ಯಾದಗಿರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಜಾರಿಗೆ ತಂದಿರುವ ಐದು ಗ್ಯಾರಂಟಿಗಳನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಗ್ಯಾರಂಟಿ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅದರಲ್ಲಿ ಎರಡು ಮಾತಿಲ್ಲ. ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅರ್ಹರಿಲ್ಲದವರು ಗ್ಯಾರಂಟಿ ಯೋಜನೆ ಪಡೆಯುತ್ತಿದ್ದರೆ ಅದನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ನೌಕರಸ್ಥರು, ಅನುಕೂಲಸ್ಥರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಂಥ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡಿ ಕಟ್ ಆಗಬಹುದು ಎಂದು ಹೇಳಿದರು.
ಎಷ್ಟೇ ಹೊರೆಯಾದರೂ ಕೂಡ ಜನರಿಗೆ ಮಾತು ಕೊಟ್ಟಂತೆ ನಡದುಕೊಳ್ಳುತ್ತೇವೆ. ಅಭಿವೃದ್ಧಿ ಕಾರ್ಯಗಳು ಸ್ವಲ್ಪ ಕಡಿಮೆ ಪ್ರಾಮಾಣದಲ್ಲಿ ಆಗುತ್ತಿವೆ. ಸುಮಾರು ₹60 ಸಾವಿರ ಕೋಟಿ ಗ್ಯಾರಂಟಿ ಕೊಡುತ್ತಿದ್ದೇವೆ. ಮೊದಲಿನಂತೆ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಇದರ ನಡುವೆ ₹5 ಸಾವಿರ ಕೋಟಿ ವೆಚ್ಚದಲ್ಲಿ ಕೆಕೆಆರ್‌ಡಿಬಿ ಕ್ರಿಯಾ ಯೋಜನೆ ಮಾಡಿದ್ದೇವೆ. ಯಥಾ ಪ್ರಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಆಗುತ್ತವೆ. ಶಕ್ತಿ ಯೋಜನೆಗೆ ನಾವು ಯಾವ ಮಾನದಂಡ ಇಟ್ಟಿಲ್ಲ ಎಂದು ತಿಳಿಸಿದರು.
ಗೃಹಜ್ಯೋತಿಗೂ ಯಾವ ಮಾನದಂಡ ಇಡಲ್ಲ. ಗೃಹಲಕ್ಷ್ಮೀ ಯೋಜನೆಯಿಂದ ಸರ್ಕಾರಕ್ಕೆ ಹೊರೆ ಆಗುತ್ತಿಲ್ಲ. ಪ್ರತಿವರ್ಷ ಬಿಪಿಎಲ್ ಕಾರ್ಡ್ ಪರಿಷ್ಕರಣೆಯಂತೆ ಮುಂದೆಯೂ ಪರಿಷ್ಕರಣೆ ಆಗುತ್ತವೆ ಎಂದರು.
ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ, ನಾವೇ ಯಾಕೆ ಅವರನ್ನು ಕಾಂಗ್ರೆಸ್‌ಗೆ ತೆಗೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಸ್ವಾಗತ. ಟಿಕೆಟ್ ಕೊಡುವುದು ಬಿಡುವುದು ಕಾಂಗ್ರೆಸ್ ಹೈಕಮಾಂಡ್. ಕಾಂಗ್ರೆಸ್ ಪಕ್ಷವು ಅಷ್ಟು ಈಗ ವೀಕ್ ಇಲ್ಲ. ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಸ್ವಾಗತ. ಯೋಗೇಶ್ವರ್ ಮಾತ್ರವಲ್ಲ ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ ಅವರು ಕಾಂಗ್ರೆಸ್ ಸೇರುವುದಾದರೆ ಎಲ್ಲರಿಗೂ ಕಾಂಗ್ರೆಸ್ ಸ್ವಾಗತ ಇದೆ ಎಂದು ಹೇಳಿದರು.
ಪರಶುರಾಮ್ ಸಾವು: ಹಾರಿಕೆ ಉತ್ತರ ನೀಡಿದ ಸಚಿವ!
ಪಿಎಸ್ಐ ಪರಶುರಾಮ ಕುಟುಂಬಕ್ಕೆ ಸಾಂತ್ವನ ಹೇಳದ ವಿಚಾರ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹಾರಿಕೆ ಉತ್ತರ ನೀಡಿದರು. ನಾವು ಆವತ್ತು ಬರಬೇಕು. ಅಂದರೆ ಬರಲು ಆಗಲಿಲ್ಲ. ಮರುದಿನ ಅವರ ಕುಟುಂಬಸ್ಥರು ಇಲ್ಲಿ ಇರಲಿಲ್ಲ. ಗೃಹ ಸಚಿವರು ಹೋಗಿ ಭೇಟಿ ಆಗಿದ್ದಾರೆ. ತಾವೂ ಸಚಿವರು ಸೌಜನ್ಯಕಾದ್ರೂ ಭೇಟಿ ಮಾಡಬೇಕೆಂಬ ಮಾಧ್ಯಮದ ಪ್ರಶ್ನೆಗೆ ಹೋಗಿಲ್ಲ ಅಷ್ಟೆ. ಅನ್ಯಾಯ ಏನ್ ಆಗಿದೆ. ಹೋಗಿಲ್ಲ ಹೋಗಿಲ್ಲ. ಅವರು ಕೊಪ್ಪಳದಾಗ ಇದ್ದಾರೆ. ಇನ್ನೊಂದು ಕಡೆ ಇದಾರು ಅಂದರೂ ಹೋಗಿಲ್ಲ ಎಂದರು. ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಡೆತ್ ನೋಟ್ ಬರೆದಿಟ್ಟಿಲ್ಲ. ಪರಶುರಾಮ್ ಯಾರ ಹೆಸರು ಬರೆದಿಟ್ಟಿಲ್ಲ. ಪರಶುರಾಮ್ ಅವರು ಮೃತಪಟ್ಟಿದ್ದು ಸಂಜೆ 5 ಗಂಟೆ ಅವರ ಮನೆಯಲ್ಲಿ. ಈ ವೇಳೆ ಅವರ ಮನೆಯವರೂ ಯಾರೂ ಕಂಪ್ಲೀಟ್ ಕೊಟ್ಟಿಲ್ಲ. ಆದರೂ ನಾನು ಮರುದಿನ ಬೆಳಿಗ್ಗೆ 10 ಗಂಟೆಗೆ ಎಫ್ಐಆರ್ ದಾಖಲು ಮಾಡಲು ಹೇಳಿದ್ದೀನಿ.
ಎಫ್ಐಆರ್ ದಾಖಲಿಸಲು ತಡವಾಗಿದ್ದೇಕೆ ಎನ್ನುವುದನ್ನು ಎಸ್ಪಿ ಅವರಿಗೆ ಕೇಳಿ ಎಂದು ಹೇಳಿದರು. ಶಾಸಕರು ಲಂಚ ಕೇಳಿದ್ದರೆ ಪರಶುರಾಮ್ ಇದ್ದಾಗಲೇ ಆರೋಪ ಮಾಡಬೇಕಿತ್ತಲ್ಲ. ಅವರ ಕುಟುಂಬಸ್ಥರು ಹೇಳಿದ್ದು ಸುಳ್ಳು ಸತ್ಯ ಅನ್ನೋದರ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗುಳಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ನೋಡೋಣ ಸಿಐಡಿ ತನಿಖೆ ನಡೆಸುತ್ತಿದೆ. ಅವರ ಕುಟುಂಬಸ್ಥರ ಆರೋಪ ಸತ್ಯವಾದರೆ ಶಿಕ್ಷೆ ಆಗೆ ಆಗುತ್ತದೆ. ವಿಚಾರಣೆ ಮುಗಿದ ಮೇಲೆ ಬಂಧನ ಆಗಬಹುದು ಎಂದು ಹೇಳಿದರು. ಜಾತಿ ನಿಂದನೆ ಕೇಸ್ ನೀವು ಕೊಟ್ಟರೆ ಆಗುತ್ತಾ..? ಈಗ ಅವರಿಲ್ಲ. ನಾನು ದುನಿಯಾ ಹೇಳಿತೀನಿ. ನಿನಗೆ ಬೈದರೆ ನೀನ್ ಕಂಪ್ಲಿಟ್ ಕೊಡಬೇಕು. ಬೇರೆಯವರ ಕೊಟ್ಟರೆ ಹೆಂಗೆ. ವಿರೋಧ ಪಕ್ಷದವರಿಗೆ ಕರ್ನಾಟಕದಲ್ಲಿ ಆಗುತ್ತಿರುವ ಎಲ್ಲ ಕೇಸ್ ಸಿಬಿಐಗೆ ಕೊಡುವಂತೆ ಪ್ರಸ್ತಾವ ಸಲ್ಲಿಸಲು ಹೇಳಿ. ಸಿಐಡಿ ಬೇಡ ಅಂತ ರೆಸ್ಯೂಲೇಷನ್ ಮಾಡಲಿ ನಾವು ಸಿಬಿಐಗೆ ಕೊಡೋಕೆ ರೆಡಿ ಇದ್ದೀವಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.