದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

‘ದೇಶದಲ್ಲಿ ಸುಮಾರು ನಾಲ್ಕು ಸಾವಿರ ಕಾನೂನುಗಳು ಪ್ರಚಲಿತದಲ್ಲಿವೆ. ಮೋಟಾರು ವಾಹನ ಕಾಯ್ದೆಯಡಿ ವಾಹನ ನೋಂದಣಿ, ವಿಮೆ ಹಾಗೂ ಚಾಲನಾ ಪರವಾನಗಿ ಹೊಂದಿರುವ 18ವರ್ಷ ಮೇಲ್ಪಟ್ಟವರು ವಾಹನ ಚಲಾಯಿಸಬೇಕು. ಈ ಮೂಲಕ ಅಪಘಾತ ಸಂಭವಿಸಿದಾಗ ನ್ಯಾಯಾಲಯದ ಮೂಲಕ ಸೂಕ್ತವಾದ ಪರಿಹಾರವನ್ನು ಪಡೆಯಬಹುದಾಗಿದೆ’ ಎಂದು ಹೇಳಿದರು.

ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಠ ಪದ್ಧತಿಗಳ ಆಚರಣೆ ನಿರ್ಮೂಲನೆ ಮಾಡಬೇಕು. ಅಂದಾಗ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಂವಿಧಾನದ 21ಎ ಅಡಿಯಲ್ಲಿ ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕಾಗಿದೆ. 6ರಿಂದ14 ವರ್ಷದೊಳಗಿನ ಮಕ್ಕಳಿಗೆ ಪ್ರತಿಯೊಬ್ಬ ಪೋಷಕರು ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ನ್ಯಾಯಾಲಯದ ಪ್ರಕರಣಗಳ ಇತ್ಯರ್ಥಕ್ಕೆ ಎಷ್ಟು ಕಾಲಮಿತಿ ಇರುತ್ತದೆ? ಎಂದು ವಿದ್ಯಾರ್ಥಿ ಪ್ರಫುಲ್ ಕೇಳಿದ ಪ್ರಶ್ನೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ, ‘ಪೋಕ್ಸೊ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ಇತ್ಯರ್ಥಕ್ಕೆ ಒಂದು ವರ್ಷ ಕಾಲಾವಕಾಶವಿದ್ದು, ಬೇರೆ ಸಿವಿಲ್ ಪ್ರಕರಣಗಳಿಗೆ ಯಾವುದೇ ಕಾಲ ಮಿತಿ ಇಲ್ಲ’ ಎಂದು ಉತ್ತರಿಸಿದರು.

ಆರ್.ವಿ ಪ್ರೌಢಶಾಲೆಯ ಮುಖ್ಯಗುರು ಸುರೇಶ ಹವಾಲ್ದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ.ಹಣಮಂತ್ರಾಯ ಸಿ.ಕರಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಕುಲಕರ್ಣಿ, ಉಪಾಧ್ಯಕ್ಷ ಸುರೇಶ ಬಾಬು ಕಲಾಲ್, ಕಾರ್ಯದರ್ಶಿ ಶಾಂತಪ್ಪ ಎಸ್.ಖಾನಹಳ್ಳಿ, ಜಂಟಿ ಕಾರ್ಯದರ್ಶಿ ಭೀಮರಾಯ ಅಚ್ಚೋಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT