ಯಾದಗಿರಿ: ‘ಮದ್ರಾಸ್ ಐ’ ಎನ್ನುವ ಕಣ್ಣಿನ ಸೋಂಕು ಜಿಲ್ಲೆಯ ಎಲ್ಲ ವಯೋಮಾನದ ಜನರಲ್ಲಿ ವೇಗವಾಗಿ ಹಬ್ಬುತ್ತಿದ್ದು, ನೇತ್ರಾಲಯಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯ ಗ್ರಾಮೀಣ, ನಗರ ಪ್ರದೇಶದಲ್ಲಿ ಕಣ್ಣಿನ ಸೋಂಕು ಕಾಣಿಸಿಕೊಂಡು ಜನರನ್ನು ಹೈರಾಣಾಗಿಸಿದೆ.
ಶಾಲಾ ಮಕ್ಕಳಲ್ಲಿ ವೈರಾಣು: ಜಿಲ್ಲೆಯ ಶಾಲಾ ಮಕ್ಕಳಲ್ಲಿ ಕಣ್ಣಿನ ವೈರಾಣು ವೇಗವಾಗಿ ಹರಡುತ್ತಿದೆ. ಯಾದಗಿರಿ ತಾಲ್ಲೂಕಿನ ಸೈದಾಪುರ ವಲಯದ ಶಾಲೆಗಳಲ್ಲಿ ತ್ವರಿತವಾಗಿ ಹರಡುತ್ತಿರುವ ವೈರಾಣು ಮಕ್ಕಳನ್ನು ಹೈರಾಣು ಮಾಡಿದೆ. ಕೆಲವು ಗ್ರಾಮಗಳಲ್ಲಿ ಒಬ್ಬರಿಂದ ಹಲವರಿಗೆ ಹರಡಿದ್ದು, ಆಸ್ಪತ್ರೆಗೆ ಎಡತಾಕುವವರ ಸಂಖ್ಯೆ ಹೆಚ್ಚಾಗಿದೆ.
ನೋಡುವುದರಿಂದ ಬರುವುದಿಲ್ಲ: ಮದ್ರಾಸ್ ಐ ಬಂದಿರುವವರ ಕಣ್ಣು ದಿಟ್ಟಿಸಿ ನೋಡಿದರೆ ಆ ಸೋಂಕು ಬರುವುದಿಲ್ಲ. ಬದಲಾಗಿ ಅವರು ಬಳಸಿರುವ ವಸ್ತು, ಟವೆಲ್, ಸೋಪು, ಸಾಮಗ್ರಿಗಳನ್ನು ಮುಟ್ಟಿದ್ದರೆ ಬರುತ್ತದೆ ಎಂದು ನೇತ್ರ ತಜ್ಞರು ಹೇಳುತ್ತಾರೆ.
‘ಕಣ್ಣಿನ ಸೋಂಕು ಕೆಲವರಿಗೆ ಒಂದೆರಡು ದಿನಗಳಲ್ಲಿ ಔಷಧೋಪಾಚಾರ ಮಾಡಿದ ನಂತರ ಕಡಿಮೆಯಾದರೆ, ಇನ್ನೂ ಕೆಲವರಿಗೆ ಒಂದು ವಾರದತನಕವೂ ಇರುವ ಸಾಧ್ಯತೆ ಇರುತ್ತದೆ’ ಎನ್ನುತ್ತಾರೆ ವೈದ್ಯ ಪ್ರದೀಪರೆಡ್ಡಿ ಅವರು.
ಬಸ್, ರೈಲ್ವೆ ಪ್ರಯಾಣಿಕರಿಗೂ ‘ಐ’: ಕಣ್ಣಿನ ಸೋಂಕು ಒಬ್ಬರಿಂದ ಒಬ್ಬರಿಂದ ವೇಗವಾಗಿ ಹರಡುವುದರಿಂದ ಪ್ರಯಾಣಿಕರಲ್ಲೂ ಇದು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಹರಡುವ ಸಾಧ್ಯತೆ ಇರುತ್ತದೆ. ಕಣ್ಣಿನ ಸೋಂಕು ಬಂದಾಗ ಪ್ರತ್ಯೇಕವಾಗಿ ಇರುವುದರಿಂದ ಇನ್ನೊಬ್ಬರಿಗೆ ಹರಡುವುದು ಕಡಿಮೆಯಾಗುತ್ತದೆ ಎನ್ನುವುದು ವೈದ್ಯರ ಮಾತಾಗಿದೆ.
ಕಾಂಜಂಕ್ಟಿವಿಟಿಸ್ (ಕಣ್ಣಿನ ಜ್ವರ): ಇದು ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇತ್ತೀಚಿನ ಪ್ರವಾಹ ಮತ್ತು ಹವಾಮಾನ ಬದಲಾವಣೆಯಿಂದ ಕಣ್ಣಿನ ಜ್ವರ ಹೆಚ್ಚಾಗುತ್ತಿದೆ.
ರೋಗ ಲಕ್ಷಣಗಳು: ಕಣ್ಣು ಕೆಂಪಾಗುತ್ತದೆ. ಕಣ್ಣುಗಳ ತುರಿಕೆ, ಹಳದಿ ಅಥವಾ ನೀರಿನಾಂಶದ ಸ್ರವಿಸುವಿಕೆ, ಜಿಗುಟಾದ ಕಣ್ಣುರೆಪ್ಪೆಗಳು, ಕಣ್ಣಿನಲ್ಲಿ ನೀರು ಬರುವುದು, ಪಿಚ್ಚುಗಟ್ಟುವುದು, ಕಣ್ಣಿನಲ್ಲಿ ಏನೋ ಬಿದ್ದಿರುವ ಅನುಭವ ಆಗುವುದು, ತುರಿಕೆ ಕಾಣಿಸಿಕೊಳ್ಳುತ್ತದೆ. ಕಣ್ಣು ರೆಪ್ಪೆಗಳು ಬಾತುಕೊಳ್ಳುವುದು, ಕೆಂಪಾಗುವುದು ಮತ್ತು ಕಣ್ಣುಗಳಲ್ಲಿ ವಿಪರೀತ ನೋವು ದೃಷ್ಟಿ ಕಡಿಮೆ ಆಗುವುದು, ಬಿಸಿಲಿಗೆ ಕಣ್ಣುಗಳು ಕುಕ್ಕುವುದು, ಕಣ್ಣುಗಳನ್ನು ಬಿಡಲು ಆಗದಿರುವುದು, ರೋಗದ ಪ್ರಮುಖ ಲಕ್ಷಣಗಳಾಗಿವೆ.
ಏನು ಮಾಡಬೇಕು?
–ಕಣ್ಣುಗಳನ್ನು ಸ್ವಚ್ಛಗೊಳಿಸಲು ಬಟ್ಟೆ ಬಳಸಬೇಕು. ಕಣ್ಣುಗಳನ್ನು ಉಜ್ಜಬಾರದು
–ರಕ್ಷಣಾತ್ಮಕ/ಕಪ್ಪು ಕನ್ನಡಕಗಳನ್ನು ಬಳಸಬೇಕು
–ಮನೆಮದ್ದುಗಳು ಅಥವಾ ಸ್ವಯಂ ಪ್ರಿಸ್ಕ್ರಿಪ್ಷನ್ ಬಳಸಬಾರದು
–ಕಣ್ಣುಗಳಲ್ಲಿ ಯಾವುದೇ ಹನಿಗಳನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು
–ಇತ್ತೀಚಿನ ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿ ಮಂದವಾಗುತ್ತಿದ್ದರೆ ರೋಗಲಕ್ಷಣಗಳ ತೀವ್ರತೆಯನ್ನು ಹೆಚ್ಚಿಸಿದರೆ ಅಥವಾ ಕಣ್ಣಿನ ಜ್ವರದ ಬಗ್ಗೆ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು
–ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಬೇಕು. ಸ್ಯಾನಿಟೈಸ ಮಾಡಿಕೊಳ್ಳಬೇಕು
–ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು ಏನು ಮಾಡಬಾರದು?
–ಕಣ್ಣುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಬೇಕು
–ಟವೆಲ್ ಕರವಸ್ತ್ರ ಬೆಡ್‌ಶೀಟ್ ಇತ್ಯಾದಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು
–ಸೋಂಕಿತ ವ್ಯಕ್ತಿ; ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು
–ಜನದಟ್ಟಣೆ ಜಾಗಕ್ಕೆ ಹೋಗಬಾರದು–ಕಣ್ಣಿಗೆ ವಿಶ್ರಾಂತಿ ಕೊಡಬೇಕು
ಮದ್ರಾಸ್ ಐ ಬಂದಿರುವವರು ಉಪಯೋಗಿಸಿದ ವಸ್ತುಗಳನ್ನು ಬಳಕೆ ಮಾಡಿದರೆ ಆರೋಗ್ಯವಂತರಿಗೂ ಇದು ಹಬ್ಬುತ್ತದೆ.-ಡಾ.ಪ್ರದೀಪರೆಡ್ಡಿ ನೇತ್ರ ತಜ್ಞ ಮೀನಾಕ್ಷಿ ನೇತ್ರಾಲಯ
ನಮ್ಮ ಕುಟುಂಬದಲ್ಲಿ ಒಬ್ಬರಿಗೆ ಮದ್ರಾಸ್ ಐ ಬಂದಿದ್ದು ಈಗ ಎಲ್ಲರಿಗೂ ಬಂದಿದೆ. ಗ್ರಾಮದಲ್ಲಿ ಅನೇಕರಿಗೆ ಕಾಣಿಸಿಕೊಂಡಿದೆ. ಶಾಲಾ ಮಕ್ಕಳಲ್ಲೂ ಹೆಚ್ಚು ಕಾಣಿಸಿಕೊಂಡಿದೆ-ಬೀರಲಿಂಗಪ್ಪ ಕಿಲ್ಲನಕೇರಾ, ಯುವಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.