ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಗೆ ಸಿಂಗಾರಗೊಂಡ ಮಲ್ಲಯ್ಯನ ಬೆಟ್ಟ

ಮಲ್ಲಯ್ಯನ ಪಲ್ಲಕ್ಕಿ ಉತ್ಸವ ನಾಳೆ; ಸಂಜೆ ಸರಪಳಿ ಹರಿಯುವ ಆಚರಣೆ
Last Updated 13 ಜನವರಿ 2019, 19:30 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲಿನ ಪ್ರಸಿದ್ಧ ಮೈಲಾರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಜ.14ರಂದು ವಿಜೃಂಭಣೆಯಿಂದ ಜರುಗಲಿದ್ದು, ಇಡೀ ಮೈಲಾಪುರ ಸಂಭ್ರಮದಲ್ಲಿ ಸಿಂಗಾರಗೊಂಡಿದೆ.

ದೇಶದ ಮೈಲಾರಲಿಂಗನ ಕ್ಷೇತ್ರಗಳಲ್ಲಿ ಮೈಲಾಪುರ ಕೊನೆಯ ಕ್ಷೇತ್ರವಾಗಿದ್ದು, ಮೈಲಾರಲಿಂಗೇಶ್ವರ ಇಲ್ಲಿನ ಗಿರಿಯಲ್ಲಿ ನೆಲೆಸಿದ್ದಾನೆ ಎಂಬ ಪೌರಾಣಿಕ ಪ್ರತೀತಿಯಿಂದಾಗಿ ಈ ಗ್ರಾಮ ಖ್ಯಾತಿಗೊಂಡಿದೆ.

ಪೌರಾಣಿಕ ಹಿನ್ನೆಲೆ: ಆಂಧ್ರಪ್ರದೇಶದಲ್ಲಿನ ಶ್ರೀಶೈಲ ವಾಸಿಯಾಗಿದ್ದ ಶಿವನಿಗೆ ಹೇಮರೆಡ್ಡಿ ಮಲ್ಲಪ್ಪ ಪರಮ ಭಕ್ತೆಯಾಗಿದ್ದಳು. ಆಕೆಯ ಕನಸಿನಲ್ಲಿ ಶಿವ ಕಾಣಿಸಿಕೊಂಡು ಯಾರ ದರ್ಶನವೂ ಆಗದ ಹಸುವಿನ ಹಾಲು ನೈವೇದ್ಯ ಮಾಡುವಂತೆ ಕೇಳಿಕೊಳ್ಳುತ್ತಾನೆ. ಅದರಂತೆ ಹೇಮರೆಡ್ಡಿ ಮಲ್ಲಮ್ಮ ನಸುಕಿನಲ್ಲಿ ಉಗುರು ಬೆಚ್ಚನೆಯ ಹಸುವಿನ ಹಾಲು ಕರೆದುಕೊಂಡು ಶಿವನಿಗೆ ನೈವೇದ್ಯ ಮಾಡುವ ಮೂಲಕ ಭಕ್ತಿ ಅರ್ಪಿಸುತ್ತಾಳೆ.

ಹೀಗಿರುವಾಗ ಒಮ್ಮೆ ಹೇಮರೆಡ್ಡಿ ಮಲ್ಲಮ್ಮನನ್ನು ಹಿಂಬಾಲಿಸಿದ ಆಕೆಯ ಪತಿ ಭರಮಣ್ಣ ಹಾಲಿನ ದರ್ಶನ ಮಾಡುತ್ತಾನೆ. ನಂತರ ಆ ಹಾಲನ್ನು ಸೇವಿಸದ ಶಿವ ಅಲ್ಲಿನ ಗಿರಿ ತ್ಯಜಿಸಿ ಮೈಲಾಪುರದಲ್ಲಿ ಬಂದು ನೆಲೆಗೊಳ್ಳಲು ನೋಡುತ್ತಾನೆ. ಮೈಲಾಪುರದಲ್ಲಿನ ಗಿರಿಯಲ್ಲಿ ಸಪ್ತ ಋಷಿಗಳು ತಪಸ್ಸು ಮಾಡುತ್ತಿರಲು ಮಲ್ಲಾರಕ್ಷ, ಮಾಣಿಕರಕ್ಷ ಎಂಬ ರಾಕ್ಷಸರು ತೊಂದರೆ ನೀಡುತ್ತಿದ್ದರು. ಸಪ್ತ ಋಷಿಗಳ ಮಧ್ಯೆ ಜಾಗ ಪಡೆದ ಶಿವ ನಂತರ ರಾಕ್ಷಸರ ಸಂಹಾರ ನಡೆಸುತ್ತಾನೆ.

ಶಿವ–ರಾಕ್ಷಸರಿಗೂ ನಡೆದ ಘೋರ ಯುದ್ಧದಲ್ಲಿ ಮಣಿಕ ರಕ್ಷ ಸಂಹಾರ ಆಗುತ್ತಾನೆ. ನಂತರ ಮಲ್ಲಾರಕ್ಷ ಉಳಿದು ಶಿವನಿಗೆ ಶರಣಾಗುತ್ತಾನೆ. ಆ ಮಲ್ಲಾರಕ್ಷನನ್ನು ಶಿವ ತನ್ನ ವಾಹನ ಕುದುರೆಯನ್ನಾಗಿ ಮಾಡಿಕೊಳ್ಳುತ್ತಾನೆ. ನಂತರ ಬೆಟ್ಟದಲ್ಲಿ ಶಾಶ್ವತವಾಗಿ ನೆಲೆಸುತ್ತಾನೆ. ಶಿವನ ಜತೆ ಗಂಗಾಮಾಳಮ್ಮ, ತುಂಗಂಗಿ ಮಾಳಮ್ಮ ಎರಡೂ ಬದಿಯಲ್ಲಿ ನೆಲೆಸುತ್ತಾರೆ. ಅದರ ಪಕ್ಕದಲ್ಲಿ ಹೆಗ್ಗಣ ಪ್ರಧಾನಿಗೆ ಜಾಗ ನೀಡಲಾಗಿದೆ. ಹೀಗೆ ಮೈಲಾಪುರ ಮೈಲಾರಲಿಂಗೇಶ್ವರನ ಪವಾಡಗಳಿಗೆ ಪೌರಾಣಿಕ ಹಿನ್ನೆಲೆ ಇದೆ.

ಹೊನ್ನಕೆರೆಯಲ್ಲಿ ಗಂಗಾಸ್ನಾನ:ಸಂಕ್ರಾಂತಿ ಹಬ್ಬಕ್ಕೂ ಮುನ್ನ ಇಲ್ಲಿನ ಮೈಲಾರಪ್ಪ ಮತ್ತು ಗಂಗಾಮಾಳಮ್ಮನ ಮೂರ್ತಿಗಳನ್ನು ಸಕಲವಾದ್ಯಗಳೊಂದಿಗೆ ಹೊನ್ನಕೆರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಗಂಗಾಸ್ನಾನ ಮಾಡಿಸುವ ಸಂಪ್ರದಾಯ ಜಾತ್ರಾ ಭಕ್ತರ ಕುತೂಹಲ, ಭಕ್ತಿಯ ಪರಾಕಾಷ್ಠೆಯಾಗಿ ಇಲ್ಲಿ ನಡೆಯುತ್ತದೆ.

‘ಏಳುಕೋಟಿ ಮೈಲಾರನಿಗೆ..’ ಎಂಬ ಉದ್ಘೋಷ ಎಲ್ಲೆಡೆ ಮೊಳಗುತ್ತದೆ. ದೇವರ ಪ್ರಭಾವಳಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಹೊನ್ನಕೆರೆಯತ್ತ ಹೊರಟಾಗ ಪಲ್ಲಕ್ಕಿಯ ಮೇಲೆ ಕುರಿಮರಿ, ಕಬ್ಬು, ಶೇಂಗಾ ಎಸೆಯುತ್ತಾರೆ. ರೈತರ ಹೊಲಗಳಲ್ಲಿ ಪೈರು ಸಮೃದ್ಧವಾಗಿ ಬೆಳೆಯಲಿ, ಮಳೆ ಸುರಿಯಲಿ ಎಂಬ ಹರಕೆ ಹೊತ್ತ ಭಕ್ತರು ಎಸೆಯುತ್ತಾರೆ ಎಂಬುದಾಗಿ ಮೈಲಾಪುರ ಗ್ರಾಮದ ಮುಖಂಡ ಪ್ರಧಾನ ಅರ್ಚಕ ಬಸವರಾಜಪ್ಪ ಹೇಳುತ್ತಾರೆ. ಆದರೆ, ಕುರಿಮರಿ ಎಸೆಯದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ.

ಜಾತ್ರಾ ಮಹೋತ್ಸವದ ಮತ್ತೊಂದು ವಿಶೇಷ ಎಂದರೆ ಸರಪಳಿ ಹರಿಯುವ ಸಂಪ್ರದಾಯ. ದೇವಸ್ಥಾನದ ಅರ್ಚಕರೊಬ್ಬರು ಸರಪಳಿ ಹರಿಯುವಾಗ ಭಕ್ತರು ರೋಮಾಂಚನ ಅನುಭವಿಸುತ್ತಾರೆ. ನಂತರ ಬೆಟ್ಟದಲ್ಲಿನ ತುಪ್ಪದ ಬಂಡೆಗೆ ತುಪ್ಪದ ದೀಪ ಹಚ್ಚಿ ಭಕ್ತರು ಸಂಭ್ರಮಿಸುತ್ತಾರೆ.

ಬೆಟ್ಟದತ್ತ ಪಾದಯಾತ್ರಿಗಳ ಪಯಣ:ಮೈಲಾರಲಿಂಗಸ್ವಾಮಿ ಜಾತ್ರೆ ಅಂಗವಾಗಿ ರಾಯಚೂರು, ಕಲಬುರ್ಗಿ ತೆಲಂಗಾಣದ ಕಡೆಗಳಿಂದ ಮೂರು ದಿನಗಳಹಿಂದೆ ಪಾದಯಾತ್ರೆ ಮೂಲಕ ಹೊರಟು ಬಂದ ಅನೇಕ ಪಾದಯಾತ್ರಿ ಭಕ್ತರ ಗುಂಪು ಶನಿವಾರ ಮೈಲಾಪುರ ರಸ್ತೆಯುದ್ದಕ್ಕೂ ಸಾಗಿದ್ದು ಕಂಡುಬಂತು.

‘ಮಲ್ಲಯ್ಯ ನಮ್ಮ ಇಷ್ಟ ದೇವರು. ಪ್ರತಿವರ್ಷ 80 ಕಿಲೋ ಮೀಟರ್ ಪಾದಯಾತ್ರೆ ಮೂಲಕ ಬಂದು ಮೈಲಾರಲಿಂಗನ ದರ್ಶನ ಪಡೆದ ಮೇಲೆಯೇ ಮನಸ್ಸಿಗೆ ಶಾಂತಿ. ಇದನ್ನು ನಮ್ಮ ಪೂರ್ವಜರು ರೂಢಿಸಿಕೊಂಡು ಬಂದಿರುವ ಪಾರಪಂಪರಿಕ ಧಾರ್ಮಿಕ ಪದ್ಧತಿ. ನಾವು ಮುಂದುವರಿಸಿದ್ದೇವೆ’ ಎಂದು ಕಲಬುರ್ಗಿ ಜಿಲ್ಲೆ ನಾಗಾಪುರದ ಶರಣು, ಸುರೇಶ ತಿಳಿಸಿದರು.

ಶನಿವಾರ ಸಂಜೆಯ ವೇಳೆಗೆ ಮೈಲಾಪುರದಲ್ಲಿ ಭಕ್ತರ ದಂಡು ಬೀಡುಬಿಡುತ್ತಿದ್ದ ದೃಶ್ಯ ಕಂಡು ಬಂತು. ಒಂದೆಡೆ ಹೊನ್ನಕೆರೆಯಲ್ಲಿ ಭಕ್ತರು ಗಂಗಾಸ್ನಾನದಲ್ಲಿ ತಲ್ಲೀನರಾದರೆ; ಇನ್ನೊಂದೆಡೆ ತೆಲಂಗಾಣದ ಕಡೆಯಿಂದ ಬಂದಿದ್ದ ಭಕ್ತರು ಕೆರೆಯಂಗಳಲ್ಲಿ ತಾತ್ಕಾಲಿಕ ಗುಡಾರಗಳನ್ನು ನಿರ್ಮಿಸುತ್ತಿದ್ದರು.

ಒಂದು ದಿನ ಮುಂಚೆಯೇ ಲಕ್ಷಾಂತರ ಭಕ್ತರು ಬಂದು ಉಳಿದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚುವ ಸಾಧ್ಯ ಇದೆ ಎಂದು ದೇಗುಲದ ಅರ್ಚಕ ಭೀಮಾಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT