ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮುಂದುವರಿದ ಮಳೆ, ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ

Last Updated 13 ಜುಲೈ 2022, 7:13 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಬುಧವಾರ 15 ಕ್ರಸ್ಟ್ ಗೇಟುಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ.

ಬಸವಸಾಗರ ಜಲಾಶಯಕ್ಕೆ 1 ಲಕ್ಷ ಕ್ಯುಸೆಕ್ ನೀರು ಒಳಹರಿವು ಇದ್ದರೆ, 1.11 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. 15 ಕ್ರಸ್ಟ್ ಗೇಟುಗಳನ್ನು 1.30 ಮೀಟರಕ್ಕೆ ಎತ್ತಲಾಗಿದೆ. ಪವರ್ ಹೌಸ್‌ಗೆ 6ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಪ್ರಸ್ತುತ 29.06 ಟಿಎಂಸಿ ಸಂಗ್ರಹ ಹೊಂದಿದ್ದು, ಗರಿಷ್ಠ ಸಂಗ್ರಹ 33.31 ಟಿಎಂಸಿ ಇದೆ. ಅಣೆಕಟ್ಟು ಗರಿಷ್ಠ ಮಟ್ಟ 492.25 ಇದ್ದು, ಬುಧವಾರ 491.30 ಮೀಟರ್ ಇದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ‌ ಹೆಚ್ಚು ಮಳೆಯಾದರೆ, ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಲಿದೆ. ಆಲಮಟ್ಟಿಯಿಂದ ಹೊರ ಹರಿಸುವ ಪ್ರಮಾಣದ ಮೇಲೆ ಅಷ್ಟೇ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಸೇತುವೆ ಮುಳುಗುವ ಭೀತಿ:ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣದಲ್ಲಿ ಹೆಚ್ಚಳವಾದರೆ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ.‌ 2.50 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ನದಿಗೆ ಹರಿಸಿದರೆ ಯಾದಗಿರಿ, ‌ಕಲಬುರಗಿ ಸಂಪರ್ಕ ಕಡಿತವಾಗಲಿದೆ. ತಿಂಥಣಿ ಸೇತುವೆ ಮೂಲಕ ಸುತ್ತುವರಿದು ಬರಬೇಕಿದೆ.

ಮಂಗಳವಾರ ನಾರಾಯಣಪುರ ಜಲಾಶಯಕ್ಕೆ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಸುರಪುರ ಶಾಸಕ ನರಸಿಂಹ ನಾಯಕ‌ (ರಾಜೂಗೌಡ) ಭೇಟಿ ಪರಿಶೀಲಿಸಿದ್ದಾರೆ. ನದಿ ಪಾತ್ರದ ಗ್ರಾಮಸ್ಥರು ನದಿಗೆ ಇಳಿಯದಂತೆ ಮನವಿ ಮಾಡಿದ್ದಾರೆ. ಪೊಲೀಸರು ಡಂಗೂರ ಸಾರಿ ಎಚ್ಚರಿಕೆ ನೀಡಿದ್ದಾರೆ.

ಮುಂದುವರಿದ ಜಿಟಿಜಿಟಿ‌ ಮಳೆ:ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರವೂ ಜಿಟಿಜಿಟಿ ಮಳೆ ಮುಂದುವರಿದಿದೆ. ಕಳೆದ ಐದು ದಿನಗಳಿಂದ ಜಿಟಿಜಿಟಿ ಮಳೆ ಮುಂದುವರಿದಿದೆ. ಈಗಾಗಲೇ ಜಿಲ್ಲೆಯಲ್ಲಿ 10 ಮನೆಗಳು ಭಾಗಶಃ ಹಾನಿಯಾಗಿವೆ‌. ಜನಜೀವನ ಅಸ್ತವ್ಯಸ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT