ಮಂಗಳವಾರ, ಅಕ್ಟೋಬರ್ 4, 2022
26 °C
ಬಯಲು ಪ್ರದೇಶದಲ್ಲಿಯೇ ಶವ ಪರೀಕ್ಷೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿದ್ದರೂ ದುರಸ್ತಿಗೆ ಬಂದ ಕೊಠಡಿಗಳು

ಯಾದಗಿರಿ: 38 ಪಿಎಚ್‌ಸಿಗಳಲ್ಲಿ ಮರಣೋತ್ತರ ಕಟ್ಟಡಗಳೇ ಇಲ್ಲ!

ಬಿ.ಜಿ. ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ 41 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ 38 ಕೇಂದ್ರಗಳಲ್ಲಿ (ಪೊಸ್ಟ್‌ ಮಾರ್ಟಂ) ಮರಣೋತ್ತರ ಪರೀಕ್ಷೆಗೆ ಕಟ್ಟಡಗಳೇ ಇಲ್ಲ. ಮೂರು ಕೇಂದ್ರಗಳಲ್ಲಿದ್ದರೂ ಅವು ದುರಸ್ತಿಗೆ ಬಂದಿವೆ.

ಜಿಲ್ಲೆಯಲ್ಲಿ 3 ಹೊಸ, 3 ಹಳೆ ತಾಲ್ಲೂಕುಗಳಿವೆ. ಆರೋಗ್ಯ ಇಲಾಖೆ ಇನ್ನೂ ಹಳೆ ತಾಲ್ಲೂಕಿನಂತೆಯೇ ಕಾರ್ಯನಿರ್ವಹಿಸುತ್ತಿದೆ.

ಅಪಘಾತ, ವಿಷ ಸೇವಿಸಿ ಆತ್ಮಹತ್ಯೆ, ಕೊಲೆ ಇತ್ಯಾದಿಗಳು ನಡೆದಾಗ ಮರಣೋತ್ತರ ಪರೀಕ್ಷೆ ಮಾಡಬೇಕಾಗುತ್ತದೆ. ಆದರೆ, ಕೊಠಡಿಗಳು ಇಲ್ಲದಿದ್ದರಿಂದ ಬಯಲು ಪ್ರದೇಶದಲ್ಲಿಯೇ ಶವ ಪರೀಕ್ಷೆ ಮಾಡುವುದು ಸಾಮಾನ್ಯವಾಗಿದೆ.

6 ಸಮುದಾಯ ಕೇಂದ್ರಗಳು: ಜಿಲ್ಲೆಯಲ್ಲಿ 6 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಗುರುಮಠಕಲ್‌, ವಡಗೇರಾ, ಹುಣಸಗಿ ತಾಲ್ಲೂಕು ಕೇಂದ್ರಗಳಾದರೂ ತಾಲ್ಲೂಕು ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಲ್ಲ. ಹೀಗಾಗಿ ಇಲ್ಲಿ ಸಮುದಾಯ ಕೇಂದ್ರಗಳಿವೆ. ಅರಕೇರಾ (ಬಿ), ದೋರನಹಳ್ಳಿ, ಕೆಂಭಾವಿಯಲ್ಲಿ ಸಮುದಾಯ ಕೇಂದ್ರಗಳಿವೆ.

ಈ ಕೇಂದ್ರಗಳಲ್ಲಿ ಹೆಸರಿಗೆ ಪೊಸ್ಟ್‌ ಮಾರ್ಟಂ ಕಟ್ಟಡಗಳಿದ್ದು, ದುರಸ್ತಿಗೆ ಬಂದಿವೆ. ಬಯಲು ಜಾಗವೇ ಮರಣೋತ್ತರ ಪ‍ರೀಕ್ಷೆ ಕೈಗೊಳ್ಳುವ ಅನಿವಾರ್ಯವಿದೆ.

ಆರೋಗ್ಯ, ಶಿಕ್ಷಣ, ಕೃಷಿಗೆ ಒತ್ತು ಕೊಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿಯೇ ಈ ಸೌಲಭ್ಯ ಇಲ್ಲದಂತೆ ಆಗಿದೆ. ಹಲವಾರು ಕಡೆ ನಿರ್ಜನ ಪ್ರದೇಶ, ಬಯಲೇ ಮರಣೋತ್ತರ ‍ಪರೀಕ್ಷೆಯ ಕೇಂದ್ರವಾಗಿದೆ.

ಮರಣೋತ್ತರ ಪರೀಕ್ಷೆಗೆ ನಿರಾಕರಣೆ: ಸುರಪುರ ತಾಲ್ಲೂಕಿನ ಮಲ್ಲಾ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗುರುವಾರ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಈತನ ಮರಣೋತ್ತರ ಪರೀಕ್ಷೆ ನಡೆಸಲು ಆರೋಗ್ಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದರಿಂದ ಸುರಪುರ ತಾಲ್ಲೂಕು ಆಸ್ಪತ್ರೆಗೆ ಕಳಿಸಲಾಗಿದೆ. ಪ್ರಾಥಮಿಕ ಕೇಂದ್ರದಲ್ಲಿ ಸೌಲಭ್ಯ ಇಲ್ಲದ ಕಾರಣ ಶವವನ್ನು ದೂರದ ಸುರಪುರಕ್ಕೆ ತೆಗೆದುಕೊಂಡು ಹೋಗುವ ಅನಿವಾರ್ಯ ಉಂಟಾಗಿತ್ತು.

ಎಲ್ಲೆಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡಗಳಿಲ್ಲ

ಶಹಾಪುರ–ವಡಗೇರಾ ತಾಲ್ಲೂಕು ವ್ಯಾಪ್ತಿಯ ಚಟ್ನಳ್ಳಿ, ಹತ್ತಿಗೂಡುರು, ಹೈಯಾಳ (ಬಿ), ಕುರುಕುಂದ, ಶಿರವಾಳ, ಸಗರ, ತಡಿಬಿಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡಗಳಿಲ್ಲ. ವನದುರ್ಗಾ, ಬೆಂಡೆಬೆಂಬಳಿ, ಚಾಮನಾಳ ಪ್ರಾಥಮಿಕ ಕೇಂದ್ರಗಳಲ್ಲಿ ಕಟ್ಟಡಗಳಿದ್ದರೂ, ದುರಸ್ತಿಯಾಗಬೇಕಿದೆ. ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರ, ವಡಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ಇದ್ದರೂ ದುರಸ್ತಿಗೆ ಬಂದಿದೆ.

ಸುರಪುರ–ಹುಣಸಗಿ ತಾಲ್ಲೂಕಿಗೆ ಸಂಬಂಧಿಸಿದಂತೆ ದೇವರಗೋನಾಲ, ಗುತ್ತಿ ಬಸವೇಶ್ವರ, ಹಸನಾಪುರ, ಹೆಮನೂರ, ಕಕ್ಕೇರಾ, ಕಲ್ಲದೇವನಹಳ್ಳಿ, ಕೊಡೇಕಲ್ಲ, ಮಲ್ಲಾ(ಬಿ), ನಗನೂರ, ರಾಜನಕೊಳ್ಳುರ, ಶ್ರೀನಿವಾಸಪುರ, ಯಾಳಗಿ ಪ್ರಾಥಮಿ ಆರೋಗ್ಯ ಕೇಂದ್ರಗಳಲ್ಲಿ, ಕೆಂಭಾವಿ, ಹುಣಸಗಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆ ಕೇಂದ್ರ ಇಲ್ಲ. ಸುರಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡ ಇದೆ.

ಇನ್ನು ಯಾದಗಿರಿ–ಗುರುಮಠಕಲ್‌ ತಾಲ್ಲೂಕಿಗೆ ಸಂಬಂಧಿಸಿದಂತೆ ಗುರುಮಠಕಲ್‌, ಸೈದಾಪುರ ಸಮುದಾಯ ಕೇಂದ್ರಗಳಲ್ಲಿ ಪೋಸ್ಟ್ ಮಾರ್ಟಂ ಕೋಣೆ ಲಭ್ಯ ಇದೆ. ಆದರೆ, ಅರಕೇರಾ (ಬಿ) ಕೇಂದ್ರದಲ್ಲಿ ಲಭ್ಯ ಇಲ್ಲ. ಅಲ್ಲಿಪುರ, ಅಜಲಾಪುರ, ಬಳಿಚಕ್ರ, ಗಾಜರಕೋಟ, ಕೌಳೂರು, ಕಡೇಚೂರ, ಕೋಟೆಗೇರ, ಮಲ್ಹಾರ, ಮುದ್ನಾಳ, ಕಂದಕೂರ, ಎಲ್ಹೇರಿಯಲ್ಲಿ ಪೋಸ್ಟ್ ಮಾರ್ಟಂ ಕೊಠಡಿಗಳ ಲಭ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

***

ಜಿಲ್ಲೆಯ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷಾ ಕೇಂದ್ರಗಳ ಲಭ್ಯತೆ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಕೇಳಿದ್ದರು. ಅದರಂತೆ ಮಾಹಿತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು
ಡಾ.ಗುರುರಾಜ ಹಿರೇಗೌಡ್ರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

****

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆ ಕಟ್ಟಡ ನಿರ್ಮಿಸಬೇಕು. ಈಗಾಗಲೇ ನಿರ್ಮಿಸಿರುವ ಕಡೆ ದುರಸ್ತಿ ಮಾಡಿ, ಅಗತ್ಯ ಸೌಲಭ್ಯ ಕಲ್ಪಿಸಬೇಕು
ಅವಿನಾಶ ಜಗನ್ನಾಥ, ಕಾಂಗ್ರೆಸ್‌ ಯುವ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು