ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ‘ಮೊದಲಿನಂತಾಗಲು ಮೂರು ತಿಂಗಳು ಬೇಕು’

ಚೇತರಿಕೆ ಕಾಣದ ವ್ಯಾಪಾರ: ಅಂತರ ರಾಜ್ಯ ಸಾಗಣೆ ಸಮಸ್ಯೆಯೇ ಹೆಚ್ಚು
Last Updated 20 ಮೇ 2020, 20:00 IST
ಅಕ್ಷರ ಗಾತ್ರ

ಯಾದಗಿರಿ: ಮೇ 20ರಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಿ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆ ವರೆಗೆ ವಿವಿಧ ರೀತಿಯ ವ್ಯಾಪಾರ ವಹಿವಾಟಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ, ವ್ಯಾಪಾರಿಗಳಿಗೆ ಮೊದಲಿನಂತೆ ವ್ಯಾಪಾರ ಇಲ್ಲದೆ ‘ಡಲ್‌’ ಆಗಿದೆ. ಸುಧಾರಣೆಗೆ ಇನ್ನೂ ಮೂರು ತಿಂಗಳು ಬೇಕು ಎನ್ನುತ್ತಾರೆ ವ್ಯಾಪಾರಿಗಳು.

ಲಾಕ್‌ಡೌನ್‌ ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇದರಿಂದ ಕಟ್ಟಡ ಸಾಮಗ್ರಿ ಅಂಗಡಿಗಳಲ್ಲಿ ಹೆಚ್ಚಿನ ವ್ಯವಹಾರ ನಡೆಯುತ್ತಿಲ್ಲ.

‘ನಮ್ಮಲ್ಲಿ ಸಿಮೆಂಟ್‌, ಕಬ್ಬಿಣ, ಕಟ್ಟಡಕ್ಕೆ ಬೇಕಾಗುವ ಇನ್ನಿತರ ಸಾಮಗ್ರಿಗಳು ಇವೆ. ಆದರೆ, ವ್ಯಾಪಾರವೇ ಆಗುತ್ತಿಲ್ಲ. ಆದರೂ ಅಂಗಡಿ ತೆರೆದು ಕೂಡುತ್ತೇವೆ. ಬಂದ ಗ್ರಾಹಕರು ವಾಪಾಸ್‌ ಹೋಗಬಾರದಲ್ಲ’ ಎನ್ನುತ್ತಾರೆ ಮಾಲೀಕ ಮಹಮ್ಮದ್‌ ಜಾಫರ.

ಕಟ್ಟಡ ಕೆಲಸ ಇದ್ದರೆ ಅದಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳು ನಡೆಯುತ್ತವೆ. ಆದರೆ, ಇದು ತಕ್ಕ ಮಟ್ಟಿಗೆ ನಡೆಯುತ್ತಿಲ್ಲ. ಇದರಿಂದ ವೈರಿಂಗ್‌, ಪಂಬ್ಲಿಂಗ್‌ನವರಿಗೆ ಕೆಲಸ ಇಲ್ಲದಂತಾಗಿದೆ.

ಕಾರ್ಮಿಕರು ಇಲ್ಲ:ಕೆಲ ಕಡೆ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಅಂತರ ರಾಜ್ಯದಿಂದ ಅನೇಕ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದರು. ಲಾಕ್‌ಡೌನ್‌ ಸಡಿಲಿಕೆಯಿಂದ ಅವರು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದೂ ಕೂಡ ಅಂಗಡಿಗಳ ಮಾಲೀಕರ ಮೇಲೆ ಪ್ರಭಾವ ಬಿದ್ದಿದೆ.

ಸಾಗಣೆ ಸಮಸ್ಯೆ:ವಿವಿಧಸಾಮಗ್ರಿಗಾಗಿಪಕ್ಕದ ರಾಜ್ಯಗಳನ್ನೆ ಜಿಲ್ಲೆ ಅವಲಂಬಿಸಿದೆ. ಸೊಲ್ಲಾಪುರ, ಮುಂಬೈ, ಹೈದರಾಬಾದ್‌ ಮುಂತಾದ ಕಡೆಗಳಿಂದ ಸಾಮಗ್ರಿ ತರಬೇಕಾಗಿದೆ. ಆದರೆ, ಸಾಗಣೆ ಸಮಸ್ಯೆ ಇದ್ದರಿಂದ ಸಮರ್ಪಕ ವಸ್ತುಗಳು ಸಿಗುತ್ತಿಲ್ಲ. ಜಿಲ್ಲೆಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಸಾಮಗ್ರಿ ತರಲು ಪೊಲೀಸರು ಬಿಡುತ್ತಿಲ್ಲ ಎಂದು ವ್ಯಾಪಾರಿಗಳು ಆರೋಪಿಸುತ್ತಾರೆ.

ಬಟ್ಟೆ ಅಂಗಡಿ: ಮೇ 4ರಂದು ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿ ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಬಟ್ಟೆ, ಚಿನ್ನದ ಅಂಗಡಿಗಳಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಿರಲಿಲ್ಲ. ಇದರಿಂದ ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ ಎನ್ನುತ್ತಾರೆ ಬಟ್ಟೆ ವ್ಯಾಪಾರಿಗಳು.

‘ಬಹುತೇಕ ಮದುವೆ ಸಿಸನ್‌ ಮುಗಿದಿದೆ. ಅಲ್ಲದೆ ಗ್ರಾಹಕರು ಅಂಗಡಿಯತ್ತ ಸುಳಿಯುತ್ತಿಲ್ಲ. ಬುಧವಾರದಿಂದ ಜಿಲ್ಲಾಡಳಿತ ವ್ಯಾಪಾರಕ್ಕೆ ಅನುಮತಿ ನೀಡಿದೆ. ಹಿಂದೆ ಬೆಳಿಗ್ಗೆ 7ರಿಂದ 1 ಗಂಟೆ ತನಕ ಇತ್ತು. ಈಗ ಸಂಜೆ 5ರ ತನಕ ವ್ಯಾಪಾರಕ್ಕೆ ವಿಸ್ತರಣೆ ಆಗಿದೆ. ಆದರೆ, ಮಧ್ಯಾಹ್ನದ ನಂತರ ಗ್ರಾಹಕರು ಬರಲಿಲ್ಲ’ ಎಂದು ನಗರದ ಗಣೇಶ ಜ್ಯುವೆಲ್ಲರಿ ಅಂಗಡಿ ಮಾಲೀಕ ಉದಯ ನಾಗೂರ ಹೇಳುತ್ತಾರೆ.

ಗ್ರಾಹಕರ ಜೊತೆ ಜಗಳ: ಮೇ 4 ರಿಂದಲೇ ಜಿಲ್ಲೆಯಲ್ಲಿ ಆಟೊ ಸಂಚಾರ ಆರಂಭವಾಗಿದೆ. ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅನುಮತಿ ನೀಡಲಾಗಿದೆ. ₹5ರಿಂದ 10 ಬೆಲೆ ಏರಿಕೆ ಮಾಡಲಾಗಿದೆ. ಕೆಲ ಗ್ರಾಹಕರು ದರ ಹೆಚ್ಚಳದ ಕುರಿತು ನಮ್ಮ ಜೊತೆ ಜಗಳವಾಡುತ್ತಾರೆ. ಇನ್ನೂ ಕೆಲವರು ತಿಳಿದು ಕೇಳಿದ ಹಣ ನೀಡುತ್ತಾರೆ ಎನ್ನುತ್ತಾರೆ ಆಟೊ ಚಾಲಕರು.

***
ಈ ಹಿಂದೆ ತಿಂಗಳಿಗೆ ₹ 5 ಲಕ್ಷ ವ್ಯಾವಹಾರ ಇತ್ತು. ಈಗ ₹1 ಲಕ್ಷ ಆದರೆ ಅದೇ ಹೆಚ್ಚು. ಇದೇ ಸ್ಥಿತಿ ಇನ್ನೂ ಮೂರು ತಿಂಗಳು ಆಗಬಹುದು.
-ನವೀನ ದಾಸನಕೇರಿ, ಪೇಂಟ್‌ ಅಂಗಡಿ ಮಾಲೀಕ

***
ಮದುವೆ ಸಿಸನ್‌ ವೇಳೆ ಲಾಕ್‌ಡೌನ್‌ ಆಗಿದ್ದು, ದೊಡ್ಡ ಹೊಡೆತ ನೀಡಿದೆ. ಇದರಿಂದ ಪೀಠೋಪಕರಗಳು ಮಾರಾಟ ಕಡಿಮೆ ಇದೆ. ಇದರ ಸುಧಾರಣಗೆ ಇನ್ನು ಕೆಲ ತಿಂಗಳು ಬೇಕಾಗಿದೆ.
-ಹರ್ಷ್‌ ಬಾನುಷಾಲಿ, ಪೀಠೋಪಕರಣ ಅಂಗಡಿ ಮಾಲೀಕ

***
ಲಾಕ್‌ಡೌನ್‌ ಸಡಿಲಿಕೆ ಆಗಿದ್ದರೂ ನಮ್ಮ ಸ್ಥಿತಿ ಲಾಕ್‌ ಆಗಿದೆ. ಭದ್ರತೆ ಇಲ್ಲ. ಸರ್ಕಾರ ಹಣ ಘೋಷಿಸಿದರೂ ಇನ್ನು ಪರಿಹಾರ ನೀಡಿಲ್ಲ. ಇದರಿಂದ ಜೀವನ ನಿರ್ಹವಣೆ ತೊಂದರೆಯಾಗಿದೆ.
-ಮಲ್ಲಿಕಾರ್ಜುನ ಸಾಂಗ್ಲಿಯಾನ, ಆಟೊ ಚಾಲಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT