ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್ | ಮೂಲಸೌಲಭ್ಯಗಳ ಕೊರತೆ

Published 15 ಆಗಸ್ಟ್ 2023, 5:25 IST
Last Updated 15 ಆಗಸ್ಟ್ 2023, 5:25 IST
ಅಕ್ಷರ ಗಾತ್ರ

ಎಂ.ಪಿ. ಚಪೆಟ್ಲಾ

ಗುರುಮಠಕಲ್: ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಜನರಿಗೆ ರಸ್ತೆ, ನೀರು, ವಿದ್ಯುತ್, ಆರೋಗ್ಯ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲು ವಿವಿಧ ಯೋಜನೆ ಮತ್ತು ಅನುದಾನ ವ್ಯಯಿಸುತ್ತಿವೆ. ಆದರೆ ಪಟ್ಟಣದ ವಾರ್ಡ್ ನಂ. 16ರಲ್ಲಿ ಮೂಲಸೌಲಭ್ಯಗಳಿಲ್ಲದೆ, ನಿವಾಸಿಗಳು ಪರದಾಡುವಂತಾಗಿದೆ.

ವಾರ್ಡ್ ನಂ.16ರ ಹನುಮಾನ ಮಂದಿರದ ಸುತ್ತಲಿನ ಮನೆಗಳು ಎತ್ತರದ ಪ್ರದೇಶದಲ್ಲಿದ್ದು, ಪುರಸಭೆ ಕೊಳವೆಬಾವಿಯ ನೀರು ಸರಾಗವಾಗಿ ಎತ್ತರದಲ್ಲಿರುವ ಮನೆಗಳಿಗೆ ತಲುಪುವುದಿಲ್ಲ. ಕೊಳವೆಬಾವಿ ಕೆಟ್ಟಿರುವುದರಿಂದ ಕಿರು ನೀರು ಸರಬರಾಜು ಯೋಜನೆಯೂ ನಿರುಪಯುಕ್ತವಾಗಿದೆ.

‘ನಾಲ್ಕು ದಿನಗಳಿಗೊಮ್ಮೆ ಬರುವ ನೀರಿಗಾಗಿ ಕಾದು ಕುಳಿತುಕೊಳ್ಳಬೇಕು. ಇಲ್ಲವಾದರೆ ನೀರಿಲ್ಲದೆ ಪರದಾಡುವಂತಾಗುತ್ತದೆ’ ಎಂದು ರಾಕೇಶ ಮೇಂಗಜಿ ಅಲವತ್ತುಕೊಂಡರು.

ನಮ್ಮ ವಾರ್ಡ್‌ನಲ್ಲಿರುವ ಕೊಳವೆಬಾವಿ ಕೆಟ್ಟು ಎರಡು ತಿಂಗಳಾಗಿದೆ. ಸಂಬಂಧಿಸಿದವರು ದುರಸ್ತಿಗೊಳಿಸಲ್ಲ. ಈಚೆಗಷ್ಟೇ ಪರಿಶೀಲಿಸಿದ್ದು ದುರಸ್ತಿ ಕಾರ್ಯ ಆರಂಭಿಸಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೆ ಉಳಿದಿದೆ
ಹಣಮಂತರಾವ, ಶ್ರೀಗಿರಿ ಬಡಾವಣೆ ನಿವಾಸಿ

ವಾರ್ಡ್ ನಂ. 16ರ ವ್ಯಾಪ್ತಿಯ ಪಂಚಾಯತ್ ಮೊಹಲ್ಲಾ ಬಡಾವಣೆಯಲ್ಲಿ ಬಳಸದಿರುವ ಹಳೆಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಅನ್ನು ಹಾಗೆಬಿಟ್ಟಿದ್ದು, ಮುಚ್ಚಳವಿಲ್ಲದೆ ಬಾಯ್ತೆರುದುಕೊಂಡಿದೆ. ಹೀಗಾಗಿ ಮಕ್ಕಳು ಬೀಳುವ ಆತಂಕ ಅಲ್ಲಿನ ಜನರದ್ದು. ಪಕ್ಕದಲ್ಲಿ ಹೊಸಾ ಶೌಚಾಲಯ ನಿರ್ಮಿಸಿದಾಗಲೇ ಹಳೆ ಶೌಚಾಲಯದ ಟ್ಯಾಂಕ್ ಅನ್ನು ಸಂಪೂರ್ಣ ತೆಗೆದು ಮಣ್ಣು ಮುಚ್ಚಬೇಕಿತ್ತು. ಆದರೆ, ಸಂಭವಿಸಬಹುದಾದ ಅಪಾಯದ ಕುರಿತಾಗಲಿ, ಆತಂಕದ ಕುರಿತಾಗಲಿ ಈವರೆಗೂ ಯಾರೂ ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಯಲ್ಲಿ ನೀರು ರಸ್ತೆ ಯುಜಿಡಿ ಸಮಸ್ಯೆಗಳು ಚರಂಡಿ ನವೀಕರಣ ಸ್ವಚ್ಛತೆಗೆ ಆದ್ಯತೆ ನೀಡುವ ಕುರಿತು ಹಲವು ಬಾರಿ ಪುರಸಭೆಯಲ್ಲಿ ಗಮನ ಸೆಳೆದಿದ್ದೇನೆ. ಈಗಾಗಲೇ ಅಧಿಕಾರಿಗಳೂ ಪರಿಶೀಲನೆ ನಡೆಸಿದ್ದು ಪರಿಹರಿಸುವ ನಿರೀಕ್ಷೆಯಿದೆ.
ಲಕ್ಷ್ಮೀಬಾಯಿ ಚೌಧರಿ, ಪುರಸಭೆ ಸದಸ್ಯೆ

ಚರಂಡಿಗಳಲ್ಲಿ ಹೂಳು ತುಂಬಿದರೆ ಸ್ವಚ್ಛಗೊಳಿಸುವುದಿಲ್ಲ. ಕೊಳಚೆ ನೀರು ರಸ್ತೆ ಮೇಲೆ ಹರಿದು, ಗಲೀಜು ಹಾಗೆ ಉಳಿದುಕೊಂಡಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಿದ್ದು, ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತಿವೆ. ಈ ಕುರಿತು ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಪರಿಶೀಲನೆ ನಂತರ ಯಾವ ಕ್ರಮಕೈಗೊಂಡರು? ಏನು ಮಾಡಲಿದ್ದಾರೆಂದು ತಿಳಿಯದು ಎಂದು ಬಡಾವಣೆ ನಿವಾಸಿಗಳು ವ್ಯಂಗ್ಯವಾಡಿದ್ದಾರೆ.

ಮಳೆಗಾಲದಲ್ಲಿ ಚರಂಡಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ನಮ್ಮ ಮನೆಗೂ ಚರಂಡಿ ನೀರು ನುಗ್ಗುತ್ತಿವೆ. ಚರಂಡಿಯಲ್ಲಿ ತುಂಬಿದ ಹೂಳೂ, ರಸ್ತೆಯಲ್ಲಿ ಚರಂಡಿ ಮೆಲೆ ಹಾಕಿದ ಸಿಸಿ, ಚರಂಡಿಯಲ್ಲಿ ಯುಜಿಡಿ ಪೈಪ್ ಅಳವಡಿಸಿದ್ದರಿಂದ ಚರಂಡಿ ಬ್ಲಾಕ್ ಆಗುತ್ತಿದೆ. ಹೀಗಾಗಿ ಪಕ್ಕದ ಪ್ರದೇಶದಲ್ಲಿ ಚರಂಡಿ ನೀರು ನುಗ್ಗುತ್ತಿವೆ. ಇದರಿಂದ ಗಬ್ಬುನಾತದ ಜತೆಗೆ ಸೊಳ್ಳೆ ಮತ್ತು ಹಂದಿಗಳ ಕಿರಿಕಿರಿ ಹೆಚ್ಚುತ್ತಿದೆ ಎಂದು ಗಂಗಪ್ಪ ಕುರೋಳ ಅಸಹಾಯಕತೆ ತೋಡಿಕೊಂಡರು.

ಹೊಸ ಅನುದಾನದಲ್ಲಿ ಸ್ವಚ್ಛತೆಗೆ ಆದ್ಯತೆ

ವಾರ್ಡ್ ನಂ.16ರ ಕೊಳವೆಬಾವಿಯನ್ನು ಶೀಘ್ರ ದುರಸ್ತಿಗೊಳಿಸಲಾಗುವುದು. ಪಟ್ಟಣದ ಚರಂಡಿ ರಸ್ತೆ ಸಮಸ್ಯೆಗಳು ಸೇರಿದಂತೆ ಮೂಲಸೌಕರ್ಯಗಳ ಪೂರೈಕೆಗೆ 2023ರ ಹೊಸ ಅನುದಾನದಲ್ಲಿ ಆದ್ಯತೆ ನೀಡಲಾಗುವುದು. ಸ್ವಚ್ಛತೆಗೆ ಸಂಬಂಧಿಸಿದಂತೆ ಆದ್ಯತೆಯ ಮೇರೆಗೆ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ ಹೇಳಿದರು.

ಗುರುಮಠಕಲ್ ಪಟ್ಟಣದ ವಾರ್ಡ್ ನಂ-16 ರಲ್ಲಿ ಕಿರು ನೀರು ಸರಭರಾಜು ಯೋಜನೆಯ ಬೋರ್ ವೆಲ್ ಮೋಟರ್ ಕೆಟ್ಟು ಎರಡು ತಿಂಗಳ ಮೇಲಾದರೂ ದುರಸ್ಥಿ ಮಾಡಿಲ್ಲ.
ಗುರುಮಠಕಲ್ ಪಟ್ಟಣದ ವಾರ್ಡ್ ನಂ-16 ರಲ್ಲಿ ಕಿರು ನೀರು ಸರಭರಾಜು ಯೋಜನೆಯ ಬೋರ್ ವೆಲ್ ಮೋಟರ್ ಕೆಟ್ಟು ಎರಡು ತಿಂಗಳ ಮೇಲಾದರೂ ದುರಸ್ಥಿ ಮಾಡಿಲ್ಲ.
ಗುರುಮಠಕಲ್ ಪಟ್ಟಣದ ವಾರ್ಡ್ ನಂ-16 ರಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಸೊಳ್ಳೆಗಳ ಆವಾಸ ಸ್ಥಾನವಾಗಿದೆ.
ಗುರುಮಠಕಲ್ ಪಟ್ಟಣದ ವಾರ್ಡ್ ನಂ-16 ರಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಸೊಳ್ಳೆಗಳ ಆವಾಸ ಸ್ಥಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT