ಯಾದಗಿರಿ: ಜಿಲ್ಲೆಯ ಹೆಣ್ಣು ಮಕ್ಕಳಿಗೆ ಸಕಲ ಸೌಲಭ್ಯಗಳನ್ನೊಳಗೊಂಡ ವಿಶೇಷ ಮಾದರಿಯ ವಸತಿ ಶಾಲೆಗಳ ಮೂಲಕ ರಾಜ್ಯದ ಇನ್ನುಳಿದ ಭಾಗದ ಮಕ್ಕಳೊಂದಿಗೆ ಸ್ಪರ್ಧೆ ನೀಡಲಿ ಎನ್ನುವ ದೃಷ್ಟಿಯಿಂದ ಸರ್ಕಾರ ಗ್ರಾಮಾಂತರ ಭಾಗದಲ್ಲಿ ಕಸ್ತೂರಬಾ ಬಾಲಿಕಾ ವಸತಿ ನಿಲಯಗಳನ್ನು ಸ್ಥಾಪನೆ ಮಾಡಿದೆ. ಆದರೆ, ವಸತಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಕಾಡುತ್ತಿವೆ.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಬಾಲಿಕಾ ವಸತಿ ಶಾಲೆಗಳಿವೆ. ಜಿಲ್ಲೆಯ ಸುರಪುರ ತಾಲ್ಲೂಕಿನ ಕೊಡೇಕಲ್ 2, ತಿಂಥಣಿ, ಯಕ್ತಾಪುರ, ಶಹಾಪುರ ತಾಲ್ಲೂಕಿನ ಚಾಮನಾಳ 2, ವಡಗೇರಾ ಮತ್ತು ಯಾದಗಿರಿ ಹಾಗೂ ಗುರುಮಠಕಲ್ ಭಾಗದ ಅಬ್ಬೆತುಮಕೂರು, ಅರಕೇರಾ, ಎಲ್ಹೇರಿ ಹೀಗೆ 10 ಕಡೆ ಸ್ಥಾಪಿಸಲಾಗಿದೆ. ಈ ವಸತಿ ನಿಲಯಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿದ್ಯಾಭ್ಯಾಸ ಇರುತ್ತದೆ. ಈ ನಿಲಯದಲ್ಲಿ 150 ಮಕ್ಕಳ ಸಂಖ್ಯೆ ಇರುತ್ತದೆ. ಈ ವಸತಿ ನಿಲಯಗಳಿಗೆ ಸರ್ಕಾರ ಮುಂಗಡವಾಗಿಯೇ ಅನುದಾನ ನೀಡುತ್ತದೆ. ವಿದ್ಯಾರ್ಥಿಗಳಿಗೆ ಒಣಹಣ್ಣುಗಳು, ತಾಜಾ ಹಣ್ಣು, ಪೌಷ್ಟಿಕ ಆಹಾರ ನೀಡಬೇಕು. ಆದರೆ, ಈ ಎಲ್ಲಾ ವಸತಿನಿಲಯಗಳು ಮುಖ್ಯವಾಗಿ ಶಿಕ್ಷಕರ ಕೊರತೆ ಎದುರಿಸುತ್ತಿವೆ. ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಂಡು ಕಾರ್ಯನಿರ್ವಹಿಸುತ್ತಿವೆ.
ಪ್ರೌಢಶಾಲಾ ಮಟ್ಟದ ಈ ವಸತಿನಿಲಯಗಳಿಗೆ ಬಿ.ಇಡಿ ತರಬೇತಿ ಹೊಂದಿದ ಪದವಿ ಶಿಕ್ಷಕರನ್ನೇ ಸಹ ಶಿಕ್ಷಕರನ್ನಾಗಿ, ಮುಖ್ಯಶಿಕ್ಷಕರನ್ನಾಗಿ ನೇಮಕ ಮಾಡಬೇಕಾಗುತ್ತದೆ. ಆದರೆ, ಅರ್ಹತೆ ಇಲ್ಲದವರನ್ನು ನೇಮಕ ಮಾಡಲಾಗಿದೆ.
ಕಡ್ಡಾಯವಾಗಿ ಇರಬೇಕಾದ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯವಾರು ಶಿಕ್ಷಕರ ಕೊರತೆ ಈ ಶಾಲೆಗಳಲ್ಲಿ ಇದೆ. ಇದರಿಂದ ಶಿಕ್ಷಣ ಗುಣಮಟ್ಟ ಹೇಗಿರುತ್ತದೆ ಎಂದು ಗೊತ್ತಾಗುತ್ತದೆ ಎಂದು ಶಿಕ್ಷಣ ಪ್ರೇಮಿಗಳು ಹೇಳುವ ಮಾತಾಗಿದೆ.
‘ಒಂದು ವರ್ಷದಿಂದ ಅರ್ಹತೆ ಇರುವ ಶಿಕ್ಷಕರ ನಿಯೋಜನೆ ಕುರಿತು ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದಾದರೊಂದು ನೆಪ ಹೇಳಿ ಅಲಕ್ಷ್ಯ ಮಾಡುತ್ತಲೇ ಇದ್ದಾರೆ. ಮಾದರಿಯ ವಸತಿ ಶಾಲೆಗಳ ಪರಿಸ್ಥಿತಿ ಕುರಿತು ಚಿಂತಿಸದ ಈ ಅಧಿಕಾರಿಗಳು ಸಾಮಾನ್ಯ ಶಾಲೆಗಳ ಬಗ್ಗೆ ಕಾಳಜಿ ವಹಿಸಿ ಜಿಲ್ಲೆಯ 10ನೇ ತರಗತಿ ಫಲಿತಾಂಶ ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾರೆ ಶಿಕ್ಷಣ ಪ್ರೇಮಿ ಯಲ್ಲಯ್ಯ ನಾಯಕ ವನದುರ್ಗ.
‘ಅಬ್ಬೆತುಮಕೂರಿನ ಕಸ್ತೂರಬಾ ಶಾಲೆಯ ವಸತಿ ನಿಲಯವನ್ನು ಅಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ಯಾದಗಿರಿ ನಗರದಲ್ಲಿ ಸ್ಥಾಪಿಸಿ ಹಳ್ಳಿಗಳ ಹೆಣ್ಣು ಮಕ್ಕಳಿಗೆ ವಂಚನೆ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಎಷ್ಟು ಎಂಬುದು ಎದ್ದು ಕಾಣುತ್ತದೆ. ಎಲ್ಲೇರಿ, ಚಾಮನಾಳ, ವಡಗೇರಾ ಹೀಗೆ ಹೆಚ್ಚಿನ ವಸತಿ ನಿಲಯಗಳು ಅಧಿಕಾರಿಗಳಿಂದ ಅನುದಾನ ದುರುಪಯೋಗ, ಭ್ರಷ್ಟಾಚಾರ ಎದುರಿಸುತ್ತಿವೆ. ಹೀಗಾಗಿ ಮಕ್ಕಳಿಗೆ ಸಮರ್ಪಕವಾಗಿ ನೀಡಬೇಕಾದ ಒಣ ಹಣ್ಣುಗಳು, ತಾಜಾ ಹಣ್ಣುಗಳು, ಎಣ್ಣೆ, ಸಾಬೂನು ನೀಡುವುದೇ ಇಲ್ಲ’ ಎನ್ನುತ್ತಾರೆ ಅವರು.
‘ಮಾದರಿ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ತಿಂದು ಆರೋಗ್ಯವಾಗಿರಬೇಕಾದ ಮಕ್ಕಳು ಪರಿತಪಿಸುವಂತಾಗಿದೆ. ಆದ್ದರಿಂದ ಈ ಕುರಿತು ಸಮಗ್ರವಾಗಿ ತನಿಖೆ ಮಾಡಿ ವ್ಯಾಪಕವಾದ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಠಿಣ ಕ್ರಮ ಕೈಗೊಂಡು ಜಿಲ್ಲಾಧಿಕಾರಿಗಳಿಂದ ಪಿಡಿಒವರೆಗಿನ ಅಧಿಕಾರಿಗಳು ಪ್ರತಿ ವಾರ ಈ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎನ್ನುವುದು ಪೋಷಕರ ಒತ್ತಾಯವಾಗಿದೆ.
ಜಿಲ್ಲೆಯಲ್ಲಿರುವ ಕಸ್ತೂರ ಬಾ ವಸತಿ ಶಾಲೆಗಳಲ್ಲಿ ಅರ್ಹತೆ ಇರುವ ಶಿಕ್ಷಕರನ್ನು ನಿಯೋಜಿಸಲಾಗಿದೆ. ಅಲ್ಲದೇ ಮೂಲ ಸೌಕರ್ಯಗಳ ಬಗ್ಗೆ ಈಗಾಗಲೇ ಅನುದಾನಕ್ಕೆ ಪತ್ರ ಬರೆಯಲಾಗಿದೆ-ಮಂಜುನಾಥ ಡಿಡಿಪಿಐ ಯಾದಗಿರಿ
Quote - ಜಿಲ್ಲಾ ಕೇಂದ್ರದ ಸುತ್ತ ಇರುವ ವಸತಿ ನಿಲಯಗಳಿಗೆ ಹಠಾತ್ ಆಗಿ ಡಿಸಿ ಜಿಪಂ ಸಿಇಒ ಡಿಡಿಪಿಐ ಮತ್ತು ಜನ ಪ್ರತಿನಿಧಿಗಳು ಭೇಟಿ ನೀಡಿ ಸೌಲಭ್ಯಗಳ ಕುರಿತು ಪರಿಶೀಲಿಸಲಿ ಯಲ್ಲಯ್ಯ ನಾಯಕ ವನದುರ್ಗ ಶಿಕ್ಷಣ ಪ್ರೇಮಿ
ಶಾಲೆಗೆ ಸ್ವಂತ ಕಟ್ಟಡವಿಲ್ಲದಿರುವುದರಿಂದ ಸ್ನಾನಕ್ಕೆ ಹಾಗೂ ಶೌಚಕ್ಕೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಈಗಾಗಲೇ ಇಲಾಖೆಗೆ ಪತ್ರ ಬರೆಯಲಾಗಿದೆ.ಲಲಿತಾ ಮುಖ್ಯ ಶಿಕ್ಷಕಿ ಕಸ್ತೂರಬಾ ವಸತಿ ಶಾಲೆ ವಡಗೇರಾ
ಊಟದ ಹಾಗೂ ಇನ್ನಿತರ ಸಮಸ್ಯೆ ಇಲ್ಲ. ಶೌಚಾಲಯ ಹಾಗೂ ಸ್ನಾನದ ಕೋಣೆ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕುದೇವಮ್ಮ 10ನೇ ತರಗತಿಯ ವಿದ್ಯಾರ್ಥಿನಿ
ವಿದ್ಯಾರ್ಥಿನಿಯರು ಅಸ್ವಸ್ಥರಾದ ಪ್ರಕರಣಗಳು ಜಿಲ್ಲೆಯ ವಿವಿಧ ಕಸ್ತೂರ ಬಾ ವಸತಿ ಶಾಲೆಗಳಲ್ಲಿ ಕಲುಷಿತ ನೀರು ಊಟದ ವಿಷಯದಲ್ಲಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಪ್ರಕರಣಗಳಿವೆ. ಕೆಲವು ಬೆಳಕಿಗೆ ಬಂದಿವೆ. ಇನ್ನೂ ಮುಚ್ಚಿ ಹೋಗಿವೆ. ಸುರಪುರ ತಾಲ್ಲೂಕಿನ ಕೆಂಭಾವಿ ಹೋಬಳಿಯ ಯಕ್ತಾಪುರ ಗ್ರಾಮದ ಕಸ್ತೂರ ಬಾ ವಸತಿ ನಿಲಯದಲ್ಲಿ ಕಲುಷಿತ ನೀರು ಸೇವಿಸಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ 2023ರ ಸೆ.30ರಂದು ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.