ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ

ಸತತ ಮಳೆಯಿಂದ ಮಲೆನಾಡಿನಂತಹ ವಾತಾವರಣ ನಿರ್ಮಾಣ
Last Updated 16 ಆಗಸ್ಟ್ 2020, 15:47 IST
ಅಕ್ಷರ ಗಾತ್ರ

ಯಾದಗಿರಿ:ಜಿಲ್ಲೆಯಲ್ಲಿ ಎರಡ್ಮೂರುದಿನಗಳಿಂದ ಸುರಿಯುತ್ತಿರುವ ಮಳೆಗೆ ವಿವಿಧೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವುದರಿಂದ ಮಲೆನಾಡಿನಂತಹ ವಾತಾವರಣ ನಿರ್ಮಾಣವಾಗಿದೆ.

ನಗರದ ವಿವಿಧ ರಸ್ತೆಗಳಲ್ಲಿ ನೀರು ನಿಂತು ರಸ್ತೆ ಹಾಳಾಗಿದೆ. ಡಾಂಬಾರು ರಸ್ತೆಗಳು ಕಿತ್ತುಹೋಗಿವೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ರೈಲ್ವೆ ಸೇತುವೆಯ ರಸ್ತೆ ಒಂದು ಭಾಗದಲ್ಲಿ ಕುಸಿದಿದ್ದು, ಇನ್ನೂ ದುರಸ್ತಿಯಾಗಿಲ್ಲ. ಇದರಿಂದ ಪ್ರಯಾಣಿಕರು 15 ಕಿ.ಮೀ ಸುತ್ತಿ ಬರಬೇಕಿದೆ. ನಗರದ ಲುಂಬಿನಿ ವನದಲ್ಲಿ ಗಾಳಿ ಮಳೆಗೆ ಗಿಡ ಬಿದ್ದಿದೆ. ಕಳೆದ 24 ಗಂಟೆ ಅವಧಿಯಲ್ಲಿ ವಾಡಿಕೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ.

ಸುರಪುರ, ವಡಗೇರಾ, ಗುರುಮಠಕಲ್‌, ಕಕ್ಕೇರಾ, ಸೈದಾಪುರ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ. ಸೈದಾಪುರ ಸಮೀಪದ ಕೊಂಡಾಪುರ ಸೇತುವೆ ಬಳಿ ಕ್ರಷರ್‌ ಗಾಡಿ ನೀರಿನಲ್ಲಿ ಅರ್ಧ ಮುಳುಗಿದೆ. ಪ್ರವಾಸಕ್ಕೆ ತೆರಳಿದ್ದ ಗ್ರಾಮಸ್ಥರು ಹಿಂತಿರುಗಿ ಬರುವಾಗ ಸೇತುವೆ ತಗ್ಗುಪ್ರದೇಶದಲ್ಲಿ ಬಿದ್ದಿದೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ಹತ್ತಿ ತುಂಬಿದ ಟ್ರ್ಯಾಕ್ಟರ್‌ ಇದೇ ಸೇತುವೆ ಬಳಿ ಮಗುಚಿ ಬಿದ್ದಿತ್ತು.

ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಗುರುಮಠಕಲ್‌ ತಾಲ್ಲೂಕಿನ ಪ್ರವಾಸಿ ತಾಣಗಳಾದ ದಬ್‌ ಧಬಿ ಜಲಪಾತ, ಚಿಂತನಹಳ್ಳಿಯ ಗವಿಸಿದ್ದಲಿಂಗೇಶ್ವರ ಜಲಪಾತಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು,ಪ್ರವಾಸಿಗರನ್ನುಆಕರ್ಷಿಸುತ್ತಿವೆ.

ಗವಿಸಿದ್ದಲಿಂಗೇಶ್ವರ ಜಲಪಾತ:

ಜಿಲ್ಲೆಯ ಗುರುಮಠಕಲ್‌ತಾಲ್ಲೂಕಿನ ಚಿಂತನಳ್ಳಿಯ ಗವಿಸಿದ್ದಲಿಂಗೇಶ್ವರ ಜಲಪಾತ ಮೈತುಂಬಿ ಹರಿಯುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಟ್ಟ ಅರಣ್ಯದ ಮಧ್ಯೆ ನೀರು ಬೆಟ್ಟದ ಮೇಲಿಂದ ಮಹಾತ್ಮ ಗವಿಸಿದ್ದಲಿಂಗೇಶ್ವರ ತಪಸ್ಸು ಮಾಡಿದ ಸ್ಥಳದ ಮುಂಭಾಗದಲ್ಲಿ ಭೋರ್ಗರೆವ ಜಲಪಾತವು ಕಣ್ಮನ ಸೆಳೆಯುತ್ತದೆ.

ಬಬಲಾದ ಗ್ರಾಮಕ್ಕೆ ನುಗಿದ ನೀರು: ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

ಮಳೆ ನೀರನ್ನು ಹೊರಹಾಕುವ ಕೆಲಸದಲ್ಲಿ ಗ್ರಾಮಸ್ಥರು ತೊಡಗಿಸಿಕೊಂಡಿದ್ದರು. ಸಮಸ್ಯೆ ಕುರಿತು ಗ್ರಾಮಸ್ಥರು ಕಂದಾಯ ಹಾಗೂ ಪಂಚಾಯಿತಿಅಭಿವೃದ್ಧಿಅಧಿಕಾರಿಗಳ ಗಮನಕ್ಕೆ ತಂದರೂಕ್ಯಾರೇ ಎನ್ನುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಹನಗಳಪರದಾಟ: ಗುರುಮಠಕಲ್ ತಾಲ್ಲೂಕಿನಲ್ಲಿಶನಿವಾರ ರಾತ್ರಿ ಭಾರಿ ಮಳೆಯಾಗಿರುವುದರಿಂದ ಚಿಂತನಹಳ್ಳಿ ಗ್ರಾಮದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಕಂದಕೂರ ಕ್ರಾಸ್‌ನಿಂದ ಜನರು ಚಿಂತನಹಳ್ಳಿ, ಚಿಂತನಹಳ್ಳಿ ತಾಂಡಾ, ಗವಿಸಿದ್ದಲಿಂಗೇಶ್ವರ, ಇಮ್ಲಾಪುರ, ಯದ್ಲಾಪುರ, ಯಂಪಾಡ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ತೆರಳಲು ಚಿಂತನಹಳ್ಳಿ ಮೂಲಕವೇ ತೆರಳುತ್ತಾರೆ. ಆದರೆ, ಮಳೆಗೆ ಗ್ರಾಮದ ಪ್ರವೇಶ ರಸ್ತೆಯ ಮೇಲೆ ನೀರು ರಭಸದಿಂದ ಹರಿಯುತ್ತಿರುವುದರಿಂದ ವಾಹನಗಳು ದಾಟಲು ಸಮಸ್ಯೆ ನಿರ್ಮಾಣವಾಗಿದೆ.

****

ತಾಲ್ಲೂಕುವಾರು ಮಳೆ ವಿವರ
ಯಾದಗಿರಿ: ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 32, ಶಹಾಪುರ ತಾಲ್ಲೂಕಿನಲ್ಲಿ 27, ಸುರಪುರ ತಾಲ್ಲೂಕಿನಲ್ಲಿ 30, ಗುರುಮಠಕಲ್‌ ತಾಲ್ಲೂಕಿನಲ್ಲಿ 33, ವಡಗೇರಾ ತಾಲ್ಲೂಕಿನಲ್ಲಿ 27, ಹುಣಸಗಿ ತಾಲ್ಲೂಕಿನಲ್ಲಿ 32 ಮಿ.ಮೀ ಮಳೆಯಾಗಿದೆ.
***
ಶಹಾಪುರ: ಮುಂದುವರಿದ ಮಳೆ
ಶಹಾಪುರ: ತಾಲ್ಲೂಕಿನಲ್ಲಿ ಜಿಟಿಜಿಟಿ ಮಳೆ ಮುಂದುವರೆದಿದೆ. ಜನರು ಮನೆಯಿಂದ ಹೊರ ಬರಲು ಹೆದರುವಂತೆ ಆಗಿದೆ. ಸಾಮಾನ್ಯ ಕಾಯಿಲೆಗಳಾದ ನೆಗಡಿ, ಕೆಮ್ಮು ಇದ್ದರೂ ಕೊರೊನಾ ಭೀತಿಗೆ ಒಳಗಾಗಿದ್ದಾರೆ.
ಆರೋಗ್ಯ ಇಲಾಖೆಯು ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಮೂಲಕ ಅರಿವು ಮೂಡಿಸುತ್ತಿಲ್ಲ. ಖಾಸಗಿ ಆಸ್ಪತ್ರೆಯ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲವಾಗಿದ್ದರಿಂದ ಸಮಸ್ಯೆ ಬಿಗಿಡಾಯಿಸಿದೆ. ತಾಲ್ಲೂಕು ಆಡಳಿತ ಜನತೆಯ ನೆರವಿಗೆ ಆಗಮಿಸಲು ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಜಿಟಿಜಿಟಿ ಮಳೆಯಿಂದ ಬೆಳೆ ಹಾನಿಯಾಗುವ ಆತಂಕ ರೈತರಲ್ಲಿ ಮೂಡಿದೆ. ಮಳೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ತಹಶೀಲ್ದಾರ್‌ ಜಗನಾಥರಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT