ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಿಂಚೂ ಭೂಮಿ ಬಿಟ್ಟುಕೊಡೆವು: ರೈತರ ತೀವ್ರ ಆಕ್ರೋಶ

ಕಡೇಚೂರು: ಹೆಚ್ಚುವರಿ ಜಮೀನಿಗಾಗಿ ಕೆಐಎಡಿಬಿ ಸಲ್ಲಿಸಿದ ಪ್ರಸ್ತಾವನೆಗೆ ರೈತರ ತೀವ್ರ ಆಕ್ರೋಶ
ಅಕ್ಷರ ಗಾತ್ರ

ಕಡೇಚೂರು (ಸೈದಾಪುರ): ಕಡೇಚೂರು-ಬಾಡಿಯಾಳ ಕೈಗಾರಿಕಾಪ್ರದೇಶದಲ್ಲಿ ಹೈದರಾಬಾದ್-ಬೆಂಗಳೂರು ಕಾರಿಡಾರ್ ಯೋಜನೆಗಾಗಿ ಮಂಡಳಿ ವತಿಯಿಂದ ಸುಮಾರು 3,300 ಎಕರೆ ಜಮೀನು ಖರೀದಿಗಾಗಿ ಕೆಐಎಡಿಬಿ ಸಲ್ಲಿಸಿದ ಪ್ರಸ್ತಾವನೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 2011ರಲ್ಲಿ ಕಡೇಚೂರು–ಬಾಡಿಯಾಳ, ಶೆಟ್ಟಿಹಳ್ಳಿಯಲ್ಲಿನ ರೈತರಿಂದ ಸುಮಾರು 3,232.22 ಎಕರೆ ಭೂಮಿಯನ್ನು ಕೈಗಾರಿಕಾಅಭಿವೃದ್ಧಿ ಮಂಡಳಿಯು ಸ್ವಾಧೀನ ಪಡಿಸಿಕೊಂಡಿತ್ತು. ಇದೀಗ ಹೆಚ್ಚುವರಿಯಾಗಿ ಮತ್ತೆ 3,300 ಎಕರೆ ಭೂಮಿ ಪಡೆಯಲು ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಮುಂದಾಗಿದ್ದಾರೆ. ಇವರ ಈ ನಡೆಗೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಾಣವನ್ನು ಬೇಕಾದರೂ ನೀಡುತ್ತೇವೆ, ಆದರೆ, ಒಂದಿಂಚೂಭೂಮಿ ಮಾತ್ರ ಕೈಗಾರಿಕೆಗಳನ್ನು ಸ್ಥಾಪಿಸಲು ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತರು ಜಮೀನು ನೀಡದೆ ಇರುವುದಕ್ಕೆ ಕಾರಣ: ಈ ಹಿಂದೆ ಕೈಗಾರಿಕಾಪ್ರದೇಶಕ್ಕೆ ಭೂಮಿಯನ್ನು ನೀಡಿದ ರೈತರಿಗೆ ಇಲ್ಲಿ ಸ್ಥಾಪಿಸುವ ಕೈಗಾರಿಕಾಕಂಪನಿಗಳಲ್ಲಿ ಕುಟುಂಬದಿಂದ ಒಬ್ಬರಿಗೆ ಉದ್ಯೋಗ ನೀಡುತ್ತೇವೆ ಎಂದು ಭರವಸೆಯನ್ನು ನೀಡಿ ರೈತರಿಂದ ಜಮೀನನ್ನು ಪಡೆದುಕೊಂಡಿದ್ದರು. ಅಲ್ಲದೇ ಪರಿಸರಕ್ಕೆ ಧಕ್ಕೆ ತರುವಂಥ ಯಾವುದೇ ರಾಸಾಯನಿಕ ಕೈಗಾರಿಕಾಕಂಪನಿಗಳನ್ನು ಸ್ಥಾಪಿಸುವುದಿಲ್ಲ ಎಂದು ಹೇಳಿದ್ದರು.

ಆದರೆ, ಪ್ರಸ್ತುತ ಈ ಮೊದಲು ತಿಳಿಸಿದ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಭೂಮಿಯನ್ನು ನೀಡಿದ ಯಾವೊಬ್ಬ ರೈತರಿಗೂ ಉದ್ಯೋಗ ನೀಡಿಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರು ನಗರ ಪ್ರದೇಶಗಳಿಗೆ ಉದ್ಯೋಗ ಹರಸಿಕೊಂಡು ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ.

ಅಲ್ಲದೇ ವಿಷಕಾರಿ ರಾಸಾಯನಿಕ ಕೈಗಾರಿಕೆಗಳನ್ನು ಸ್ಥಾಪಿಸಿ ಕಡೇಚೂರು ಗ್ರಾಮದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ರೈತರ ಆಕೋಶಕ್ಕೆ ಕಾರಣವಾಗಿದೆ.

ಇದೀಗ ಮತ್ತೇ ಕಡೇಚೂರು, ಶೆಟ್ಟಿಹಳ್ಳಿ, ದದ್ದಲ್, ರಾಚನಳ್ಳಿ ಗ್ರಾಮಗಳ ಜಮೀನುಗಳಿಗೆ ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗೆ ಸಲ್ಲಿಸಲು ಹಾಗೂ ಈ ಗ್ರಾಮಗಳ ಸರ್ವೆ ನಂಬರ್‌ಗಳ ಆಕಾರಬಂದ, ನಕಾಶೆ ಸಿದ್ಧಪಡಿಸಲು ಕಲಬುರ್ಗಿ ಕೆಐಎಡಿಬಿ ಅಧಿಕಾರಿಗಳು, ವಿಶೇಷ ಜಿಲ್ಲಾಧಿಕಾರಿಗಳು ಕೆಐಎಡಿಬಿ ಬೆಂಗಳೂರು ಉಲ್ಲೇಖದಂತೆ ಯಾದಗಿ ರಿಯ ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT