ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ ‍ಪುರಸಭೆ: ತೆರೆಮರೆ ಕಸರತ್ತು ಶುರು

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೆ.3ರಂದು ಚುನಾವಣೆ: ಮ್ಯಾಜಿಕ್‌ ನಂಬರ್‌ಗಾಗಿ ಪೈಪೋಟಿ
Published 28 ಆಗಸ್ಟ್ 2024, 4:58 IST
Last Updated 28 ಆಗಸ್ಟ್ 2024, 4:58 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಎರಡೂ ಪಕ್ಷದ ತೆರೆಮರೆಯ ಕಸರತ್ತುಗಳು ಜೋರಾಗಿ ನಡೆಯುತ್ತಿವೆ. ಚುನಾವಣಾಧಿಕಾರಿ ಆಗಿರುವ ಸುರಪುರ ತಹಶೀಲ್ದಾರ್‌ ಕೆ. ವಿಜಯಕುಮಾರ ಅವರು ಸೋಮವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಸೆ.3 ಮಂಗಳವಾರ ಪುರಪಿತೃಗಳ ಅಧಿಕಾರದ ಗದ್ದುಗೆಗೆ ಮುಹೂರ್ತ ನಿಗದಿಯಾಗಿದೆ.

ಸೆಪ್ಟೆಂಬರ್‌ ತಿಂಗಳ ಮೊದಲ ವಾರದಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿತ್ತು. ನಂತರ ಜಿಲ್ಲಾಧಿಕಾರಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಚುನಾವಣೆ ನಡೆಸುವಂತೆ ಸೂಚನೆ ನೀಡಿ ಅಧಿಕೃತ ಆದೇಶ ಹೊರಡಿಸಿದ್ದರು.

ಮ್ಯಾಜಿಕ್ ನಂಬರಿನ ಗಡಿದಾಟಿದ ಬಿಜೆಪಿ ಪಾಳಯದಲ್ಲಿ ಗದ್ದುಗೆಗಾಗಿ ಮುಸುಕಿನ ಗುದ್ದಾಟ ನಡೆಸುತ್ತಿರುವ ಬಗ್ಗೆ ಗುಸುಗುಸು ಮಾತುಗಳು ಹಬ್ಬಿದ್ದು, ಇದನ್ನೇ ಲಾಭ ಮಾಡಿಕೊಂಡಿರುವ ಕಾಂಗ್ರೆಸ್ ಬಿಜೆಪಿಯ ಕೆಲ ಸದಸ್ಯರನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆಯಲ್ಲಿ ತೊಡಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ದಿನಗಳ ಹಿಂದೆ ಪಟ್ಟಣದ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ಈ ಬಗ್ಗೆ ಮಹತ್ವದ ಸಭೆಯೂ ನಡೆದಿದೆ ಎನ್ನಲಾಗಿದೆ.

23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ 13 ಬಿಜೆಪಿ, 8 ಕಾಂಗ್ರೆಸ್ ಹಾಗೂ 2 ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದು, ಈಗ ಪಕ್ಷೇತರ ಸದಸ್ಯರೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಿಂದ ಕಾಂಗ್ರೆಸ್ ಸಂಖ್ಯಾಬಲ 10ಕ್ಕೇರಿದೆ.

ಆದರೆ, 13 ಸ್ಥಾನಗಳಿಂದ ಸ್ಪಷ್ಟ ಬಹುಮತದೊಂದಿಗೆ ಪುರಸಭೆ ಮೆಟ್ಟಿಲು ಏರಿರುವ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿದೆ. ಸರ್ಕಾರ ನಿಗದಿಪಡಿಸಿದ ಮೀಸಲಾತಿ ಅನ್ವಯ ಈ ಬಾರಿ ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಎ (ಬಿಸಿಎ) ಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿದೆ. ಗದ್ದುಗೆ ಏರಲು ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದರೂ ಸದಸ್ಯರ ಒಗ್ಗಟ್ಟಿನ ಬಲದ ಕೊರತೆಯಿಂದ ಅಧಿಕಾರ ತಪ್ಪಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಬಿಜೆಪಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರೆಡ್ಡಿ ಪಾಟೀಲ ಅವರಿಗೆ ಪ್ರತಿಷ್ಠೆಯ ಕಣವೆಂದೆ ಗುರುತಿಸಿಕೊಂಡಿದೆ. ಈಗಾಗಲೇ ಬಿಜೆಪಿ ಸದಸ್ಯರ ಜೊತೆ ಅಮೀನರೆಡ್ಡಿ ಯಾಳಗಿ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ಜೊತೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಸರಣಿ ಸಭೆ ನಡೆಸಿದ್ದು, ಅಂತಿಮ ತೀರ್ಮಾನ ಮಾತ್ರ ಇನ್ನೂ ನಿಗೂಢವಾಗಿದೆ.

ಎರಡು ಪಕ್ಷೇತರ ಸದಸ್ಯರ ಬಲ ಮತ್ತು ಸಂಸದ, ಶಾಸಕರ ಬಲದಿಂದ ಮ್ಯಾಜಿಕ್ ನಂಬರಿನ ಗಡಿಗೆ ಬಂದು ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಒಂದು ಸದಸ್ಯರ ಬಲ ಬೇಕಿದ್ದು, ಈ ಬಗ್ಗೆ ಕುದುರೆ ವ್ಯಾಪಾರವೂ ಶುರುವಾಗಿದೆ ಎನ್ನಲಾಗಿದೆ. ಒಟ್ಟಾರೆ ಅಂದು ನಡೆಯುವ ಚುನಾವಣೆಗೆ ಈ ಭಾಗದ ಶಾಸಕರೂ ಆಗಿರುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಸಂಸದ ಜಿ.ಕುಮಾರ ನಾಯಕ ಅವರು ಬರುವುದಂತು ಖಚಿತ ಎಂದು ಹೇಳಲಾಗುತ್ತಿದ್ದು, ಚುನಾವಣೆ ನಂತರವಷ್ಟೆ ಇದಕ್ಕೆಲ್ಲ ಉತ್ತರ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT