ಶನಿವಾರ, ಡಿಸೆಂಬರ್ 4, 2021
20 °C
ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಗ್ರಾಮದ ಜನ; ಅಧಿಕಾರಿಗಳ ನಿರ್ಲಕ್ಷ್ಯ

ಸೈದಾಪುರ: ಮಲ್ಹಾರ ರಸ್ತೆಗಳಲ್ಲಿ ಮಲಿನ ನೀರು

ಮಲ್ಲಿಕಾರ್ಜುನ ಬಿ.ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ಸದಾ ಕೊಳಚೆ ತುಂಬಿದ ಚರಂಡಿಗಳು, ಸಿ.ಸಿ ರಸ್ತೆಯ ಮೇಲೆ ಹರಿಯುವ ಈ ಚರಂಡಿಗಳ ಗಲೀಜು ನೀರು, ಈ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವ ಮಕ್ಕಳು, ಮಹಿಳೆಯರು, ವೃದ್ಧರು. ದುರ್ವಾಸನೆ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿ...

–ಇದು ಸಮೀಪದ ಮಲ್ಹಾರ ಗ್ರಾಮದ 2ನೇ ವಾರ್ಡ್‌ನಲ್ಲಿ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಚಿತ್ರಣ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ನೈರ್ಮಲ್ಯ ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಅಸ್ವಚ್ಛತೆ ಸಮಸ್ಯೆ ತಾಂಡವವಾಡುತ್ತಿದೆ. 2ನೇ ವಾರ್ಡ್‌ ಸೇರಿದಂತೆ ಬೇರೆ ವಾರ್ಡ್‌ಗಳಲ್ಲಿಯೂ ಚರಂಡಿ, ಸಿ.ಸಿ ರಸ್ತೆ ಸಮಸ್ಯೆಗಳಿರುವುದಾಗಿ ಗ್ರಾಮಸ್ಥರು ತಿಳಿಸುತ್ತಾರೆ.

‘ಮಲ್ಹಾರ ಗ್ರಾಮದ ಎರಡನೇ ವಾರ್ಡ್‌ನಲ್ಲಿ ಛತ್ರಿ ನಿಂಗಪ್ಪ ಅವರ ಮನೆ ಮುಂದಿನ ರಸ್ತೆಯಲ್ಲಿ ನಿತ್ಯವೂ ಚರಂಡಿಯ ಕೊಳಚೆ ನೀರು ಹರಿಯುತ್ತಿರುತ್ತದೆ. ವಾರ್ಡ್‌ನ ಬೇರೆ ರಸ್ತೆಗಳೂ ಇದಕ್ಕೆ ಹೊರತಾಗಿಲ್ಲ. ಪಂಚಾಯಿತಿಯಿಂದ ನಿಯಮಿತವಾಗಿ ಚರಂಡಿಯಲ್ಲಿನ ಹೂಳೆತ್ತದೆ ಇರುವುದರಿಂದ ಕಸ-ಕಡ್ಡಿ, ಮಣ್ಣು ಸಂಗ್ರಹವಾಗಿ ಮಳೆ ನೀರು ಮತ್ತು ಮನೆಗಳ ನಿರುಪಯುಕ್ತ ನೀರು ಚರಂಡಿಯ ಮೂಲಕವಾಗಿ ಸರಾಗವಾಗಿ ಹರಿಯುವುದಿಲ್ಲ. ಚರಂಡಿಗಳು ತುಂಬಿಕೊಂಡು ಗಲೀಜು ನೀರು ರಸ್ತೆಯ ಮೇಲೆ ಹರಿಯುತ್ತದೆ. ಸಮಸ್ಯೆ ಕುರಿತಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ವಾರ್ಡ್‌ ನಿವಾಸಿಗಳು ದೂರುತ್ತಾರೆ.

‘ಚರಂಡಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸೇರಿದಂತೆ ಚರಂಡಿ ನೀರು ಸಂಗ್ರಹಗೊಂಡಿರುವುದು ಗ್ರಾಮದಲ್ಲಿ ನೈರ್ಮಲ್ಯ ಎಂಬುದು ಮರೀಚಿಕೆಯಾಗಿ ಉಳಿದಿದೆ. ಇಂತಹ ಕೊಳಚೆ ಕೆಸರು ತುಂಬಿದ ರಸ್ತೆಯಲ್ಲಿ ತಿರುಗಾಡುವ ಜನರು, ವಾಹನ ಸವಾರರು ಹರಸಾಹಸ ಪಡುತ್ತಿರುವುದು ಸಾಮಾನ್ಯವಾಗಿದೆ’ ಎಂಬುದು ಸ್ಥಳೀಯರ ಅಳಲು.

‘ಸದಾ ಕಾಲ ರಸ್ತೆಯಲ್ಲಿ ನಿಲ್ಲುವ ನೀರಿನಿಂದ ಸಾಬಣ್ಣ ದೊಡ್ಡಮನಿ ಅವರ ಮನೆಯ ಹತ್ತಿರ ರಸ್ತೆ ಮಧ್ಯದ ಚರಂಡಿಯನ್ನು ದಾಟಲು ಹಾಕಿದ ಕಾಂಕ್ರೀಟ್ ಸಂಪೂರ್ಣ ಹಾಳಾಗಿದೆ. ದುರಸ್ತಿ ಮಾಡಿಲ್ಲ. ರಾತ್ರಿ ಸಮಯದಲ್ಲಿ ಯಾರಾದರೂ ಬಿದ್ದು ಗಾಯ ಮಾಡಿಕೊಳ್ಳಬಹುದು. ವಾಹನ ಸವಾರರು ಎಚ್ಚರ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ’ ಎಂದು ಗ್ರಾಮದ ಯುವಕ ಸಿದ್ದು ನಾಯಕ ತಿಳಿಸಿದರು.

‘ರಸ್ತೆ ಮಧ್ಯೆ ನಿಂತ ನೀರಿನಲ್ಲಿ ವಾಹನಗಳು ಸಂಚರಿಸುವುದರಿಂದ ಪಕ್ಕದ ಮನೆಯಂಗಳದಲ್ಲಿ ಗಲೀಜು ಸಿಡಿಯುತ್ತದೆ. ಇದರಿಂದ ಮಕ್ಕಳು ಮನೆಯಂಗಳದಲ್ಲಿ ಆಟವಾಡಲು, ಜನರು ಮನೆಯ ಹೊರಗಡೆ ಕುಳಿತುಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ನಿಂತ ನೀರಿನ ದುರ್ವಾಸನೆ ಹಾಗೂ ನೊಣ, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಕೊರೊನಾ ಭಯದ ಜತೆಗೆ ವಾರ್ಡ್‌ ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯನ್ನೂ ಅನುಭವಿಸುವಂತಾಗಿದೆ. ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗಳಿಗೆ ಮುಕ್ತಿ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು