ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ/ವಡಗೇರಾ: ಕೃಷ್ಣಾ ನದಿ ದಂಡೆಯ ಹಲವು ಹಳ್ಳಿಗಳ ಸಂಪರ್ಕ ಸ್ಥಗಿತ

ಕೃಷ್ಣಾ ನದಿ ದಡದ 10 ಹಳ್ಳಿಗಳ ಜನರಲ್ಲಿ ಹೆಚ್ಚಿದ ಆತಂಕ; ಅಪಾರ ಪ್ರಮಾಣದ ಬೆಳೆ ಹಾನಿ
Last Updated 30 ಜುಲೈ 2021, 3:45 IST
ಅಕ್ಷರ ಗಾತ್ರ

ಶಹಾಪುರ/ವಡಗೇರಾ: ನಾರಾಯಣಪುರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಗುರುವಾರ ಶಹಾಪುರ ಹಾಗೂ ವಡಗೇರಾ ತಾಲ್ಲೂಕಿನ ಕೃಷ್ಣಾ ನದಿ ದಂಡೆಯ ಹಲವು ಹಳ್ಳಿಗಳ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ)- ಮರಕಲ್ ನಡುವಿನ ರಸ್ತೆ ಸಂಪರ್ಕ ಸ್ಥಗಿತವಾಗಿದೆ. ಇದರಿಂದ ಸುರಪುರ ತಾಲ್ಲೂಕು ಹಾಗೂ ಶಹಾಪುರಕ್ಕೆ ಆಗಮಿಸಲು ಪರದಾಡುವಂತೆ ಆಗಿದೆ. ಅಲ್ಲದೆ ಗೂಗಲ್ ಬ್ರಿಜ್ ಕಂ ಬ್ಯಾರೇಜಿನ ಮೇಲೆ ವಾಹನ ಓಡಾಟವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಳಿಸಿದ್ದರಿಂದ ರಾಯಚೂರು ಜಿಲ್ಲೆಗೆ ರಸ್ತೆ ಸಂಚಾರ ಸ್ಥಗಿತವಾಗಿದೆ.

ವಡಗೇರಾ ತಾಲ್ಲೂಕಿನ ಐಕೂರ-ಹಯ್ಯಾಳದ ಸಮೀಪದಲ್ಲಿ ಸೇತುವೆ ಮೇಲೆ ನೀರು ಹರಿದು ಬರುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಒಂದು ಎನ್‌ಡಿಆರ್‌ಎಫ್ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಮೊಕಾಂ ಹೂಡಿದ್ದಾರೆ. ಪ್ರವಾಹಕ್ಕೆ ತುತ್ತಾದ ಹಳ್ಳಿಗಳಿಗೆ ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೃಷ್ಣಾ ನದಿಯ ಪ್ರವಾಹದಿಂದ ವಡಗೇರಾ ತಾಲ್ಲೂಕಿನ ಕದರಾಪುರ, ಬೆಂಡಬೆಂಬಳಿ, ಕೋಡಾಲ್, ಶಿವಪುರ, ಗೋನಾಲ, ಅಗ್ನಿಹಾಳ, ಗುಂಡ್ಲೂರ ಸೇರಿದಂತೆ ಹಲವಾರು ಗ್ರಾಮಗಳ ಹೊಲದಲ್ಲಿ ನೀರು ನುಗ್ಗಿದೆ. ನಾಟಿ ಮಾಡಿದ ಭತ್ತ, ಹತ್ತಿ ಬೆಳೆಗೆ ಅಪಾರ ಹಾನಿಯಾಗಿದೆ. ಅಲ್ಲದೆ ನೀರಿನ ಮಟ್ಟ ಏರಿಕೆಯಿಂದಲೂ ಇನ್ನಷ್ಟು ಭೀತಿ ಉಂಟಾಗಿದೆ ಎನ್ನುತ್ತಾರೆ ಗುಂಡ್ಲೂರ ಗ್ರಾಮದ ಮಹಿಬೂಬು ಸಾಬ್.

ಅಲ್ಲದೆ ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ), ಮರಕಲ್, ಗೌಡೂರ, ಟೊಣ್ಣೂರ ಗ್ರಾಮಗಳು ಪ್ರವಾಹದ ಹೊಡೆತಕ್ಕೆ ತತ್ತರಿಸಿವೆ. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದರಿಂದ ಪ್ರವಾಹದ ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ನಮ್ಮನ್ನು ಕಾಡುತ್ತಲಿದೆ ಎನ್ನುತ್ತಾರೆ ಕೊಳ್ಳುರ ಗ್ರಾಮದ ನಿವಾಸಿ ಹಣಮಂತ.

ತಾಲ್ಲೂಕಿನ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅರಿತುಕೊಂಡಿರುವೆ.

ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪನೆಗೆ ಸಿದ್ದಗೊಳಿಸಲಾಗಿದೆ ಎಂದು ತಹಶೀಲ್ದಾರ್ ಮಧುರಾಜ ತಿಳಿಸಿದರು.

ನೀರಿನಲ್ಲಿ ಮುಳುಗಿದ ಎಂಟು ಗುಡಿಸಲುಗಳು

ವಡಗೇರಾ ತಾಲ್ಲೂಕಿನ ಕದರಾಪುರ ಗ್ರಾಮದಲ್ಲಿರುವ 38 ಮೀನುಗಾರರ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ನೀರಿನಲ್ಲಿ ಎಂಟು ಗುಡಿಸಲು ಮುಳುಗಿದ್ದರಿಂದ ಸಂಗ್ರಹಿಸಿ ಇಟ್ಟಿದ್ದ ಆಹಾರ ಧಾನ್ಯಗಳು ನೀರು ಪಾಲಾಗಿವೆ. ನದಿಯಲ್ಲಿ ಬಿಟ್ಟಿದ್ದ ಬೆಂಡ್, ಬಲೆಗಳು ಪ್ರವಾಹದ ಸೆಳೆತಕ್ಕೆ ಕೊಚ್ಚಿ ಹೋಗಿವೆ. ಸಂಕಷ್ಟದ ಜೀವನ ಎದುರಿಸುತ್ತಿರುವ ಮೀನುಗಾರರ ಕುಟುಂಬದ ಸ್ಥಳಕ್ಕೆ ಒಬ್ಬ ಅಧಿಕಾರಿ, ಜನಪ್ರತಿನಿಧಿ ಭೇಟಿ ನೀಡಿಲ್ಲ. ಈಗ ಊಟಕ್ಕೂ ಪರದಾಡುವ ದುಸ್ಥಿತಿ ಎದುರಿಸುವಂತೆ ಆಗಿದೆ. ತಕ್ಷಣ ನಮಗೆ ಅಗತ್ಯ ಆಹಾರ ಧಾನ್ಯ ಒದಗಿಸಬೇಕು ಎಂದು ಅಲ್ಲಿನ ಸಂಕಷ್ಟ ಎದುರಿಸುತ್ತಿರುವ ಮೀನುಗಾರರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಗೌಡೂರ: ಶುದ್ಧ ಕುಡಿಯುವ ನೀರು

ಶಹಾಪುರ ತಾಲ್ಲೂಕಿನ ಗೌಡೂರ ಗ್ರಾಮದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದ ವಿದ್ಯುತ್ ಬಿಲ್ ಪಾವತಿಸದ ಕಾರಣ ಸಂಪರ್ಕವನ್ನು ಜೆಸ್ಕಾಂ ಸಿಬ್ಬಂದಿ ಸ್ಥಗಿತಗೊಳಿಸಿದ್ದರು. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿತ್ತು. ಕೊನೆಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಗುರುವಾರ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂದು ಗ್ರಾಮ ಮುಖಂಡ ದೇವಿಂದ್ರ ಚಲವಾದಿ ತಿಳಿಸಿದರು.

ವಿದ್ಯುತ್ ಸಂಪರ್ಕ ಸ್ಥಗಿತದ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT