ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾರಂಭ ಮಾಡದ ಜವಳಿ ತರಬೇತಿ ಕೇಂದ್ರ

ಕಾಂಗ್ರೆಸ್‌ ಸರ್ಕಾರದಲ್ಲಿ ಕಟ್ಟಡ ನಿರ್ಮಾಣ, ಸೃಷ್ಟಿಯಾಗದ ಉದ್ಯೋಗ
Last Updated 29 ಫೆಬ್ರುವರಿ 2020, 10:39 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಬಂದಳ್ಳಿ ಬಳಿ ಜವಳಿ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣವಾಗಿ ಒಂದು ವರ್ಷ ಕಳೆದಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ.

ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಿಸಲು ಮತ್ತು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಇದು ಸಹಕಾರಿಯಾಗಲಿದೆ.ಕಾಮಗಾರಿ ಪೂರ್ಣಗೊಂಡ ನಂತರ ತರಬೇತಿ ನೀಡಲಾಗುವುದು ಎಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಬಾಬುರಾವ ಚಿಂಚನಸೂರ ಹೇಳಿದ್ದರು. ಆದರೆ, ಕಟ್ಟಡ ನಿರ್ಮಾಣವಾಗಿ ಒಂದು ವರ್ಷ ಕಳೆದಿದ್ದರೂ ತರಬೇತಿ ಆರಂಭಗೊಂಡಿಲ್ಲ. ಅಷ್ಟೇ ಅಲ್ಲ, ಕಟ್ಟಡ ನಿರುಪಯುಕ್ತವಾಗಿದೆ.

ಇಲ್ಲಿ ಯುವಕ, ಯುವಕರಿಗೆ ತರಬೇತಿ ನೀಡಿ ನಿರುದ್ಯೋಗ ಕಡಿಮೆ ಮಾಡಲು ಹಿಂದಿನ ಸರ್ಕಾರ ಯೋಜನೆ ರೂಪಿಸಿತ್ತು. ಅಲ್ಲದೆ ತಾಲ್ಲೂಕಿನ ಕಡೇಚೂರು–ಬಾಡಿಯಾಳ ಬಳಿ ಕೈಗಾರಿಕಾ ವಲಯ ಸ್ಥಾಪನೆಯಿಂದ ಹಲವಾರು ಕಂಪನಿಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು.ಜವಳಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವವರು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆಯಲು ಅನುಕೂಲ ಆಗುತ್ತದೆ ಎಂದು ತಿಳಿಸಲಾಗಿತ್ತು.

ಜಿಲ್ಲೆಯಲ್ಲಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಬೆಂಗಳೂರು, ಪುಣೆ, ಹೈದರಾಬಾದ್‌, ಮುಂಬೈ ಸೇರಿದಂತೆ ಮಹಾನಗರಗಳಿಗೆ ತೆರಳುವುದನ್ನು ಪ್ರತಿನಿತ್ಯವೂ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಕಾಣಬಹುದಾಗಿದೆ. ನಿರುದ್ಯೋಗಿಗಳಿಗೆ ಉದ್ದೇಶಿತ ಜವಳಿ ತರಬೇತಿ ಕೇಂದ್ರ ಆಶಾಕಿರಣವಾಗಿತ್ತು.

‘ವರ್ಷಕ್ಕೆ ಒಂದೂವರೆ ಸಾವಿರ ಜನರಿಗೆ ತರಬೇತಿ ಕೊಡುವ ಯೋಜನೆ ರೂಪಿಸಲಾಗಿತ್ತು. ಆದರೆ, ಕಡೇಚೂರು– ಬಾಡಿಯಾಳ ಬಳಿ ಕೈಗಾರಿಕಾ ವಲಯ ಸ್ಥಾಪನೆಯಾಗದ ಕಾರಣ ಇದು ನನೆಗುದಿಗೆ ಬಿದ್ದಿದೆ’ ಎನ್ನುತ್ತಾರೆ ಜವಳಿ ಇಲಾಖೆಯ ಅಧಿಕಾರಿ ಶ್ರೀನಿವಾಸ ಮೂರ್ತಿ.

‘ಹೈಟೆಕ್‌ ಸ್ಪಿನ್ನಿಂಗ್‌, ವೀವಿಂಗ್‌, ಗಾರ್ಮೆಂಟ್‌ ತಯಾರಿಕೆ, ಕ್ಯಾಡ್‌ ಕ್ಯಾಮ್‌ ಡಿಸೈನ್‌ ಮತ್ತು ಸಾಫ್ಟ್‌ ಸ್ಕಿಲ್‌ ತರಬೇತಿ ನೀಡಲು ಉದ್ದೇಶಿಸಲಾಗಿದೆ.ಬಂದಳ್ಳಿ ಗ್ರಾಮದಿಂದ ಪ್ರವೇಶ ಪಡೆಯಲು ಖಾಸಗಿ ಜಮೀನಿನವರ ತರಕಾರು ಇತ್ತು. ಅಲ್ಲಿ ಈಗ ಏಕಲವ್ಯ ಶಾಲೆ ಆರಂಭವಾಗುತ್ತಿರುವುದರಿಂದ ಅದೇ ದಾರಿಗೆ ಇದನ್ನು ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ’ ಎಂದು ಅವರು ತಿಳಿಸಿದರು.

‘ತರಬೇತಿ ಕೇಂದ್ರದಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಲಾಗಿದೆ. ಈಗಾಗಲೇ ಅಲ್ಲಿ ತರಬೇತಿ ನೀಡುವ ಕೆಲಸ ಆಗಬೇಕಿತ್ತು. ಆದರೆ. ಅದು ಆಗಿಲ್ಲ. ಕಟ್ಟಡ ಗುತ್ತಿಗೆ ಪಡೆದು ಅಲ್ಲಿ ತರಬೇತಿ ನೀಡಲು ಟಾಟಾ ಟ್ರಸ್ಟ್‌ನವರು ಈಚೆಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಬೇಕಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾರ್ಚ್‌ 5ರಂದು ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಈ ಕೇಂದ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಬೇಕಾಗಿರುವ ಸೌಲಭ್ಯ, ಯಂತ್ರ, ಸಿಬ್ಬಂದಿಯನ್ನು ನೀಡಿ ಇದರ ಕಾರ್ಯಾರಂಭಕ್ಕೆ ಒತ್ತು ನೀಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಬಂದಳ್ಳಿ ಬಳಿ ತರಬೇತಿ ಕೇಂದ್ರ ಆರಂಭವಾಗಿದ್ದರೆ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿತ್ತು. ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆಯುವವ ಅಭ್ಯರ್ಥಿಗಳು 4–5 ತಿಂಗಳು ಇದ್ದು ವಾಪಸ್‌ ಬರುತ್ತಿದ್ದಾರೆ. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಿಲ್ಲ ಎನ್ನುತ್ತಾರೆಜಿಲ್ಲಾ ಉದ್ಯೋಗಾಧಿಕಾರಿಭಾರತಿ.

ಜಿಲ್ಲೆಯಲ್ಲಿ ಗಾರ್ಮೆಂಟ್‌ ಕಂಪನಿಗಳನ್ನು ಆಕರ್ಷಿಸುವ ಕೆಲಸ ಆಗಬೇಕು. ಅಲ್ಲದೆ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎನ್ನುವುದುಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿಕೆ.ಸೋಮಶೇಖರ್ ಅವರ ಮಾತು.

ಯಂತ್ರಗಳು ಬಂದಿಲ್ಲ, ಯುವಕ, ಯುವತಿಯರಿಗೆ ಪ್ರತ್ಯೇಕ ಕಟ್ಟಡಗಳಿವೆ. ಟ್ರಾನ್ಸ್‌ಫಾರ್ಮ್‌ ಇದೆ. ಆದರೆ, ಇನ್ನೂ ವಿದ್ಯುತ್‌ ಸಂಪರ್ಕ ಕೊಟ್ಟಿಲ್ಲ. ಎರಡು ಮೂರು ತಿಂಗಳಲ್ಲಿ ಟೆಂಡರ್‌ ಕರೆದು ಕಟ್ಟಡವನ್ನು ಗುತ್ತಿಗೆ ನೀಡುವ ಆಲೋಚನೆ ಇದೆ ಎಂದುಕರ್ನಾಟಕ ವಿದ್ಯುತ್ ಮಗ್ಗ ಅಭಿವೃದ್ದಿ ನಿಗಮ ವ್ಯವಸ್ಥಾಪಕ ನಿರ್ದೇಶಕ
ಜಿ.ಪಿ.ಶ್ರೀನಿವಾಸಮೂರ್ತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT