ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಭೀಮಾ ನದಿ ರೌದ್ರಾವತಾರಕ್ಕೆ ನಲುಗಿದ ರೈತರು

ಸಾವಿರಾರು ಎಕರೆ ಅಪೋಷನೆ: ಬಡಾವಣೆಗೆ ನುಗ್ಗಿದ ನೀರು
Last Updated 16 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕೃಷ್ಣಾ, ಭೀಮಾ ನದಿಗಳು ಉಕ್ಕಿ ಹರಿಯುತ್ತಿದ್ದು, ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಕೋವಿಡ್‌ ಸಂಕಷ್ಟದಲ್ಲೂ ಸಾಲ ಮಾಡಿ ಬಿತ್ತಿದ್ದ ಬೆಳೆ ಈಗ ನೆಲಕಚ್ಚಿದ್ದು, ರೈತರು ಹೈರಾಣಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಭೀಮಾ ನದಿಯ ಪ್ರವಾಹಕ್ಕೆ ಸಿಲುಕಿ ಸಾವಿರಾರು ಎಕರೆಯ ಭತ್ತ ನಾಶವಾಗಿದೆ. ಅಲ್ಲದೆ ಕೃಷ್ಣಾ ನದಿ ಪ್ರವಾಹದಿಂದ ಹತ್ತಿ, ಭತ್ತ ಸಂಪೂರ್ಣ ನಾಶವಾಗಿದೆ. ಹೊಲ, ಗದ್ದೆಗಳು ಕೆರೆಯ ಸ್ವರೂಪ ಪಡೆದುಕೊಂಡಿವೆ.

ಪ್ರಕೃತಿ ನಿರ್ಮಿಸಿದ ಅನಾಹುತ ಇನ್ನೂ ಲೆಕ್ಕಕ್ಕೆ ಬಾರದಷ್ಟು ಹಾನಿಮಾಡಿದೆ. ಭೀಮಾ ನದಿಯಂಚಿನ ಭತ್ತದ ಗದ್ದೆಗಳಲ್ಲಿ ಮೂರು ದಿನಗಳಿಂದ ನೀರು ನಿಂತು ಬೆಳೆ ಎಲ್ಲ ನೆಲಸಮವಾಗಿದೆ.

ಬಡಾವಣೆಗೆ ನುಗ್ಗಿ ನೀರು: ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ಶುಕ್ರವಾರ ಬೆಳಿಗ್ಗೆ 3.50 ಲಕ್ಷ ಕ್ಯುಸೆಕ್ ನೀರು ಹರಿಸಿದ್ದು, ಭೀಮಾ ನದಿ ಪ್ರವಾಹದಿಂದ ನಗರದ ವೀರಭದ್ರೇಶ್ವರ ಬಡಾವಣೆಗೂ ನೀರು ನುಗ್ಗಿದೆ. ಮನೆಗಳು ಜಲಾವೃತವಾಗಿದ್ದು, ನಿವಾಸಿಗಳು ಮನೆಯಿಂದ ಹೊರ ಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯ ವಿನಾಯಕ ದೇವಸ್ಥಾನ ಹಾಗೂ ಮನೆ, ಮಸೀದಿ ಬಳಿಗೆ ನೀರು ನುಗ್ಗಿದೆ.

ಸೆಲ್ಫಿ ಕ್ರೇಜ್‌: ಭೀಮಾ ಪ್ರವಾಹ ರೌದ್ರಾವತಾರ ನೋಡಲು ನಗರ ನಿವಾಸಿಗಳು ತಂಡೋಪತಂಡವಾಗಿ ಭೀಮಾ ನದಿ ಸೇತುವೆ, ಗುರುಸಣಗಿ ಬ್ರಿಜ್‌ ಕಂ ಬ್ಯಾರೇಜ್‌ ಬಳಿ ಜಮಾಯಿಸುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಾ ನಿಂತಿರುವುದು ಕಂಡು ಬರುತ್ತಿದೆ. ಅಲ್ಲದೆ ರಸ್ತೆಗೆ ವಾಹನಗಳನ್ನು ನಿಲ್ಲಿಸಿರುವುದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇಲ್ಲಿ ಪೊಲೀಸ್‌ ಭದ್ರತೆ ಇಲ್ಲ. ಬ್ಯಾರಿಕೇಡ್‌ ಕೂಡ ಇಲ್ಲ.

ಪ್ರವಾಹದ ಮಧ್ಯೆಯೂ ಮೀನು ಬೇಟೆ: ಭೀಮಾ ನದಿ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದು, ಇದನ್ನೂ ಲೆಕ್ಕಿಸದೇ ಮೀನಿಗಾಗಿಬಲೆ ಹಾಕಿರುವುದು ಶುಕ್ರವಾರ ಕಂಡು ಬಂತು.

ರಾಜ್ಯ ಹೆದ್ದಾರಿ ಬಂದ್‌: ನಗರ ಸಮೀಪದ ನಾಯ್ಕಲ್‌ ಸೇತುವೆ ಬಳಿ ಭೀಮಾ ನದಿಗೆ ನೀರು ಹೆಚ್ಚಿನ ಮಟ್ಟದಲ್ಲಿ ಹರಿದ ಪರಿಣಾಮ ಯಾದಗಿರಿ–ಶಹಾಪುರ ರಾಜ್ಯ ಹೆದ್ದಾರಿ ಬಸ್‌ ಓಡಾಟ ಬಂದ್‌ ಆಗಿತ್ತು. ಸಂಜೆ ವೇಳೆಗೆ ನೀರು ಇಳಿಕೆಯಾಗಿದ್ದರಿಂದ ಬಸ್‌ ಸಂಚಾರ ಆರಂಭಿಸಲಾಗಿದೆ.

ಪ್ರವಾಹದ ನೀರು ರಸ್ತೆ ಮೇಲೆ ಹರಿದು ಜಮೀನುಗಳಿಗೆ ನುಗ್ಗಿದೆ. ಇದರಿಂದ ಗ್ರಾಮಸ್ಥರು, ವಾಹನ ಸವಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳದಂತೆ ಆಗಿತ್ತು.

14 ಗ್ರಾಮಗಳಲ್ಲಿ ಕಾಳಜಿ ಕೇಂದ್ರ
ಭೀಮಾ ನದಿ ಅಂಚಿನಲ್ಲಿರುವ ಯಾದಗಿರಿ, ಶಹಾಪುರ, ವಡಗೇರಾ ತಾಲ್ಲೂಕಿನ 14 ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಯಾದಗಿರಿ ತಾಲ್ಲೂಕಿನ ಆನೂರು(ಕೆ),ಅಬ್ಬೆತುಮಕೂರು,ತಳಕ,ಶಹಾಪುರ ತಾಲ್ಲೂಕಿನ ರೋಜಾ ಎಸ್.,ಅಣಬಿ,ಹುರಸಗುಂಡಗಿ, ಹಬ್ಬಳ್ಳಿ,ತಂಗಡಗಿ,ಮರಮಕಲ್,ಬಲಕಲ್,ನಾಲವಡಗಿ,ವಡಗೇರಾ ತಾಲ್ಲೂಕಿನಕುಮನೂರು,ಶಿವನೂರು,ನಾಯ್ಕಲ್ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ 981 ಕುಟುಂಬಗಳಿಗೆ ಆಶ್ರಯ ಕಲ್ಪಿಸಲಾಗಿದೆ. ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾಶರ್ಮಾ, ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರಸೇರಿದಂತೆ ಇನ್ನಿತರ ಅಧಿಕಾರಿಗಳು ಸಂತ್ರಸ್ತರನ್ನು ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಕರೆತಂದಿದ್ದಾರೆ.

ಜಿಲ್ಲಾಧಿಕಾರಿಡಾ.ರಾಗಪ್ರಿಯಾ ಆರ್.,ಅವರು ಶುಕ್ರವಾರಆನೂರ,ವಡಗೇರಾ ಮೊರಾರ್ಜಿ ಶಾಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಿದ್ದಾರೆ. ಅಂತರ ಕಾಪಾಡಿಕೊಂಡು, ಮಾಸ್ಕ್‌ ಧರಿಸುವಂತೆ ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಿದ್ದಾರೆ.

ಗ್ರಾಮಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಅಧಿಕಾರಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಯಾವ ಸೌಲಭ್ಯವನ್ನು ಕಲ್ಪಿಸದೆ ಸ್ಥಳಾಂತರಿಸಿದ್ದಾರೆ. ಯಾವ ಅನುಕೂಲವೂ ಇಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಕೋಳಿ ಸಮೇತ ಬಂದ ಗ್ರಾಮಸ್ಥ!: ವಡಗೇರಾ ತಾಲ್ಲೂಕಿನ ಕುಮನೂರ ಗ್ರಾಮವೂ ಪ್ರವಾಹಕ್ಕೆ ತುತ್ತಾಗಿದ್ದು, ಗ್ರಾಮಸ್ಥರನ್ನು ಸ್ಥಳಾಂತರಿಸಲು ಅಧಿಕಾರಿಗಳು ತೆರಳಿದ ವೇಳೆ ಹನುಮಂತ ಎನ್ನುವವರು ಕೋಳಿ ಸಮೇತ ಕಾಳಜಿ ಕೇಂದ್ರಕ್ಕೆ ಬಂದಿದ್ದಾರೆ.

***

ನದಿಯಂಚಿನ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಸೌಕರ್ಯ ಕಲ್ಪಿಸಲಾಗಿದೆ. ನೀರು ಹೆಚ್ಚು ಬಿಟ್ಟರೆ 45 ಗ್ರಾಮಗಳಿಗೆ ಸಮಸ್ಯೆ ಆಗಲಿದೆ.
-ಡಾ.ರಾಗಪ್ರಿಯಾ ಆರ್.,ಜಿಲ್ಲಾಧಿಕಾರಿ

***

ಭೀಮಾ ನದಿ ಪ್ರವಾಹಕ್ಕೆ ನಮ್ಮ ಹೊಲ ಸಂಪೂರ್ಣ ಮುಳುಗಡೆಯಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇನೆ. ಸರ್ಕಾರ ಬಿಡಿಗಾಸು ಕೊಟ್ಟರೆ ಸಾಲುವುದಿಲ್ಲ.
-ಮಲ್ಲಪ್ಪ ರಾಥೋಡ್‌, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT