ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದ ಮಹಾಬಲೇಶ್ವರ ದೇವಾಲಯ: ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಏಕದಂಡಗಿಮಠದ ಪೀಠಾಧ್ಯಕ್ಷ ಶ್ರೀನಿವಾಸ ಸ್ವಾಮೀಜಿ
Last Updated 4 ಅಕ್ಟೋಬರ್ 2018, 16:23 IST
ಅಕ್ಷರ ಗಾತ್ರ

ಯಾದಗಿರಿ: ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಶ್ರೀರಾಮಚಂದ್ರಾಪುರದ ಸುಪರ್ದಿಗೆ ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿರುವುದನ್ನು ಇಲ್ಲಿನ ಏಕದಂಡಗಿಮಠದ ಪೀಠಾಧ್ಯಕ್ಷ ಶ್ರೀನಿವಾಸ ಸ್ವಾಮೀಜಿ ಸ್ವಾಗತಿಸಿದ್ದಾರೆ.

‘ಸುಪ್ರೀಂ ಕೋರ್ಟಿನ ಸ್ಪಷ್ಟ ಆದೇಶವನ್ನು ಧಿಕ್ಕರಿಸಿ ದೇವಾಲಯವನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರ ರಾಜ್ಯದ ಆಡಳಿತವನ್ನು ಮಾಡಬೇಕೆ ಹೊರತು ಧಾರ್ಮಿಕ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹತ್ತು ವರ್ಷಗಳಲ್ಲಿ ರಾಮಚಂದ್ರಾಪುರಮಠ ಗೋಕರ್ಣ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಗಳನ್ನು ಮಾಡಿತ್ತು. ಜಾತಿ- ಮತ, ಭೇದ ಮಾಡದೇ ಎಲ್ಲರಿಗೂ ದೇವಾಲಯದಲ್ಲಿ ಅವಕಾಶ ನೀಡುವ ಜತೆಗೆ ಆತ್ಮಲಿಂಗವನ್ನು ಸ್ಪರ್ಶಿಸಿ ಪೂಜಿಸುವ ಅವಕಾಶವನ್ನು ಕಲ್ಪಿಸಿತ್ತು. ಮೊದಲು ಹೋದಾಗ ನೀರು ಕುಡಿಯಲೂ ಅವಕಾಶ ಸಿಗುತ್ತಿರಲಿಲ್ಲ. ರಾಮಚಂದ್ರಾಪುರಮಠ ಎರಡು ಹೊತ್ತು ಉಚಿತ ಪ್ರಸಾದ ವ್ಯವಸ್ಥೆ ಕೂಡ ಕಲ್ಪಿಸಿತ್ತು’ ಎಂದು ತಿಳಿಸಿದ್ದಾರೆ.

‘ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಎಲ್ಲಾ ಮತ - ಪಂಥಗಳ ಸಂತರನ್ನು ಆಹ್ವಾನಿಸಿ ಅವರಿಂದ ಪೂಜಾ ಕೈಂಕರ್ಯ ಮಾಡಿಸಿ ಸಂತರನ್ನು ಗೌರವಿಸುವ ಉತ್ತಮ ಕಾರ್ಯವನ್ನು ರಾಮಚಂದ್ರಾಪುರಮಠ ಆರಂಭಿಸಿತ್ತು. ಅಂತಹ ಧಾರ್ಮಿಕ ಕೈಂಕರ್ಯ ನಡೆಸುತ್ತಿದ್ದ ರಾಮಚಂದ್ರಪುರಮಠದ ಸ್ವಾಧೀನದಿಂದ ಸರ್ಕಾರ ಕಿತ್ತುಕೊಂಡಿತ್ತು. ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಮತ್ತೆ ಬುದ್ಧಿ ಹೇಳಿರುವುದು ಸರ್ಕಾರ ಅವಿವೇಕಿತನಕ್ಕೆ ಸಾಕ್ಷಿ ಎನ್ನಬಹುದು’ ಎಂದಿದ್ದಾರೆ.

‘ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು, ಆಕ್ರಮಣಗಳನ್ನು ನಿಲ್ಲಿಸಬೇಕು. ಸರ್ಕಾರ ಗೋಕರ್ಣದ ಸಮಗ್ರ ಅಭಿವೃದ್ಧಿಗೆ ಶ್ರೀರಾಮಚಂದ್ರಾಪುರಮಠಕ್ಕೆ ಅಗತ್ಯ ಸಹಕಾರ ನೀಡಬೇಕು. ರಾಘವೇಶ್ವರ ಶ್ರೀಗಳ ದೇಸಿ ಗೋತಳಿಗಳನ್ನು ಉಳಿಸುವ ಕಾರ್ಯಕ್ಕೆ ಸಹಕಾರ ನೀಡಬೇಕು. ಅನಗತ್ಯವಾಗಿ ತೊಂದರೆ ನೀಡಿದರೆ, ಜಾತಿ ಮತಗಳನ್ನು ಮರೆತು ಸರ್ಕಾರದ ಕ್ರಮವನ್ನು ಪ್ರತಿಭಟಿಸಬೇಕಾಗುತ್ತದೆ’ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT