ಶನಿವಾರ, ಏಪ್ರಿಲ್ 1, 2023
29 °C
ಗುರುಮಠಕಲ್: ತಾಲ್ಲೂಕಿನ ವಿವಿಧೆಡೆ ಸಂಭ್ರಮದ ರಾಜ್ಯೋತ್ಸವ

‘ತಾಯ್ನೆಲ, ತಾಯ್ನುಡಿ ಎಲ್ಲಕ್ಕಿಂತ ಮಿಗಿಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ತಾಯ್ನೆಲ ಮತ್ತು ತಾಯ್ನುಡಿಗಳು ಮನುಷ್ಯನ ಏಳಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಮಾತೃ ಭಾಷೆಯನ್ನು ಸರಿಯಾಗಿ ಅರಿತರೆ ಜಗತ್ತಿನ ಯಾವುದೇ ಭಾಷೆ, ವಿಷಯ ಸರಾಗವಾಗಿ ಕಲಿತುಕೊಳ್ಳಲು ಸಾಧ್ಯ ಎಂದು ತಹಶೀಲ್ದಾರ್ ಶರಣಬಸವ ರಾಣಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣಕ್ಕೆ ಆಲುರು ವೆಂಕಟರಾಯರು, ಗಂಗಾಧರ ದೇಶಪಾಂಡೆ, ಬಾಲಕೃಷ್ಣ ದೇಶಪಾಂಡೆ, ಜಗನ್ನಾಥರಾವ ಚಂಡ್ರಿಕಿ, ರಮಾನಂದ ತೀರ್ಥರು, ಸದಾನಂದ ಸೇರಿದಂತೆ ಹಲವು ಮಹನೀಯರು ಹೋರಾಟ ಮಾಡಿದ್ದಾರೆ ಎಂದು ನೆನೆದರು.

ಹಲವು ಮಹನೀಯರು ನಮ್ಮ ನೆಲ, ಜಲ, ಭಾಷೆಗಾಗಿ ಜೀವವನ್ನು ಅರ್ಪಿಸಿದ್ದರ ಫಲವಾಗಿ ಇಂದು ನಮ್ಮ ರಾಜ್ಯ ಹಾಗೂ ಭಾಷೆಗೆ ಉನ್ನತಮಟ್ಟದ ಸ್ಥಾನಮಾನ ಸಿಗುತ್ತಿದೆ. ಉಳಿದೆಲ್ಲರಿಗಿಂದಲೂ ಕನ್ನಡಿಗರು ವಿಶೇಷವಾದ, ವಿಭಿನ್ನವಾಗಿ ಜನಮಾನಸವನ್ನು ಸೆಳೆಯುತ್ತಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಂದೂ ಕೋವಿಡ್ ಪ್ರಕರಣವಿಲ್ಲ, ಕೋವಿಡ್ ನಿಯಮ ಪಾಲನೆಯಲ್ಲಿ ಸಾರ್ವಜನಿಕರೂ ಜಾಗೃತರಾಗಿದ್ದು, ಜಿಲ್ಲಾಡಳಿತವೂ ಸೂಕ್ತ ಮುಂಜಾಗ್ರತೆಗಳನ್ನು ಕೈಗೊಂಡಿದೆ. ಆದ್ದರಿಂದಲೆ ಇಂದು ನಾವು ಗಡಿ ಭಾಗದಲ್ಲಿ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಲು
ಸಾಧ್ಯವಾಗಿದೆ ಎಂದರು.

ಶಿಕ್ಷಕ ಹಣಮಂತ ಅವರು, ಮಾತೃ ಭಾಷೆಯನ್ನು ಪ್ರೀತಿಸೋಣ ಮತ್ತು ಉಳಿದ ಭಾಷೆಗಳನ್ನು ಗೌರವಿಸೋಣ ಎಂದು ಕರೆ ನೀಡಿದರು. ಕೋವಿಡ್ ಅವಧಿಯಲ್ಲಿ ವಾರಿಯರ್ಸ್ ಆಗಿ ಕೆಲಸ ಮಾಡಿದ ಪುರಸಭೆ, ಪೊಲೀಸ್, ಆರೋಗ್ಯ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ, ಪಿಐ ಖಾಜಾಹುಸೇನ್, ಶಿಕ್ಷಣ ಸಂಯೋಜಕ ಶಿವರಾಜ ಸಾಕಾ, ಪುರಸಭೆ, ಕಂದಾಯ ಸಿಬ್ಬಂದಿ ಇದ್ದರು.

ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಲಾಯಿತು. ಶಾಲಾ, ಕಾಲೇಜು ಗಳಲ್ಲಿ ಧ್ವಜಾರೋಹಣ ಹಾಗೂ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ
ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.