ಗುರುಮಠಕಲ್: ಚರಂಡಿಗಳಲ್ಲಿ ಸುತ್ತಾಡುತ್ತಾ ಆಹಾರ ಹುಡುಕುವ ಹಂದಿಗಳು, ಸಂಗೀತ ಕಲರವದೊಂದಿಗೆ ದಾಳಿಯಿಕ್ಕುವ ಸೊಳ್ಳೆಗಳು, ಮೂಗು ಮುಚ್ಚಿಸುವ ದುರ್ವಾಸನೆ, ನಲ್ಲಿ ನೀರು ಕುಡಿಯಲೂ ಯೋಚಿಸುವಂತ ಸ್ಥಿತಿ.
ಹೌದು, ಇದು ತಾಲ್ಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ, ಸುಮಾರು 2 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ, 282 ಮನೆ, 3 ಜನ ಗ್ರಾಮ ಪಂಚಾಯಿತಿ ಸದಸ್ಯ ಬಲ ಹೊಂದಿರುವ ಮಿಟ್ಟತಿಪಡಂಪಲ್ಲಿ (ಎಂ.ಟಿ.ಪಲ್ಲಿ) ಗ್ರಾಮದ ವಸ್ತುಸ್ಥಿತಿ.
ಕಾಕಲವಾರದಿಂದ ಬರುವಾಗ ಮುಖ್ಯರಸ್ತೆಯಲ್ಲಿ ಎಂ.ಟಿ.ಪಲ್ಲಿಯ ಪ್ರವೇಶದಲ್ಲೇ ಇರುವ ಚರಂಡಿಯಂಚಿನ ನೀರು ಸರಬರಾಜು ಕೊಳವೆ ಬಾವಿ ಸುತ್ತ ಮಣ್ಣು ಕೆದರುವ 'ಕೃಷಿ'ಯಲ್ಲಿ ತೊಡಗಿರುವ ಹಂದಿಗಳ ದರ್ಶನ ಭಾಗ್ಯ ಸಿಗಲಿದೆ.
ಅದೇ ಮುಖ್ಯರಸ್ತೆಯಿಂದ ಮುಂದುವರೆದರೆ ಬಸ್ ಸ್ಟಾಂಡ್‌ನಿಂದ ಸ್ವಲ್ಪ ಮುಂದೆ ಮತ್ತೆರಡು ಬೋರ್ ವೇಲ್‌ಗಳಿದ್ದು, ಅವೂ ಸಹ ಚರಂಡಿಯ ಪಕ್ಕದಲ್ಲೇ ಇರಿವುದು ವಿಶೇಷ. ಜತೆಗೆ ಈ ಎರಡೂ ಬೋರ್ ವೇಲ್‌ಗಳು ಸಹ ಸುತ್ತಲೂ ತಿಪ್ಪೆಗುಂಡಿಗಳನ್ನು 'ಅಲಂಕರಿಸಿಕೊಂಡ' ದೃಶ್ಯವನ್ನು ಕಾಣಬಹುದು.
ಗ್ರಾಮದ ಒಳಹೋದರೆ ಮನೆಗಳ ನಡುವೆ ಜಾಗ ಖಾಲಿಯಿರುವಲ್ಲೆಲ್ಲಾ ಬೀಡು ಬಿಡುವ ಹಂದಿಗಳು. ಇನ್ನೂ ಕೆಲ ಹಂದಿಗಳು ಗ್ರಾಮದ ಚರಂಡಿಗಳಲ್ಲಿ ತುಂಬಿರುವ 'ಹೂಳನ್ನು ಕೆದಕುವ ಕಾಯಕ'ದಲ್ಲಿ ನಿರತವಾಗಿರುತ್ತವೆ ಎನ್ನುವುದು ಇಲ್ಲಿನ ಮಹಿಳೆಯರ ಅಂಬೋಣ.
ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗೆ ರಸ್ತೆಯ ನಡುವೇ ವಾಲ್ವ್ ಅಳವಡಿಸಿದ್ದು, ಚರಂಡಿ ಅಥವಾ ಕಲುಷಿತ ನೀರು ಹರಿದು ಬಂದರೆ ವಾಲ್ವ್ ಇರುವ ಗುಂಡಿಯಲ್ಲಿ ಸಂಗ್ರಹಗೊಳ್ಳಲಿವೆ. ಹೀಗೆ ಸಂಗ್ರಹವಾದ ನೀರು ಪೈಪ್‌ಲೈನ್‌ನಲ್ಲಿ ಬೆರೆವ ಸಾಧ್ಯತೆಯಿದ್ದು, ಈ ಕುರಿತು ಪಂಚಾಯಿತಿ ಎಚ್ಚರವಹಿಸಲಿ ಎಂದು ಯುವಕರು ಕೋರಿದರು.
ಹಂದಿ, ಸೊಳ್ಳೆಗಳ ತಾಣವಾದ ಚರಂಡಿಗಳು ನಡು ರಸ್ತೆಯಲ್ಲಿವೆ ನೀರು ಸರಬರಾಜು 'ವಾಲ್ವ್' ಆರಂದಿಂದ ಬಾಗಿಲು ತೆರೆಯದ ಆರ್.ಒ. ಘಟಕ !
ಗ್ರಾಮದ ಗ್ರಾಮದ ಸ್ವಚ್ಛತೆ ಚರಂಡಿ ವಾಸನೆ ಸೊಳ್ಳೆ ಕಾಟ ಸೇರಿದಂತೆ ಸಮಸ್ಯೆಗಳ ಪರಿಹಾರಕ್ಕೆ ಜನತೆ ಪ್ರಶ್ನಿಸಲು ಮುಂದಾಗಬೇಕಿದೆ. ಜತೆಗೆ ಸಂಬಂಧಿತರೂ ಸಮಸ್ಯೆಗಳ ಪರಿಹಾರಕ್ಕೆ ಮುತುವರ್ಜಿ ವಹಿಸಲಿ.- ಮಹಾದೇವ ಸಿ.ಎಂ. ಸಾಮಾಜಿಕ ಕಾರ್ಯಕರ್ತ
ಜಲ ಮೂಲಗಳ ಸ್ವಚ್ಛತೆ ಚರಂಡಿ ಸ್ವಚ್ಛತೆಯತ್ತ ಅಧಿಕಾರಿಗಳು ಗಮನಿಸುತ್ತಿಲ್ಲ. ಅನಾಹುತ ಜರುಗಿದ ನಂತರವೇ ಕೆಲಸ ಮಾಡುವರೇನೋ? ಕೂಡಲೇ ಸಂಬಂಧಿತರು ಇತ್ತ ಗಮನಹರಿಸಲಿ- ರವಿ ಗ್ರಾಮಸ್ಥ
ಕೂಡಲೇ ಗ್ರಾಮದ ಸ್ವಚ್ಛತೆಗೆ ಮತ್ತು ಸಮಸ್ಯೆಗಳ ಕುರಿತು ಪರೀಶೀಲಿಸುವಂತೆ ಮತ್ತು ಬಗೆಹರಿಸುವಂತೆ ಸಂಬಂಧಿಸಿದ ಪಿಡಿಒ ಮತ್ತು ಸಿಬ್ಬಂದಿಗೆ ಸೂಚಿಸುತ್ತೇನೆ. - ಬಸವರಾಜ ಶರಭೈ ತಾಲ್ಲೂಕು ಪಂಚಾಯಿತಿ ಇಒ
ಆರಂಭದಿಂದಲೂ ಬಾಗಿಲು ತೆರೆಯದ ಆರ್.ಒ. ಘಟಕ ! ಎಂ.ಟಿ.ಪಲ್ಲಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದಲ್ಲೇ ಇರುವ ನೀರು ಶುದ್ಧೀಕರಣ ಘಟಕವು ಸ್ಥಾಪನೆಯಾಗಿ 6 ವರ್ಷಗಳ ಮೇಲಾಯ್ತು. ಆದರೆ ಈವರೆಗೆ ಬಾಗಿಲು ಮಾತ್ರ ತೆರೆದಿಲ್ಲ ಜನತೆ ನೀರುಣಿಸಲಿಲ್ಲ. ಸದ್ಯ ಈ ಘಟಕದ ನಿರ್ವಹಣೆ ಅಥವಾ ಉಸ್ತುವಾರಿ ಇನ್ನೂ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಸರ್ಕಾರದ ಅನುಧಾನದಲ್ಲಿ ನಿರ್ಮಿಸಿದ ಆರ್.ಒ. ಘಟಕಕ್ಕೆ ‘ಬಾಗಿಲು ತೆರೆಯುವ ಭಾಗ್ಯ’ವನ್ನು ಕರುಣಿಸಬೇಕಿದೆ. ಜನ ಬಳಕೆಗೆ ಬಾರದಿದ್ದರೆ ಹಣ ವ್ಯಯಿಸಿದ್ದರ ಲಾಭವೇನು? ಆದ್ದರಿಂದ ಜಿಲ್ಲಾ ಪಂಚಾಯಿತಿ ಇತ್ತ ಕಣ್ಣಾಡಿಸಿ ಸೂಕ್ತ ಕ್ರಮವಹಿಸಬೇಕು ಎಂದು ಗ್ರಾಮದ ಮಹಾದೇವ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.