ಯಾದಗಿರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇರುವ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ರೈತರಿಗೆ ಹಾಗೂ ಭೂ ರಹಿತ ಅಕುಶಲ ಕೃಷಿ ಕೂಲಿಕಾರರಿಗೆ ನೀಡುವ ಮೂಲಕ ಜನರ ಜೀವನ ನಿರ್ವಹಣೆ ಗುಣಮಟ್ಟ ಸುಧಾರಿಸುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಪ್ರಮುಖ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಹೇಳಿದರು.
ಜಿಲ್ಲೆಯ ಶಹಾಪುರ ತಾಲ್ಲೂಕಿನ ಹತ್ತಿಗೂಡುರು, ಗೋಗಿ ಪೇಠ, ಗೋಗಿ ಕೆ ಹಾಗೂ ಚಾಮನಾಳ ಗ್ರಾಮ ಪಂಚಾಯಿತಿಗಳಿಂದ ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ಪ್ರಗತಿಯಲ್ಲಿದ್ದ ಕಾಲುವೆ ಹೂಳೆತ್ತುವದು ಹಾಗೂ ಕ್ಷೇತ್ರ ಬದು ನಿರ್ಮಾಣ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಮಾತನಾಡಿದರು.
‘ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ವರ್ಷದಲ್ಲಿ ಒಂದು ಕುಟುಂಬಕ್ಕೆ 100ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದೆ. ಕೂಲಿ ಕೆಲಸಕ್ಕಾಗಿ ಅರ್ಜಿ ನಮೂನೆ-6ರಡಿ ಕೂಲಿ ಬೇಡಿಕೆ ಸಲ್ಲಿಸಿದರೆ, ಯೋಜನೆಯ ನಿಯಮನುಸಾರ ಕಾಲಮಿತಿಯಲ್ಲಿ ಕೂಲಿ ಕೆಲಸ ನೀಡಿ’ ಎಂದು ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.
ನರೇಗಾ ಯೋಜನೆಯಡಿ ಆರಂಭಿಸಿದ ಕೂಲಿ ಕೆಲಸ ಆಧಾರಿತ ಸಮುದಾಯ ಕಾಮಗಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುವುದರಿಂದ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕೆಲಸ ಮಾಡುವ ತಾಯಂದಿರ ಮಕ್ಕಳ ಆರೈಕೆ ಸೇರಿ ಇತರೆ ಅಗತ್ಯ ಮೂಲ ಸೌಲಭ್ಯಗಳನ್ನು ಕೂಲಿಕಾರರಿಗೆ ಕಲ್ಪಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಗೋಗಿ ಪೇಠ ಗ್ರಾಮದ ರೈತನ ಜಮೀನಿನಲ್ಲಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕ್ಷೇತ್ರ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿ, ಫಲಾನುಭವಿ ರೈತನೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಬದು ನಿರ್ಮಾಣದಿಂದ ಮಳೆ ಬಂದಾಗ ಮಣ್ಣು ಕೊಚ್ಚಿಹೊಗಿ ಭೂ ಸವಕಳಿಯಾಗುವುದನ್ನು ತಡೆಯುತ್ತದೆ. ಮಳೆ ನೀರು ಬದುಗಳಲ್ಲಿ ಸಂಗ್ರಹದಿಂದ ಜಮೀನಿನಲ್ಲಿ ತೇವಾಂಶ ಕಾಯ್ದುಕೊಂಡು ಬೆಳೆಗೆ ನೀರು ಸಿಗುತ್ತದೆ ಎಂದು ಕ್ಷೇತ್ರ ಬದುವಿನ ಮಹತ್ವ ತಿಳಿಸಿದರು.
ಚಾಮನಾಳ ಗ್ರಾಮದಲ್ಲಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆ ಕಾಮಗಾರಿಗಳಡಿ ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳಿಂದ ರೇಷ್ಮೆ ಹುಳ ಸಾಕಾಣಿಕೆ, ಪೇರಲ ಬೆಳೆ ಬೆಳೆದ ರೈತರ ಜಮೀನಿಗೆ ಭೇಟಿ ನೀಡಿ, ಬೆಳೆ ವೀಕ್ಷಿಸಿದ ಅವರು ರೇಷ್ಮೆ ಹಾಗೂ ಪೇರಲ ಬೆಳೆಗಳನ್ನು ಬೆಳೆಯುವ ಕ್ರಮ, ಸ್ಥಳೀಯವಾಗಿ ಇರುವ ಬೇಡಿಕೆ, ಬೆಳೆಗೆ ತಗಲುವ ಖರ್ಚು-ವೆಚ್ಚ, ಮಾರುಕಟ್ಟೆ ಹಾಗೂ ಅದರಿಂದ ಬರುವ ಆದಾಯದ ಕುರಿತು ರೈತರಿಂದ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ನೀವು ಇತರ ರೈತರಿಗೆ ಮಾದರಿಯಾಗಿ ನಿಮ್ಮ ಅನುಭವ ತಿಳಿಸಿ, ಅವರನ್ನು ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಪ್ರೇರೆಪಣೆ ನೀಡಿ ಎಂದು ಹೇಳಿದರು.
ಈ ವೇಳೆ ಶಹಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ, ಸುರಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ಸಹಾಯಕ ನಿರ್ದೇಶಕರಾದ ಭೀಮರಾಯ ಬಿರಾದಾರ, ರವಿಚಂದ್ರ ರಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕನಾಗಮ್ಮ, ರೆಡ್ಡಿರೇವು ನಾಯ್ಕ್, ಯಂಕಣ್ಣ, ಮಲ್ಲಿಕಾರ್ಜುನ ವಗ್ಗರ, ಟಿಸಿ ಮುಜಾಮಿಲ್, ಹುಸೇನ್ ಬಾಷಾ, ಟಿಎಇ ಪ್ರವೀಣ ಕಟ್ಟಿಮನಿ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ಶಿವುಕುಮಾರ, ರಾಜುರೆಡ್ಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಸದಸ್ಯರು, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.