ಸೋಮವಾರ, ಜುಲೈ 4, 2022
24 °C
ಜಿಲ್ಲೆಯಲ್ಲಿ ಹೈನುಗಾರಿಕೆಗೆ ಹಿನ್ನೆಡೆ; ಪ್ರಗತಿಯಲ್ಲಿ 26 ಕಟ್ಟಡಗಳು

ನಮ್ಮ ಜನ ನಮ್ಮ ಧ್ವನಿ– ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ; ಚಿಕಿತ್ಸೆ ಮರೀಚಿಕೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪಶು ವೈದ್ಯಕೀಯ ಇಲಾಖೆಯಲ್ಲಿ ಒಂದೆಡೆ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿದ್ದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ಹೈನುಗಾರಿಕೆ ಪ್ರೋತ್ಸಾಹ ಇಲ್ಲದ ಕಾರಣ ಪಶುವೈದ್ಯಕೀಯ ಸೇವೆಗಳು ಸಮರ್ಪಕವಾಗಿ ಸಿಗುತ್ತಿಲ್ಲ.

ಪಶುಸಂಗೋಪನೆ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಗ್ರಾಮೀಣ ಭಾಗದಲ್ಲಿ ಪಶು ವೈದ್ಯಕೀಯ ಸೇವೆ ಸರಿಯಾಗಿ ತಲುಪುತ್ತಿಲ್ಲ. ಕಟ್ಟಡಗಳು ಪಾಳು ಬಿದ್ದಿದ್ದು, ವೈದ್ಯರು ಸಕಾಲಕ್ಕೆ ಲಭ್ಯವಾಗುವುದಿಲ್ಲ ಎಂಬ ಆರೋಪವಿದೆ.

ಜಿಲ್ಲೆಯಲ್ಲಿ 96 ಕಟ್ಟಡಗಳು ಮಂಜೂರು ಆಗಿದ್ದು, ಇದರಲ್ಲಿ 26 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ.

‘ಎ’ ಗ್ರೂಪ್‌ನಲ್ಲಿ 67 ಹುದ್ದೆಗಳು ಮಂಜೂರು ಆಗಿದ್ದು, 27 ಭರ್ತಿಯಾಗಿವೆ. 40 ಹುದ್ದೆಗಳು ಖಾಲಿ ಇವೆ. ‘ಬಿ’ ಗ್ರೂಪ್‌ನಲ್ಲಿ 5 ಹುದ್ದೆಗಳಿದ್ದರೆ, ಒಂದು ಭರ್ತಿಯಾಗಿದೆ. 4 ಖಾಲಿ ಇವೆ. ‘ಸಿ’ ಗ್ರೂಪ್‌ನಲ್ಲಿ 164ರಲ್ಲಿ 125 ಹುದ್ದೆಗಳು ಭರ್ತಿಯಾಗಿದ್ದರೆ, 39 ಖಾಲಿ ಇವೆ.

60 ‘ಡಿ’ ದರ್ಜೆ ಹೊರಗುತ್ತಿಗೆಯಲ್ಲಿ ನೇಮಕ: ಜಿಲ್ಲೆಯ ಪಶು ಆಸ್ಪತ್ರೆ ಸೇರಿದಂತೆ ಚಿಕಿತ್ಸಾಲಯಗಳಲ್ಲಿ ‘ಡಿ’ ದರ್ಜೆ ನೌಕರರ ನೇಮಕವಾಗದ ಕಾರಣ ಹೊರ ಗುತ್ತಿಗೆ ಆಧಾರದ ಮೇಲೆ 60 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ನೇಮಕವಾದ ಕಾರಣ ಎಲ್ಲ ಕಡೆ ಸಿಬ್ಬಂದಿ ಕೊರತೆ ಅಧಿಕವಾಗಿದೆ.

156 ಮಂಜೂರು ಆಗಿದ್ದರೆ 71 ಭರ್ತಿಯಾಗಿದ್ದು, 85 ಹುದ್ದೆಗಳು ಖಾಲಿ ಇವೆ. ಇದರಿಂದ ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

ಒಟ್ಟಾರೆ 392 ಹುದ್ದೆಗಳು ಜಿಲ್ಲೆಗೆ ಮಂಜೂರು ಆಗಿವೆ. 216 ಭರ್ತಿಯಾಗಿದ್ದು, 168 ಹುದ್ದೆಗಳು ಖಾಲಿ ಇವೆ. ಇದರಿಂದ ಕೆಲವರ ಮೇಲೆ ಅಧಿಕ ಭಾರ ಬಿದ್ದು, ಸಮರ್ಪಕ ಕೆಲಸಗಳು ಆಗುತ್ತಿಲ್ಲ.

ಜಿಲ್ಲೆಯಲ್ಲಿ ಒಂದೇ ಪಾಲಿ ಕ್ಲಿನಿಕ್‌: ಜಿಲ್ಲೆಯಲ್ಲಿ ಯಾದಗಿರಿ ನಗರದಲ್ಲಿ ಮಾತ್ರ ಒಂದು ಪಾಲಿ ಕ್ಲಿನಿಕ್‌ ಇದೆ. ಇಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳು, ಕಟ್ಟಡ ಇದೆ. ಆದಕ್ಕೆ ತಕ್ಕಂತೆ ವೈದ್ಯರು, ಸಿಬ್ಬಂದಿ ಇಲ್ಲ. ಇದರಿಂದ ರೈತರು ಸಮಸ್ಯೆಯನ್ನು ಎದುರಿಸುವಂತಾಗಿದೆ.

ಸಂಚಾರ ಪಶು ಚಿಕಿತ್ಸಾಲಯ: ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ಮೂರು ತಾಲ್ಲೂಕುಗಳಲ್ಲಿ ಸಂಚಾರ ಪಶು ಚಿಕಿತ್ಸಾಲಯ ವಾಹನ ಸೌಲಭ್ಯವಿದೆ. ಪಶು ಆಸ್ಪತ್ರೆ ಇಲ್ಲದ ಕಡೆ ಪ್ರತಿದಿನ ಮೂರ್ನಾಲ್ಕು ಗ್ರಾಮಗಳಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಪಶು ವೈದ್ಯ ಮೂಲಗಳು ತಿಳಿಸಿವೆ.

7 ಮಾತ್ರ ಕಾರ್ಯನಿರ್ಹಹಣೆ: ಜಿಲ್ಲೆಯಲ್ಲಿ 86 ಪೈಕಿ 7 ಹಾಲು ಉತ್ಪಾದನಾ ಕೇಂದ್ರಗಳು ಮಾತ್ರ ಕಾರ್ಯನಿರ್ಹಿಸುತ್ತಿವೆ. ಇದು ಹುಣಸಗಿ ತಾಲ್ಲೂಕಿನಲ್ಲಿ ಮಾತ್ರ ಸಂಘಗಳಿವೆ. ಬೇರೆ ಕಡೆ ಎಲ್ಲ ಮುಚ್ಚಲಾಗಿದೆ.

7 ಕೇಂದ್ರಗಳಲ್ಲಿ ಮೂರು ದಿನಕ್ಕೊಮ್ಮೆ 1,000 ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಜಿಲ್ಲೆಯ ಬೇರೆ ಕಡೆ ಇದ್ದರೂ ಅವುಗಳಿಗೆ ಈಗ ಬೀಗ ಹಾಕಲಾಗಿದೆ. ಇದರಿಂದ ಪಶುಗಳನ್ನು ಸಾಕಲು ತೊಂದರೆಯಾಗಿದೆ.

ಹಾಲು ಶೀತಲೀಕರಣ ಘಟಕಕ್ಕೆ ಬೀಗ: ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋನಹಳ್ಳಿಯಲ್ಲಿ 1997ರಲ್ಲಿ ಹಾಲು ಶೀತಲೀಕರಣ ಘಟಕ ಆರಂಭಗೊಂಡಿದ್ದರೂ ಕೆಲ ವರ್ಷಗಳಲ್ಲೇ ಮುಚ್ಚಿದ್ದು, ಈಗ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ಬಂದಿದೆ. 10,000 ಸಾವಿರ ಲೀಟರ್‌ ಸಾಮರ್ಥ್ಯದ ಘಟಕ 11 ವರ್ಷ ಕಳೆದರೂ ಮತ್ತೆ ಆರಂಭವಾಗಿಲ್ಲ.

ರಿಯಾಯಿತಿ ಯೋಜನೆಗಳಿಲ್ಲ: ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಸದ್ಯ ರಿಯಾಯ್ತಿ ಯೋಜನೆಗಳಿಲ್ಲ. ಇದರಿಂದ ದನ, ಎಮ್ಮೆ, ಕುರಿ, ಕೋಳಿ ಸಾಕಲು ಹಲವರು ಮುಂದೆ ಬರುತ್ತಿಲ್ಲ. ಈಗ ಕೇವಲ ನಿರ್ವಹಣೆ ವೆಚ್ಚವಾಗಿ ಕಿಸಾನ್‌ ಕ್ರೆಡಿಟ್‌ ಮೂಲಕ ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ಇದರಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೇ ಸಬ್ಸಿಡಿ ಇದ್ದಾಗ ಪಡೆದಿರುವ ಸಾಲ ಮನ್ನಾ ಅಥವಾ ಅರ್ಧ ಸಹಾಯಧನ ಭರಿಸಬೇಕಿತ್ತು. ಈಗ ಇದನ್ನು ತೆಗೆದು ಹಾಕಿದ್ದರಿಂದ ರೈತರು ಉಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಕಲ್ಯಾಣ ಕರ್ನಾಟಕದವರೇ ಆದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಅವರು ಇತ್ತ ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಅವಶ್ಯವಿದೆ ಎಂದು ರೈತರು ಹೇಳುತ್ತಾರೆ.

***

ಚಿಕಿತ್ಸೆಯಲ್ಲಿ ತೀವ್ರ ತೊಂದರೆ

ಸುರಪುರ: ತಾಲ್ಲೂಕಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ. ಇದರಿಂದ ಪಶುಗಳ ಚಿಕಿತ್ಸೆಯಲ್ಲಿ ತೀವ್ರ ತೊಂದರೆಯಾಗಿದೆ ಎಂದು ರೈತರು ದೂರುತ್ತಾರೆ.

ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳಲ್ಲಿ, ಸುರಪುರ, ಕೊಡೇಕಲ್ಲ, ಹುಣಸಗಿ, ಕೆಂಭಾವಿ, ಕಕ್ಕೇರಾಗಳಲ್ಲಿ ಪಶು ಆಸ್ಪತ್ರೆಗಳಿವೆ. ವಿವಿಧ ಗ್ರಾಮಗಳಲ್ಲಿ 17 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 20 ಪಶು ಚಿಕಿತ್ಸಾ ಕೇಂದ್ರಗಳಿವೆ.

ಎಲ್ಲ ಕೇಂದ್ರಗಳಿಗೆ ಕಟ್ಟಡಗಳಿದ್ದರೂ ದುರಸ್ತಿಗೆ ಬಂದಿವೆ. ಸುರಪುರ ಪಶು ಅಸ್ಪತ್ರೆ 40 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಟ್ಟಡ ಶಿಥಿಲಗೊಂಡಿದೆ. ಪಕ್ಕದಲ್ಲೆ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ.

ಸಹಾಯಕ ನಿರ್ದೇಶಕರ ಸ್ಥಾನದಲ್ಲಿ ಪ್ರಭಾರಿ ಇದ್ದಾರೆ. 14 ವೈದ್ಯಾಧಿಕಾರಿಗಳ ಪೈಕಿ ಕೇವಲ 3 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಜಾನುವಾರು ಅಭಿವೃದ್ಧಿ ಅಧಿಕಾರಿ ಹುದ್ದೆ ಮಂಜೂರಿಯಾಗಿದ್ದರೂ ನೇಮಕವಾಗಿಲ್ಲ.

4 ಜನ ಜಾನುವಾರು ಅಧಿಕಾರಿಗಳು ಇದ್ದು, ಇದೊಂದು ಹುದ್ದೆ ಮಾತ್ರ ಪೂರ್ಣ ಪ್ರಮಾಣದಲ್ಲಿದ್ದಾರೆ. 18 ಹಿರಿಯ ಪಶು ವೈದ್ಯಕೀಯ ಪರೀಕ್ಷಕರ ಪೈಕಿ 12 ಜನ ಇದ್ದಾರೆ. 2 ಪಶು ವೈದ್ಯಕೀಯ ಪರೀಕ್ಷಕರ ಹುದ್ದೆ ಖಾಲಿ ಇವೆ.

20 ಮಂಜೂರಾದ ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ಪೈಕಿ ಕೇವಲ 10 ಜನ ಇದ್ದಾರೆ. ಎಸ್‌ಡಿಎ, ಚಾಲಕ ಇದ್ದಾರೆ. 45 ‘ಡಿ’ ದರ್ಜೆ ನೌಕರರಲ್ಲಿ ಕೇವಲ 11 ಜನ ಕರ್ತವ್ಯದಲ್ಲಿದ್ದಾರೆ.

***

ಪಶು ಸಂಗೋಪನೆ 56 ಹುದ್ದೆ ಖಾಲಿ!

ಶಹಾಪುರ: ಶಹಾಪುರ ಹಾಗೂ ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ 20 ಪಶು ಚಿಕಿತ್ಸಾ ಕೇಂದ್ರಗಳಿವೆ. ಅದರಲ್ಲಿ 7 ವೈದ್ಯರ ಹುದ್ದೆ ಖಾಲಿ ಇವೆ. ಪಶು ಸಂಗೋಪನೆ ಇಲಾಖೆಯಲ್ಲಿ 106 ಸಿಬ್ಬಂದಿ ಮಂಜೂರಾತಿಯಲ್ಲಿ 56 ಹುದ್ದೆ ಖಾಲಿ ಇವೆ. 82 ಸಾವಿರ ಜಾನುವಾರುಗಳಿವೆ. ಅಲ್ಲದೆ 1.57 ಲಕ್ಷ ಕುರಿ, ಆಡು ಸಾಕಾಣಿಕೆ ಮಾಡಲಾಗುತ್ತಿದೆ ಎಂದು ಪಶು ಸಂಗೋಪನೆಯ ಇಲಾಖೆಯ ಮೂಲಗಳು ತಿಳಿಸಿವೆ.

‘ತಾಲ್ಲೂಕಿನ ಬಹುತೇಕ ಪಶು ಚಿಕಿತ್ಸೆ ಕೇಂದ್ರಗಳಿಗೆ ವೈದ್ಯರು ನಿಗದಿತ ಸಮಯಕ್ಕೆ ಬರುವುದಿಲ್ಲ. ಅಲ್ಲಿನ ಸಿಬ್ಬಂದಿಯ ಕಾರುಬಾರು ಇರುತ್ತದೆ. ಆಸ್ಪತ್ರೆಗೆ ತೆರಳಿ ಜಾನುವಾರುಗಳಿಗೆ ತಗುಲಿದ ರೋಗದ ಬಗ್ಗೆ ಮಾಹಿತಿ ನೀಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ’ ಎಂದು ರೈತರು ಹೇಳುತ್ತಾರೆ.

ಪಶು ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯ ಹಾಗೂ ಮಾಹಿತಿಯನ್ನು ಅಲ್ಲಿನ ಸಿಬ್ಬಂದಿ ನೀಡುವುದಿಲ್ಲ. ಕೆಲ ದಲ್ಲಾಳಿಗೆ ಮಾತ್ರ ನೀಡಿ ಸರ್ಕಾರದಿಂದ ಬರುವ ಸಹಾಯ ಧನ ಎಗರಿಸುತ್ತಾರೆ. ಹೈನುಗಾರಿಕೆ ಸಾಕಾಣಿಕೆಗೆ ಪ್ರೋತ್ಸಾಹ ಇಲ್ಲದಂತೆ ಆಗಿದೆ.

‘ಇಲ್ಲಿನ ಪ್ರದೇಶ ನೀರಾವರಿ ಇದ್ದರೂ ರೈತರು ಹೈನುಗಾರಿಕೆ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರದಿಂದ ಬರುವ ಸಹಾಯ ಧನ ಪಡೆಯಲು ಮಾತ್ರ ಜಾನುವಾರು ಹಾಗೂ ಕುರಿಗಳನ್ನು ತೋರಿಸಿ ಮುರುವು ಹಾಕಿಸುತ್ತಾರೆ. ನಂತರ ಮಾರಾಟ ಮಾಡುತ್ತಿರುವುದು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ರೈತರೂ ಸಹಾಯಧನವನ್ನು ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಪಶು ವೈದ್ಯರು ಒಬ್ಬರು ಬೇಸರ ವ್ಯಕ್ತಪಡಿಸಿದರು.

***

ಹುಣಸಗಿ: ಶೇ 60 ಹುದ್ದೆಗಳು ಖಾಲಿ

ಹುಣಸಗಿ: ಹುಣಸಗಿ ತಾಲ್ಲೂಕಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ನಡೆಯುವ ಪಶು ಆಸ್ಪತ್ರೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿ ಇದ್ದು, ಇದ್ದುದರಲ್ಲಿಯೇ ಅಲ್ಪ ಸೌಲಭ್ಯ ಸಿಗುತ್ತಿವೆ.

‘ಪಟ್ಟಣದಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿ ಸೇರಿದಂತೆ 15 ಕೇಂದ್ರಗಳ ವ್ಯಾಪ್ತಿಯಿದ್ದು, ಶೇ 60 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ’ ಎಂದು ಪ್ರಭಾರಿ ಸಹಾಯಕ ನಿರ್ದೇಶಕ ಮಹಿಬೂಬಸಾಬ ಖಾಜಿ ತಿಳಿಸಿದರು.

ಹುಣಸಗಿ, ಚನ್ನೂರ, ಹೆಬ್ಬಾಳ, ಮುದನೂರ, ಕೂಡಲಗಿ, ಕೊಡೇಕಲ್ಲ, ಹಗರಟಗಿ, ನಾರಾಯಣಪುರ ಸೇರಿದಂತೆ 15 ಕೇಂದ್ರಗಳಲ್ಲಿ ಲಭ್ಯವಿರುವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಐವರು ಪಶು ವೈದ್ಯರಲ್ಲಿ ಇಬ್ಬರು ಇದ್ದು, 15 ಪಶು ನಿರೀಕ್ಷಕರಲ್ಲಿ 7 ಜನ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ‘ಡಿ’ ದರ್ಜೆ ಹುದ್ದೆ ಖಾಲಿಯಾಗಿವೆ.

‘ತಾಲ್ಲೂಕಿನಲ್ಲಿ ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾಲು ಮತ್ತು ಬಾಯಿಬೇನೆ ಲಸಿಕೆ ಶೇ 90 ರಷ್ಟು ಗುರಿ ಸಾಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

***

ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈಚೆಗೆ ನಾಲ್ಕು ಹುದ್ದೆ ಭರ್ತಿಯಾಗಿದೆ. ಜಿಲ್ಲೆಯಲ್ಲಿ 26 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ

- ಡಾ.ಐಗಳಿ ಭುಜಬಲಿ, ಪಶುವೈದ್ಯ ಸೇವೆಗಳ ಉಪನಿರ್ದೇಶಕ

***
ಸಂಚಾರ ವಾಹನವಿದ್ದರೂ ಮನಸ್ಸಿಗೆ ಬಂದಾಗ ಬರುತ್ತಾರೆ. ಇದರಿಂದ ಆಸ್ಪತ್ರೆ ಅಕ್ಕಪಕ್ಕದ ಗ್ರಾಮಗಳವರು ಪರದಾಡುತ್ತಿದ್ದಾರೆ. ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಲಿ

- ದೇವೇಂದ್ರಪ್ಪ ಕಿಣಕೇರಿ ಬಂದಳ್ಳಿ, ರೈತ

***
ಶೇ 40 ರಷ್ಟು ಸಿಬ್ಬಂದಿ ಮಾತ್ರ ಇದ್ದಾರೆ. ಹೀಗಾಗಿ ಕೆಲಸ ನಿರ್ವಹಿಸಲು ತೊಂದರೆಯಿದೆ. ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ

- ಡಾ.ಸುರೇಶ ಹಚ್ಚಡ, ಪ್ರಭಾರಿ ಸಹಾಯಕ ನಿರ್ದೇಶಕ, ಸುರಪುರ

****
ಮಂಜೂರಾದ ಹುದ್ದೆಗೆ ಅನುಗುಣವಾಗಿ ಸಿಬ್ಬಂದಿ ಇಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ಪಶು, ಪಕ್ಷಿ, ಪ್ರಾಣಿಗಳು ಚಿಕಿತ್ಸೆಯಿಲ್ಲದೆ ಸಾಯುವಂತಾಗಿದೆ

- ರಾಜಾ ಪಿಡ್ಡನಾಯಕ ದರಬಾರ, ಸುರಪುರ

***
ಜಾನುವಾರುಗಳ ಚಿಕಿತ್ಸೆಗೆ ಔಷಧಿಯ ಕೊರತೆಯಿಲ್ಲ. ಕೋವಿಡ್ ಸಂಕಷ್ಟದ ಕಾಲದಲ್ಲಿ ಕುರಿ ಹಾಗೂ ಮೇಕೆ ಸಾಕಾಣಿಕೆ ಹೆಚ್ಚಾಗಿದೆ. ಪಶು ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ

- ಡಾ.ಷಣ್ಮುಖ ಗೊಂಗಡ, ಪಶು ವೈದ್ಯಾಧಿಕಾರಿ, ಶಹಾಪುರ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು