ಮಂಗಳವಾರ, ಜನವರಿ 28, 2020
18 °C

ವಡಗೇರಾ ಅಭಿವೃದ್ಧಿಗಾಗಿ ಪ್ರತಿಭಟನೆ :ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ನೂತನ ತಾಲ್ಲೂಕು ಕೇಂದ್ರ ವಡಗೇರಾ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ವಿವಿಧ ಕಚೇರಿಗಳನ್ನು ಆರಂಭಿಸಬೇಕು ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸೋಮವಾರ ಬಂದ್‌ ಆಚರಿಸಲಾಯಿತು.

ಕರವೇ ಕಾರ್ಯಕರ್ತರು ವಡಗೇರಾದಿಂದ ರಾಯಚೂರಿಗೆ ಹೋಗುವ ಹೆದ್ದಾರಿಯನ್ನು ಬೆಳಿಗ್ಗೆ 11 ಗಂಟೆಗೆ ತಡೆದು ಪ್ರತಿಭಟನಾಧರಣಿ ಆರಂಭಿಸಿದರು. 12 ಗಂಟೆ ಸುಮಾರಿಗೆ ವ್ಯಾಪಾರಸ್ಥರು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಸಾರ್ವಜನಿಕರೂ ಬೆಂಬಲಿಸಿದರು.

ತಾಲ್ಲೂಕು ಘೋಷಣೆಯಾಗಿ ಸುಮಾರು ಎರಡು ವರ್ಷ ಕಳೆದರೂ ಅಭಿವೃದ್ಧಿ ಕಾಣದೆ ಈ ಭಾಗದ ಜನರು ತೊಂದರೆ ಅನುಭವಿಸುತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಗುರುಮಠಕಲ್, ಹುಣಸಿಗಿ ಮತ್ತು ವಡಗೇರಾ ಒಟ್ಟು ಮೂರು ತಾಲ್ಲೂಕು ಕೇಂದ್ರಗಳು ಘೋಷಣೆಯಾಗಿವೆ. ಹುಣಸಿಗಿ ಮತ್ತು ಗುರುಮಠಕಲ್ ಸ್ವಲ್ಪ ಅಭಿವೃದ್ಧಿ ಹೊಂದಿವೆ. ಆದರೆ ವಡಗೇರಾ  ಮಾತ್ರ ಇನ್ನೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಈ ಕುರಿತು ಅನೇಕ ಸಾರಿ ಶಾಸಕರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಅಗಿಲ್ಲ ಎಂದು ಕರವೇ ಪದಾಧಿಕಾರಿಳು ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ದೂರಿದ್ದಾರೆ.

ನೂತನ ತಾಲೂಕು ಕೇಂದ್ರದಲ್ಲಿ 44 ಕಚೇರಿಗಳು ಇರಬೇಕಿತ್ತು. ಆದರೆ ತಹಶೀಲ್ದಾರ್‌ ಕಚೇರಿ ಮಾತ್ರ ಆರಂಭವಾಗಿದೆ. ರಾಷ್ಟ್ರೀಕೃತ ಬ್ಯಾಂಕ್, ತಾಲ್ಲೂಕು ಆಸ್ಪತ್ರೆ, ರಸ್ತೆ, ಕುಡಿಯುವ ನೀರು ಹಾಗೂ ಈ ಭಾಗದ ವಿಧ್ಯಾರ್ಥಿಗಳಿಗೆ ಪದವಿ ಕಾಲೇಜು ಐಟಿಐ ಸೇರಿದಂತೆ ಯಾವುದೇ ಉನ್ನತ ಶಿಕ್ಷಣ ಸಂಸ್ತೆಗಳಿಲ್ಲ. ದೂರದ ಯಾದಗಿರಿ, ಶಹಾಪುರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಈ ಸಮಸ್ಯೆಗಳನ್ನು ಪರಿಹರಿಸಿ ತಾಲ್ಲೂಕು ಕೇಂದ್ರವನ್ನು ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಪಡಿಸಿದರು.

ತಹಶೀಲ್ದಾರ್‌ ಸಂತೋಷರಾಣಿ, ಕರವೇ ಜಿಲ್ಲಾ ಅಧ್ಯಕ್ಷ ಟಿ.ಎನ್.ಭೀಮುನಾಯಕ, ಉಪಾಧ್ಯಕ್ಷ ಅಬ್ದುಲ್ ಚಿಗಾನೂರು, ಚೌಡಯ್ಯ ಬಾವೂರು, ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಕೊಂಕಲ್, ಹಣಮಂತ್ರಾಯ ತೇಕರಾಳ, ಮಲ್ಲು ಕಲ್ಮನಿ, ಭೀಮಣ್ಣ ಬುದಿನಾಳ, ಸಿದ್ದು ನಾಯಕ, ತೆಜು ರಾಥೋಡ್, ರಾಜು ಜವ್ಹಾಣ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು