ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಎಪಿಎಂಸಿ, ಭೂಸುಧಾರಣಾ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
Last Updated 28 ಸೆಪ್ಟೆಂಬರ್ 2020, 13:45 IST
ಅಕ್ಷರ ಗಾತ್ರ

ಯಾದಗಿರಿ:ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿಕನ್ನಡಪರ, ಕಾರ್ಮಿಕ ಸಂಘಟನೆ ಎಐಯುಟಿಯುಸಿ, ಸಿಐಟಿಯು, ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಜಿಲ್ಲೆಯಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿದವು.

ನಗರದಸುಭಾಶ್ಚಂದ್ರ ಬೋಸ್, ಗಾಂಧಿ, ಶಾಸ್ತ್ರಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಯಾದಗಿರಿ, ಸುರಪುರ ನಗರದಲ್ಲಿ ಮಾತ್ರ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಬೇರೆ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಕಡೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.

ನಗರದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವ ಮೂಲಕ ವ್ಯಾಪಾರಸ್ಥರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಎಂದಿನಂತೆ ಪರಿಸ್ಥಿತಿ ಇತ್ತು. ಬೆಳಿಗ್ಗೆ ಬಸ್‌ ಓಡಾಟ ನಡೆಯಿತು. ನಂತರ ಮಧ್ಯಾಹ್ನದ ವೇಳೆ ಬಂದ್ ಆಯಿತು. ಸಂಜೆ ಮತ್ತೆ ಬಸ್‌ ಸಂಚಾರ ಇತ್ತು. ಆಟೊ, ಬೈಕ್‌ ಸಂಚಾರ ಎಂದಿನಂತೆ ಇತ್ತು.

ಸೋಮವಾರ ಬೆಳಿಗ್ಗೆ 7ರಿಂದಲೇ ಪ್ರತಿಭಟನೆಗಳು ಆರಂಭವಾಗಿ ಮಧ್ಯಾಹ್ನ2 ಗಂಟೆತನಕ ವಿವಿಧ ಕಡೆ ಬೈಕ್‌ ರ‍್ಯಾಲಿ ನಡೆಯಿತು.

ಸುಭಾಷ ವೃತ್ತದಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಎಸ್‌. ಸೋಮನಾಳ ಅವರ ಮೂಲಕ ರಾಷ್ಟ್ರಪತಿ ಅವರಿಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕೇಶ ಮುಂಡನ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಆದರೆ, ಪ್ರತಿಭಟನೆ ಮಾತ್ರ ನಡೆಯಿತು.

ಗುರುಮಠಕಲ್‌ನಲ್ಲಿಬಂದ್‌ಗೆ ಬೆಂಬಲ ಸಿಕ್ಕಿಲ್ಲ.ವಾರದ ಸಂತೆಯಿರುವುದರಿಂದ ಬೇರೆ ದಿನಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗ್ರಾಮಾಂತರ ಪ್ರದೇಶದ ಜನರು ಯಥಾಸ್ಥಿತಿಗಿಂತಲೂ ಹೆಚ್ಚಿನ ಜನರ ಓಡಾಟವಿತ್ತು.

ಶಹಾಪುರ, ಕೆಂಭಾವಿಯಲ್ಲಿಯೂ ಬಂದ್ ನಡೆಯಲಿಲ್ಲ. ಅಂಗಡಿ ಮುಂಗ್ಗಟ್ಟು ಎಂದಿನಂತೆ ಇತ್ತು. ಕಕ್ಕೇರಾದಲ್ಲಿ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.ಅಂಗಡಿ ಮಾಲೀಕರ ಮನವೊಲಿಸಿ 2 ಗಂಟೆ ಅಂಗಡಿಗಳು ಬಂದ್ಮಾಡಲಾಯಿತು. ಹುಣಸಗಿ, ಗುರುಮಠಕಲ್‌, ವಡಗೇರಾ, ಸೈದಾಪುರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ಪ್ರತಿಭಟನೆ ನಡೆಯಲ್ಲಿಲ್ಲ. ಯರಗೋಳದಲ್ಲಿ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೈಕ್‌ ಬಳಸದಂತೆ ತಾಕೀತು:

ನಗರದ ಸುಭಾಷ್ ವೃತ್ತದಲ್ಲಿ ಸರ್ವ ಸಂಘಟನಾ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮೈಕ್ ಬಳಸದಂತೆಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ತಾಕೀತು ಮಾಡಿದರು. ಒಂದು ವಾಹನಕ್ಕೆ ಮೈಕ್‌ ಅಳವಡಿಸಲು ಅನುಮತಿ ನೀಡಬೇಕು ಎಂದು ಪ್ರತಿಭಟನಾಕಾರರುಆಗ್ರಹಿಸಿದರು.ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ವಾಗ್ವಾದ ನಡೆದು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT