ಶುಕ್ರವಾರ, ಮಾರ್ಚ್ 5, 2021
23 °C
ಅಂತರರಾಷ್ಟ್ರೀಯ ಲಂಬಾಣಿ ಮಹಿಳೆಯರ ಸಮಾವೇಶದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ

ಲಂಬಾಣಿ ಆಚರಣೆ ರಕ್ಷಣೆಗೆ ‘ಗೋರ್ ಸೀಕವಾಡಿ’

ಮಲ್ಲೇಶ್ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Deccan Herald

ಯಾದಗಿರಿ: ‘ಬಂಜಾರ ’ ಬಹು ಆಕರ್ಷಣೆಯ ಬುಡಕಟ್ಟು ಸಮುದಾಯ. ಈ ಸಮುದಾಯದಲ್ಲಿ ಇರುವ ಆಚರಣೆ, ಸಂಪ್ರದಾಯ, ಉಡುಗೆ–ತೊಡುಗೆ ವೈವಿಧ್ಯ ಮತ್ತು ವಿಶಿಷ್ಟ. ಆದರೆ, ಆಧುನಿಕತೆಗೆ ಈ ಸಮುದಾಯ ತೆರೆದುಕೊಂಡಿರುವ ಪರಿಣಾಮ, ಲಂಬಾಣಿ ಸಂಪ್ರದಾಯ, ಆಚರಣೆಗಳು ಕಣ್ಮರೆಯಾಗುತ್ತಿದೆ. ಬುಡಕಟ್ಟಿನಿಂದ ಆಚರಣೆ, ಸಂಪ್ರದಾಯ ಕಣ್ಮರೆಗೊಳ್ಳದಂತೆ ‘ಗೋರ್‌ ಸೀಕವಾಡಿ’ ಸಾಮಾಜಿಕ ಸಂಘಟನೆ ಹುಟ್ಟಿಕೊಂಡಿದ್ದು, ಬುಡಕಟ್ಟಿನ ಆಚರಣೆಗಳ ರಕ್ಷಣೆಗೆ ಶ್ರಮಿಸುತ್ತಿದೆ.

‘ಗೋರ್ ಸೀಕವಾಡಿ’ 20 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿರುವ ಸಂಘಟನೆ. ಯುವಕರು ಸಂಘಟನೆಯಲ್ಲಿ ಇದ್ದಾರೆ. ಲಂಬಾಣಿ ಸಂಪ್ರದಾಯ, ಆಚರಣೆ, ಭಾಷೆ ಅಭಿವೃದ್ಧಿ ಜತೆಗೆ ಲಂಬಾಣಿ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಧ್ಯೇಯವನ್ನು ಈ ಸಂಘಟನೆ ಹೊಂದಿದೆ. ಲಂಬಾಣಿಗರನ್ನು ಜಾಗೃತರನ್ನಾಗಿಸುವುದರ ಜತೆಗೆ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ಸಹಾಯಹಸ್ತ ಕೂಡ ಚಾಚುತ್ತಾ ಬಂದಿದೆ.

‘ಗೋರ್ ಸೀಕವಾಡಿ’ ಕೇವಲ ಮಹಾರಾಷ್ಟ್ರ, ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ಭಾರತದಾದ್ಯಂತ ಆಚರಣೆ, ಸಂಪ್ರದಾಯ ರಕ್ಷಣೆ ಕುರಿತು ಅರಿವು ಕಾರ್ಯಕ್ರಮಗಳನ್ನು ನೀಡುವ ಕೆಲಸ ಮಾಡುತ್ತಿದೆ.

ಮುಖ್ಯವಾಗಿ ಲಂಬಾಣಿ ಭಾಷೆ ಉಳಿವಿನ ಬಗ್ಗೆ ವಿಶೇಷ ಆದ್ಯತೆ ನೀಡಿದೆ. ಈಗಿನ ಪೀಳಿಗೆ ಭಾಷೆಯಿಂದ ವಿಮುಖರಾಗುತ್ತಿದ್ದಾರೆ ಎಂಬುದು ಈ ಸಂಘಟನೆಯ ಸದಸ್ಯರು ಆತಂಕ ವ್ಯಕ್ತಪಡಿತ್ತಾರೆ. ಮರಾಠಿ, ಗುಜರಾತಿ, ಪಂಜಾಬಿ ಭಾಷೆಗಳಿಗಿಂತ ‘ಲಂಬಾಣಿ ಭಾಷೆ’ ತುಂಬಾ ಸರಳ. ಅಂತಹ ಭಾಷೆ ಕಲಿಯುವವರ ಮತ್ತು ಕಲಿಸುವವ ಸಂಖ್ಯ ಇಳಿಮುಖವಾಗುತ್ತಿದೆ. ಹಾಗಾಗಿ, ಭಾಷೆಯ ಉಳಿವಿಗಾಗಿ ‘ಗೋರ್‌ ಸೀಕವಾಡಿ’ ಟೊಂಕಕಟ್ಟಿ ನಿಂತಿದೆ.

‘ಲಂಬಾಣಿಗರ ಮೂಲ ಪುರಷ ಸೇವಾಲಾಲ ಮತ್ತು ಮರಿಯಮ್ಮ ದೇವಿ’ ಬಗ್ಗೆಯೇ ಲಂಬಾಣಿಗರಿಗೇ ಅರಿವು ಇಲ್ಲದ್ದಾಗಿದೆ. ಸಮುದಾಯದ ಇತಿಹಾಸ ಕುರಿತು ಈಗಿನ ಮಕ್ಕಳಿಗೆ ಮಾಹಿತಿ ಇಲ್ಲ. ಕಾರಣ, ಈ ಕುರಿತು ಮನೆ, ಶಾಲೆಯಲ್ಲಿ ಮಾಹಿತಿ ಲಭ್ಯವಾಗದೇ ಇರುವುದೇ ಕಾರಣವಾಗಿದೆ. ಇದರಿಂದ ಲಂಬಾಣಿ ಸಮಾಜದಲ್ಲಿ ಹುಟ್ಟಿದ್ದರೂ ಮಾಹಿತಿಯ ಕೊರತೆ ಕಾಡುತ್ತಿದೆ. ಅಂತಹ ಕೊರತೆ ನೀಗಿಸಲು ‘ಗೋರ್ ಸೀಕವಾಡಿ’ ಶ್ರಮಿಸುತ್ತಿದೆ’ ಎಂದು ಸಂಘಟನೆಯ ರಾಜ್ಯ ಸಂಚಾಲಕ ಶ್ರೀರಾಮ ರಾಥೋಡ ಹೇಳುತ್ತಾರೆ.

ಸೇವಾಲಾಲ ಮಂದಿರದಲ್ಲಿ ಲಂಬಾಣಿಗರು ಅನುಸರಿಸಬೇಕಾದ ಪೂಜಾಕ್ರಮಗಳಿಂದ ಹಿಡಿದು ಅನುಸರಿಸಬೇಕಾದ ಉಡುಗೆ–ತೊಡುಗೆ, ಆಹಾರ ಪದ್ಧತಿ ವರೆಗೂ ಗೋರ್ ಸೀಕವಾಡಿ ಸಂಘಟನೆ ಸದಸ್ಯರು ಜನರಿಗೆ ಸ್ವತಃ ತಾಂಡಾಗಳಿಗೆ ಹೋಗಿ ಅರಿವು ಮೂಡಿಸುತ್ತಿದ್ದಾರೆ.

‘ಗೋರ್ ಸೀಕವಾಡಿ’ ಸಂಘಟನೆ ಜನರಿಂದ, ಸರ್ಕಾರ, ಸಂಘ–ಸಂಸ್ಥೆಗಳಿಂದ ಯಾವ ನೆರವನ್ನು ಬಯಸುವುದಿಲ್ಲ. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ತಾಂಡಾಗಳಿಗೆ ಭೇಟಿ ನೀಡಿ ಅಲ್ಲಿನ ಯುವಕರನ್ನು ಜಾಗೃತಗೊಳಿಸುತ್ತದೆ. ಅವರು ಬಯಸಿದ ದಿನದಂದು ತಾಂಡಾಗಳಿಗೆ ಭೇಟಿ ನೀಡಿ ಜನರಿಗೆ ತಮ್ಮ ಆಚರಣೆ, ಸಂಪ್ರದಾಯ ರಕ್ಷಣೆ ಕುರಿತು ಉಪನ್ಯಾಸ ನೀಡುತ್ತಾರೆ’ ಎನ್ನುತ್ತಾರೆ ಬೇವಿನಹಳ್ಳಿ ತಾಂಡಾ ಗೋವಿಂದ್‌ ರಾಥೋಡ.

ಕಳೆದ 20 ವರ್ಷಗಳಿಂದ ಬುಡಕಟ್ಟು ಆಚರಣೆಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ‘ಗೋರ್‌ ಸೀಕವಾಡಿ’ ಸಂಘಟನೆ ನ.24, 25ರಂದು ಮಹಾರಾಷ್ಟ್ರದ ಬುಲ್ಡಾನ ಜಿಲ್ಲೆಯ ಮೇಹಕರ್‌ ತಾಲ್ಲೂಕಿನ ಪಾರ್‌ಕೇಡ್ ತಾಂಡಾದಲ್ಲಿ ಅಂತರರಾಷ್ಟ್ರೀಯ ಲಂಬಾಣಿ ಮಹಿಳಾ ಸಮಾವೇಶ ನಡೆಸಿದೆ. ದೇಶ ಮತ್ತು ಅನ್ಯ ದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಲಂಬಾಣಿ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿ ಮಹಿಳೆಯರ ಜ್ವಲಂತ ಸಮಸ್ಯೆ– ಪರಿಹಾರ ಕುರಿತು ಚರ್ಚೆ ನಡೆಸಿದ್ದಾರೆ.

ಹಲವು ವರ್ಷಗಳಿಂದ ಇಂಥಾ ವೇದಿಕೆಗಳಿಗಾಗಿ ಹಪಹಪಿಸುತ್ತಿದ್ದ ಲಂಬಾಣಿ ಮಹಿಳೆಯರು ‘ಗೋರ್‌ ಸೀಕವಾಡಿ’ಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ‘ಗೋರ್‌ ಸೀಕವಾಡಿ’ ಎಂದರೆ ‘ಬಂಜಾರ ಕಲಿಕಾಕೇಂದ್ರ’ ಎಂಬುದಾಗಿ ಸಂಘಟನೆಯ ಭೋಜರಾಜ್‌ ನಾಯ್ಕ ಅರ್ಥೈಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು