ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳ ಕಾಲಹರಣ ಸಹಿಸಲ್ಲ: ಸಚಿವ ಶಂಕರ್ ಎಚ್ಚರಿಕೆ

Last Updated 14 ಜೂನ್ 2021, 5:29 IST
ಅಕ್ಷರ ಗಾತ್ರ

ಯಾದಗಿರಿ: ‘ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಗೆ ಬಂದು ಒಂದು ತಿಂಗಳು ಕಳೆಯಿತು. ನಮ್ಮ ಮೊದಲ ಆದ್ಯತೆ ಕೋವಿಡ್ ನಿಯಂತ್ರಣ ಮಾಡುವುದಾಗಿತ್ತು. ಈಗ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಮುಂದೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕಾಲಹರಣ ಮಾಡಿದರೆ ಕ್ರಮ ಖಂಡಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಶಂಕರ್‌ ಎಚ್ಚರಿಸಿದರು.

‘ಕೋವಿಡ್‌ ಹತೋಟಿಗೆ ಬರುತ್ತಿದ್ದು, ರಾಜ್ಯದಲ್ಲಿ ಅತಿ ಕಡಿಮೆ ಪಾಸಿಟಿವಿಟಿ ದರ ಇದೆ. ಹೀಗಾಗಿ ಸಾರ್ವಜನಿಕರು ಮೈ ಮರೆಯದೇ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು’ ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೋವಿಡ್ ಮುಕ್ತವಾಗಲುಜಿಲ್ಲೆಯ ಜನ ಸಹಕರಿಸಬೇಕು. ಕೋವಿಡ್‌ ನಿಯಂತ್ರಣಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಸಹಕಾರ ನೀಡಿವೆ ಎಂದರು.

ಈಗ ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ, ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡುತ್ತೇನೆ. ಅಲ್ಲಿಯ ಪರಸ್ಥಿತಿಯನ್ನು ಅವಲೋಕಿಸಿ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರಿಗೆ ಸ್ಪಂದಿಸದಿರುವ ಕುರಿತು ಪ್ರತಿಕ್ರಿಯಿಸಿ, ಎಲ್ಲಾ ಅಧಿಕಾರಿಗಳು ಅಭಿವೃದ್ಧಿ ಪರ ಕೆಲಸ ಮಾಡಬೇಕು. ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಬಾರದು. ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

‘ಈಗಾಗಲೇ ಜಿಲ್ಲೆಯಲ್ಲಿ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ವೈದ್ಯರ ಕೊರತೆ ನಿಗಲಿದೆ’ ಎಂದರು.

‘ತೋಟಗಾರಿಕೆ ಇಲಾಖೆಯಲ್ಲಿ ಹಿಂದೆ ಶೇ 50ರಷ್ಟು ರಿಯಾಯ್ತಿ ನೀಡಲಾಗುತ್ತಿತ್ತು. ಈಗ ಎಲ್ಲ ವರ್ಗದ ಜನರಿಗೆ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಎರಡು ಗಂಟೆ ತಡವಾಗಿ ಬಂದ ಸಚಿವ:ಇದಕ್ಕೂ ಮೊದಲು ಜಿಲ್ಲಾ ಕಾರ್ಯನಿರತ ಪತ್ರಿಕಾ ಭವನದಲ್ಲಿ ಅಯೋಜಿಸಿದ್ದ ಸಸಿ ನಡುವ ಕಾರ್ಯಕ್ರಮಕ್ಕೆ ಆರ್‌.ಶಂಕರ್‌ ಎರಡು ತಾಸು ತಡವಾಗಿ ಬಂದರು. ಸಚಿವರ ಬರುವಿಕೆಗಾಗಿ ಪತ್ರಕರ್ತರು, ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದರು.

ಸರ್ಕ್ಯೂಟ್‌ ಹೌಸ್‌ನಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟ ಸರಿಪಡಿಸಿ ಬರುವುದರೊಳಗೆ ಬೆಳಿಗ್ಗೆ 11.30 ಆಗಿತ್ತು. 9.30ಕ್ಕೆ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರಸಭೆ ಅಧ್ಯಕ್ಷ ವಿಲಾಸ ಬಿ. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೀಂದ್ರ ನಾಥ ನಾದ ಇದ್ದರು.

ಶಿಲ್ಪಾ ಶೆಟ್ಟಿ ಎಂದ ಸಚಿವ!
ಸುದ್ದಿಗೋಷ್ಠಿ ನಡೆಯುವ ವೇಳೆ ವೇದಿಕೆ ಮೇಲೆ ಕುಳಿತವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್‌ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಎನ್ನುವ ಬದಲಿಗೆ ಶಿಲ್ಪಾ ಶೆಟ್ಟಿ ಎಂದು ಕರೆದರು. ನಂತರ ಸವಾರಿಸಿಕೊಂಡು ನಗು ನಗುತ್ತಾ ಶಿಲ್ಪಾ ಶರ್ಮಾ ಎಂದರು. ಇದರಿಂದ ಕೆಲವೊತ್ತು ಸುದ್ದಿಗೋಷ್ಠಿಯಲ್ಲಿ ನಗೆ ಅಲೆ ತೇಲಿತು.

ಸುದ್ದಿಗೋಷ್ಠಿ ಉದ್ದಕ್ಕೂ ಸಚಿವರು ಮಾಸ್ಕ್‌ ಧರಿಸದೇ ಮಾತನಾಡಿದರು. ಕೋವಿಡ್‌ ನಿಯಮ ಪಾಲಿಸಿ ಎಂದು ಹೇಳುವ ಸಚಿವರೇ ಈ ರೀತಿ ಮಾಡುತ್ತಾರೆ ಎಂದು ಅಧಿಕಾರಿಗಳು ಗೊಣಗಿಕೊಂಡರು.

ಮುಂಡರಗಿ ನಾಲಾ ಕಾಮಗಾರಿಗೆ ಸಚಿವರ ಮೆಚ್ಚುಗೆ
ಜಿಲ್ಲಾಡಳಿತ ಹಾಗೂ ಭಾರತ್ ಜೈನ್ ಸಂಘ ಸಹಭಾಗಿತ್ವದಲ್ಲಿ ನಡೆಯುತ್ತಿರುವ ತಾಲ್ಲೂಕಿನ ಮುಂಡರಗಿ ನಾಲಾ ಕಾಮಗಾರಿ ಸ್ಥಳಕ್ಕೆ ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ನಾಲಾ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಕಾಮಗಾರಿಯ ವಿವರಗಳನ್ನು ಪಡೆದರು. ಸುಮಾರು 4500ಕ್ಕೂ ಅಧಿಕ ರೈತರಿಗೆ ಈ ನಾಲೆಯಿಂದ ಪ್ರಯೋಜನವಾಗಿದೆ. ಇದರಿಂದ ಇಲ್ಲಿನ ಕೆರೆಯೂ ಈ ಬಾರಿ ತುಂಬಿ, ರೈತರಿಗೆ ಉತ್ತಮ ಕೃಷಿ ಕಾರ್ಯ ಮಾಡುವಂತಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಈ ಮುಂಡರಗಿ ನಾಲೆಯ ಬದಿಗಳಲ್ಲಿ ಮರಗಳನ್ನು ನೆಡುವಂತೆ ಸಚಿವರು ಸೂಚಿಸಿದರು.

ಈ ಯೋಜನೆಯಲ್ಲಿ ಕಿರುಸೇತುವೆ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ಹೂಳೆತ್ತುವಿಕೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಈ ವೇಳೆ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರಸಭೆ ಅಧ್ಯಕ್ಷ ವಿಲಾಸ ಬಿ. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಸೇರಿದಂತೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT