ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿ.ಎಂ ಬಿಎಸ್‌ವೈ ಬದಲಾವಣೆ ಬೇಡ’

ಜಿಲ್ಲೆಯ ಮಠಾಧೀಶರಿಂದ ಬಿಜೆಪಿ ಹೈಕಮಾಂಡ್‌ಗೆ ಆಗ್ರಹ
Last Updated 23 ಜುಲೈ 2021, 6:32 IST
ಅಕ್ಷರ ಗಾತ್ರ

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಕುರಿತು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದ್ದು, ಬದಲಾವಣೆ ಮಾಡಬಾರದು ಎಂದು ಜಿಲ್ಲೆಯ ಮಠಾಧೀಶರು ಬಿಜೆಪಿ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.

ನಗರದಲ್ಲಿ ಜಿಲ್ಲೆಯ ವೀರಶೈವ ಮಠಾಧಿಪತಿಗಳ ಒಕ್ಕೂಟ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿವಿಧ ಮಠಗಳ ಮಠಾಧೀಶರು ಬಿ.ಎಸ್‌.ಯಡಿಯೂರಪ್ಪ ಪರ ಬ್ಯಾಟಿಂಗ್‌ ಬೀಸಿದರು. ಸಿಎಂ ಬದಲಾಯಿಸಿದರೆ ಬಿಜೆಪಿಗೆ ಸಮಸ್ಯೆ ಆಗುತ್ತದೆ ಎಂದು ಎಚ್ಚರಿಸಿದರು.

ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಾತನಾಡಿ, ‘ಯಡಿಯೂರಪ್ಪ ಹೋರಾಟಗಳಿಂದಲೇ ರಾಜಕೀಯದಲ್ಲಿ ಮೇಲೆ ಬಂದಿದ್ದಾರೆ. ಅಂಥವರನ್ನು ಯಾವುದೇ ಕಾರಣ ನೀಡಿ ಸಿಎಂ ಸ್ಥಾನದಿಂದ ಕೆಳಗಿಸುವುದು ಸರಿಯಲ್ಲ. ಸಮರ್ಥವಾಗಿ ಆಡಳಿತ ನಡೆಸುತ್ತಿರುವ ಅವರನ್ನು ಬದಲಾಯಿಸುವುದರಿಂದ ರಾಜ್ಯಕ್ಕೆ ನಷ್ಟ ಉಂಟಾಗಲಿದೆ’ ಎಂದರು.

ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿಗೆ ಗಟ್ಟಿ ಸ್ಥಾನ ನೀಡಿ, ಪಕ್ಷದಲ್ಲಿ ಎಲ್ಲರಿಗೂ ಆದ್ಯತೆ ನೀಡಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಕೈ ಬಿಡಬೇಕು’ ಎಂದು ಒತ್ತಾಯಿಸಿದರು.

ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ‘ರಾಜ್ಯದಲ್ಲಿ ನಾಯಕರಿಗೆ ಕೊರತೆ ಇಲ್ಲ. ಆದರೆ, ಹಿರಿಯ ರಾಜಕಾರಣಿ ಯಡಿಯೂರಪ್ಪ ಅವರಲ್ಲಿ ಯಾವುದೇ ಕೊರತೆ ಇಲ್ಲ. ಸೂಕ್ತ ಕಾರಣ ನೀಡದೇ ಬದಲಾವಣೆ ಮಾಡುವುದು ಸರಿಯಲ್ಲ’ ಎಂದರು.

ಮಠಾಧೀಶರು ಒಂದು ಪಕ್ಷದ ಪರವಾಗಿ ಇದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜಕೀಯ ಮಾಡುವವರಿಗೆಮಠಾಧೀಶರು ಹಿಂದಿನಿಂದಲೂ ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆ. ಹಾಗೆಯೇ ನಾವು ಮಾರ್ಗದರ್ಶನ ನೀಡುತ್ತೇವೆ’ ಎಂದರು.

ನೇರಡಗುಂಬದ ಪಂಚಮಸಿದ್ದಲಿಂಗ ಸ್ವಾಮೀಜಿ, ಶಹಾಪುರದ ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದಯ್ಯ ಸ್ವಾಮೀಜಿ, ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ, ಕಡೇಚೂರಿನ ಗುರುಮೂರ್ತಿ ಶಿವಾಚಾರ್ಯ, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT