ಭಾನುವಾರ, ಜುಲೈ 25, 2021
22 °C

ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಬಂದಿದ್ದ ಶಿಕ್ಷಕರಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ನಗರದ ಡಾನ್‌ ಬಾಸ್ಕೊ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ನಿಯೋಜನೆಗೊಂಡಿದ್ದ 45 ವರ್ಷದ ಶಿಕ್ಷಕರೊಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಕೆಲ ದಿನಗಳ ಹಿಂದೆ ಅವರು ಗಂಟಲು ದ್ರವ ಮಾದರಿ ನೀಡಿದ್ದರು. ವಾರ ಕಳೆದರೂ ವರದಿ ಬಾರದ ಕಾರಣ ಮೌಲ್ಯಮಾಪನಕ್ಕೆ ಹಾಜರಾಗಿದ್ದರು. ಶುಕ್ರವಾರ ಅವರಿಗೆ ಕರೆ ಬಂದಾಗ ಕೋವಿಡ್‌ ದೃಢಪಟ್ಟಿರುವುದು ತಿಳಿದು ಬಂದಿದೆ. ಆದರೆ, ಅವರ ಪತ್ನಿ, ಮಕ್ಕಳಿಗೆ ನೆಗೆಟಿವ್‌ ಬಂದಿದೆ.

ವಿಷಯ ತಿಳಿದ ಡಿಡಿಪಿಐ ಶ್ರೀನಿವಾಸರೆಡ್ಡಿ ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡಿ ಶಿಕ್ಷಕರಿಗೆ ಧೈರ್ಯ ತುಂಬಿದ್ದಾರೆ. 

‘ಹಿಂದಿ ಶಿಕ್ಷಕರು ಮೌಲ್ಯಮಾಪನ ಮಾಡುವ ಕೋಣೆಯಲ್ಲಿ 12 ರಿಂದ 14 ಶಿಕ್ಷಕರು ಇದ್ದಾರೆ. ಅವರಲ್ಲಿ ಇಬ್ಬರು ಮಾತ್ರ ಹೆಚ್ಚಿನ ಸಂಪರ್ಕಕ್ಕೆ ಬಂದಿದ್ದಾರೆ. ಆದರೂ ಎಲ್ಲ ಶಿಕ್ಷಕರಿಗೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸಿದ್ದೇನೆ. ಈಗ ಅವರೆಲ್ಲರೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ’ ಎಂದು ಡಿಡಿಪಿಐ ಶ್ರೀನಿವಾಸರೆಡ್ಡಿ ತಿಳಿಸಿದರು.

‘ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ನಮೋಶಿಯವರು ಬುಧವಾರ ಡಾನ್‌ ಬಾಸ್ಕೊ ಶಾಲೆಗೆ ಭೇಟಿ ನೀಡಿದರು. ಆದರೆ, ಶಿಕ್ಷಕರನ್ನು ಭೇಟಿ ಮಾಡಿಲ್ಲ. ಹಿಂದಿ ಮೌಲ್ಯಮಾಪನ ಮುಗಿದಿದೆ. ಪಾಸಿಟಿವ್‌ ಬಂದ ಶಿಕ್ಷಕರು ಊರಿಗೆ ತೆರಳಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಾನು ಇಲ್ಲಿ ಆರಾಮಾಗಿದ್ದೇನೆ. ಯಾವುದೇ ಲಕ್ಷಣಗಳು ಇಲ್ಲ. ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ ನೀಡುತ್ತಿದ್ದಾರೆ. ಮನೆಯವರಿಗೆ ನೆಗೆಟಿವ್ ಬಂದಿದೆ. ಮನೆಯಲ್ಲಿ ಮಕ್ಕಳು ಇರುವುದರಿಂದ ಯಾದಗಿರಿಯಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಸೋಂಕು ಎಲ್ಲಿಂದ ಬಂತು ತಗುಲಿತು ಎಂದು ತಿಳಿಯದಾಗಿದೆ. ಕೆಲ ದಿನಗಳ ಮಟ್ಟಿಗೆ ಇಲ್ಲಿಯೇ ಇರಲು ಸೂಚಿಸಿದ್ದಾರೆ’ ಎಂದು ದೂರವಾಣಿ ಮೂಲಕ ಶಿಕ್ಷಕರು ಮಾಹಿತಿ ನೀಡಿದರು.  

ನಗರದ ಡಾನ್‌ ಬಾಸ್ಕೊ, ಆರ್‌ವಿ ಶಾಲೆ, ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.