ಶುಕ್ರವಾರ, ಅಕ್ಟೋಬರ್ 22, 2021
29 °C
ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ಹಣ ದುರ್ಬಳಕೆ- ಆರೋಪ

ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್ :ವ್ಯವಸ್ಥಾಪಕ ಸೇರಿ ಇಬ್ಬರು ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಬ್ಯಾಂಕ್‌ನ ಆಡಳಿತ ಮಂಡಳಿಯ ಅನುಮತಿಯನ್ನು ಪಡೆದುಕೊಳ್ಳದೆ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್‌ನ ವ್ಯವಸ್ಥಾಪಕ ಚೆನ್ನಬಸಪ್ಪ ಬೆನಕಾ ಹಾಗೂ ಕ್ಯಾಶಿಯರ್ ಭೀಮಸಿಂಗ್ ರಜಪೂತ ಅವರು ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಇಬ್ಬರನ್ನು ಸೇವೆಯಿಂದ ಅಮಾತುಗೊಳಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಕ್ಯಾಶಿಯರ್ ಶಾಮೀಲಾಗಿ ಸರಿಯಾಗಿ ಕ್ಯಾಸ್ ಬುಕ್, ಬ್ಯಾಲೇನ್ಸ್, ಗೋಲ್ಡ್ ಲೋನ್, ಆಸ್ತಿ ವತ್ತಿ ಸಾಲದ ಬಗ್ಗೆ ಸರಿಯಾದ ನಿರ್ವಹಣೆ ಮಾಡಿಲ್ಲ. ಅಲ್ಲದೆ ಬ್ಯಾಂಕಿನ ಹನಿ ಸಂಗ್ರಹಕಾರರಾದ ತುಕರಾಮ ಬಾಸುತ್ಕರ್ ಅವರು ₹18 ಲಕ್ಷ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ನಾಲ್ಕು ವರ್ಷದ ಹಿಂದೆ ಬೆಳಕಿಗೆ ಬಂದಿದ್ದರೂ ಬ್ಯಾಂಕ್ ಅಧ್ಯಕ್ಷರು ಕ್ರಮ ತೆಗೆದುಕೊಂಡಿಲ್ಲ. ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರ ಮೊತ್ತ ಹಾಗೂ ಅವ್ಯವಹಾರದಲ್ಲಿ ಶಾಮೀಲಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು 2020 ಜನೇವರಿ 1ರಂದು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾದ ಮಾಂಗಿಲಾಲ್ ಜೈನ್, ಚೆನ್ನನಗೌಡ ಪಾಟೀಲ, ಬಸವರಾಜ ಆನೇಗುಂದಿ ಅವರು ಜಂಟಿಯಾಗಿ ಯಾದಗಿರಿ ಜಿಲ್ಲಾ ಸಹಕಾರ ಸಹಾಯಕ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಅದರಂತೆ ಯಾದಗಿರಿ ಜಿಲ್ಲಾ ಸಹಕಾರ ಸಹಾಯಕ ನೋಂದಣಾಧಿಕಾರಿ ವಿಚಾರಣೆ ನಡೆಸಿ 2020 ಜುಲೈ 17ರಂದು ವರದಿ ನೀಡಿ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉಪನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.

26 ವರ್ಷ ಹಿಂದೆ ಬ್ಯಾಂಕ್ ಸ್ಥಾಪನೆಯಾಗಿದೆ. 4,023 ಸದಸ್ಯರಿದ್ದಾರೆ. ₹1.88ಕೋಟಿ ಠೇವಣಿ ಇದೆ. ₹29.48 ಕೋಟಿ ಬ್ಯಾಂಕಿನ ವಹಿವಾಟು ನಡೆದಿದೆ. ಆರ್.ಬಿ.ಐ ನಿಯಮಗಳನ್ನು ಸರಿಯಾಗಿ ಬ್ಯಾಂಕ್ ಪಾಲಿಸದ ಕಾರಣ ₹40 ಸಾವಿರ ದಂಡವನ್ನು ಸಹ ಪಾವತಿಸಿದೆ. ಬ್ಯಾಂಕಿನ ಸಿಬ್ಬಂದಿಯವರು ಬೇನಾಮಿ ಹೆಸರಿನಲ್ಲಿ ಖಾತೆ ತೆರೆದು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಸ್ಥಿರಸ್ತಿ ಹಾಗೂ ಬಂಗಾರದ ಮೇಲೆ ಅಡವಿಟ್ಟ ವಸ್ತುಗಳನ್ನು ಹರಾಜು ಮಾಡಿ ಹಣ ಪಾವತಿಸಿಕೊಳ್ಳುವ ನಿಗದಿಪಡಿಸಿದ ಅವಧಿ ಮುಕ್ತಾಯವಾಗಿದ್ದರು ಸಹ ಬ್ಯಾಂಕಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ತಕ್ಷಣ ಬ್ಯಾಂಕನ್ನು ಸೂಪರ ಸೀಡ್ ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಬಸರಾಜ ಅರುಣಿ ಅವರು ಸಹಕಾರ ಸಚಿವ ವಿ.ಸೋಮಶೇಖರ ಅವರಿಗೆ ಮನವಿ ಮಾಡಿದ್ದಾರೆ.

***

ಬ್ಯಾಂಕ್‌ನಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಆಡಳಿತ ಮಂಡಳಿಯ ನಿರ್ಣಯದಂತೆ ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಕ್ಯಾಶಯರ್ ಅವರನ್ನು ಕರ್ತವ್ಯದಿಂದ ಎರಡು ದಿನದ ಹಿಂದೆ ಅಮಾನತುಗೊಳಿಸಿದೆ.
ಬಸವರಾಜ ಜಿ.ಹಿರೇಮಠ, ಅಧ್ಯಕ್ಷ, ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್

***

ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಶಾಮೀಲಾಗಿ ಷೇರುದಾರರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಿರುವುದು ಸಾಕ್ಷಿಯಾಗಿದೆ. ಆಡಳಿತ ಮಂಡಳಿಯನ್ನು ಸೂಪರ ಸೀಡ್ ಮಾಡಿ ಸಮಗ್ರ ತನಿಖೆ ನಡೆಸಬೇಕು.
ಬಸವರಾಜ ಅರುಣಿ, ಬ್ಯಾಂಕ್‌ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು