ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಪೇಗೌಡರ ಆದರ್ಶ ಪಾಲಿಸಿ’

ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ
Last Updated 28 ಜೂನ್ 2019, 9:23 IST
ಅಕ್ಷರ ಗಾತ್ರ

ಯಾದಗಿರಿ: ’ನಾಡಪ್ರಭು ಕೆಂಪೇಗೌಡರ ಜೀವನಾದರ್ಶ ಯುವಸಮುದಾಯಕ್ಕೆ ಸ್ಫೂರ್ತಿಯಾಗಿದೆ. ಅವರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡು ಉನ್ನತಿ ಸಾಧಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ನಗರ ನಿರ್ಮಾಣ ಮಾಡುವಲ್ಲಿ ನಾಡಪ್ರಭು ಕೆಂಪೇಗೌಡರ ಪಾತ್ರ ಪ್ರಮುಖವಾಗಿದೆ. ನಾಡಿಗಾಗಿ ಅವರು ಸಲ್ಲಿಸಿದ ಸೇವೆಯ ಸ್ಮರಣಾರ್ಥವಾಗಿ ನಾಡಿನಾದ್ಯಂತ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರಪ್ರಸಾದ ವೈದ್ಯ ಉಪನ್ಯಾಸ ನೀಡಿ, ‘ಕೆಂಪನಂಜೇಗೌಡ ಮತ್ತು ಲಿಂಗಮಾಂಭಾ ದಂಪತಿ ಪುತ್ರರಾದ ಕೆಂಪೇಗೌಡರು ವಿಜಯನಗರದ ಸಾಮಂತರಾಗಿ ಕ್ರಿ.ಶ. 1513ರಿಂದ 1569ರವರೆಗೆ ಪ್ರಸಿದ್ಧ ದೊರೆಯಾಗಿ ಆಡಳಿತ ಮಾಡಿದರು. ಮಾಧವ ಭಟ್ ಗುರುಗಳಿಂದ ಸಕಲ ವಿದ್ಯೆ ಕಲಿತರು. ಮಹಾನವಮಿ ಹಬ್ಬದ ಸಂದರ್ಭದಲ್ಲಿ ತಂದೆಯ ಜೊತೆ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದಾಗ, ಅಲ್ಲಿನ ದೊರೆ ಶ್ರೀಕೃಷ್ಣದೇವರಾಯನ ಸಹೋದರ ತಿರುಮಲರಾಯನೊಂದಿಗೆ ಮಲ್ಲಯುದ್ಧ ಸ್ಪರ್ಧೆಯಲ್ಲಿ ಜಯ ಗಳಿಸಿ ಗಮನ ಸೆಳೆಯುತ್ತಾರೆ’ ಎಂದು ತಿಳಿಸಿದರು.

‘ತಂದೆಯ ನಂತರ 1513ರಲ್ಲಿ ಯಲಹಂಕದ ನಾಡಪ್ರಭು ಎಂಬ ಬಿರುದಿನೊಂದಿಗೆ ಅಧಿಕಾರಕ್ಕೆ ಬಂದು ದಕ್ಷ ಆಡಳಿತಗಾರರಾಗಿ ರಾಜ್ಯ ಸಂಘಟನೆ, ಸೈನ್ಯ ಸಂಘಟನೆ ಮಾಡಿದರು. ವಿಜಯನಗರದೊಂದಿಗೆ ಉತ್ತಮ ಸಂಬಂಧ ಹೊಂದಿ, ವಿಜಯನಗರದ ಅರಸ ಅಚ್ಯುತರಾಯರಿಂದ ಬೆಂಗಳೂರಿನ 12 ಹೋಬಳಿಗಳನ್ನು ಉಂಬಳಿಯಾಗಿ ಪಡೆಯುತ್ತಾರೆ. ಬೆಂಗಳೂರನ್ನು ರಾಜಧಾನಿಯನ್ನಾಗಿ ನಿರ್ಮಾಣ ಮಾಡಿ, ಅನೇಕ ಕೋಟೆಗಳನ್ನು ನಿರ್ಮಿಸಿ ಸುಸಜ್ಜಿತ ನಗರವನ್ನು ನಿರ್ಮಾಣ ಮಾಡುತ್ತಾರೆ’ ಎಂದು ವಿವರಿಸಿದರು.

‘ಕೆಂಪೇಗೌಡರು ಪ್ರಜಾಹಿತ ಚಿಂತಕರಾಗಿದ್ದರು. ಕೋರಮಂಗಲದಲ್ಲಿ ಲಕ್ಷ್ಮಿದೇವಾಲಯ, ಹಲಸೂರಿನಲ್ಲಿ ಸೋಮೇಶ್ವರ ದೇವಾಲಯ, ಗವಿಗಂಗಾಧರೇಶ್ವರ, ಬಸವೇಶ್ವರ, ಭೈರವ, ಆಂಜನೇಯ, ಶಿವಗಂಗೆ ದೇವಾಲಯ ನಿರ್ಮಾಣ ಮಾಡಿದ್ದಾರೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಮಲ್ಲೇಶಪ್ಪ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಉಪಸ್ಥಿತರಿದ್ದರು.

ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ಕಲಾ ತಂಡದವರು ನಾಡಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT