ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವತ್ಥ ನಾರಾಯಣ ಹೇಳಿಕೆಗೆ ಆಕ್ರೋಶ

ಯುವ ಕಾಂಗ್ರೆಸ್‌ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿಭಟನೆ * ರಾಜೀನಾಮೆಗೆ ಆಗ್ರಹ
Last Updated 16 ಫೆಬ್ರುವರಿ 2023, 10:58 IST
ಅಕ್ಷರ ಗಾತ್ರ

ಮೈಸೂರು: ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು’ ಎಂಬ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಎಚ್.ಸಿ.ದಾಸಪ್ಪ ವೃತ್ತದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಶ್ವತ್ಥ ನಾರಾಯಣ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಲಪಾಡ್ ಮಾತನಾಡಿ, ‘ಟಿ‍ಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಗಾಂಧೀಜಿ ಕೊಡುಗೆ, ಸಿದ್ದರಾಮಯ್ಯ ಅವರ ಜನಪರ ಆಡಳಿತವನ್ನು ಯಾರಿಗೂ ಮರೆಯಲು ಆಗುವುದಿಲ್ಲ. ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ವಿಷಯಗಳೇ ಇಲ್ಲ. ಹೀಗಾಗಿ ಟಿಪ್ಪು ಅವರನ್ನು ಎಳೆದು ತಂದಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯಿತು. 2013–2018ರ ಅವಧಿಯಲ್ಲಿ 165 ಭರವಸೆಗಳಲ್ಲಿ 150 ಅನ್ನು ಈಡೇರಿಸಿತು. ಮೊದಲ ಸಂಪುಟ ಸಭೆಯಲ್ಲಿಯೇ 5 ಕೆ.ಜಿ ಅಕ್ಕಿ ನೀಡುವ ತೀರ್ಮಾನ ತೆಗೆದುಕೊಂಡಿತು. ಅಂಥ ಸಿದ್ದರಾಮಯ್ಯ ಅವರನ್ನು ಹೊಡೆಯುತ್ತೀವೆಂದು ಹೇಳುತ್ತಿರುವವರಿಗೆ ಬುದ್ದಿ ಇದೆಯೇ? ನಾಲಿಗೆ– ಮಿದುಳಿಗೆ ಸಂಬಂಧವಿದೆಯೇ? ಮನಸ್ಸಿಗೆ ಬಂದದೆಲ್ಲ ಹೇಳಬಹುದೇ’ ಎಂದು ಹರಿಹಾಯ್ದರು.

‘ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ತಡೆಯಲು ಮನಸ್ಸಿನಲ್ಲಿರುವ ಆಸೆಯನ್ನು ಹೇಳಿರುವ ಅಶ್ವತ್ಥ ನಾರಾಯಣ ರಾಜೀನಾಮೆ ನೀಡಬೇಕು. ಕ್ಷಮೆ ಕೇಳಬೇಕು. ಈಶ್ವರಪ್ಪ ಅವರೊಂದಿಗೆ ಸೇರಿ ಅವರಂತೆ ಆಗಿದ್ದಾರೆ. ಇಂದು ಸಂಜೆ ಐದು ಗಂಟೆಗೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅಶ್ವತ್ಥ್ ನಾರಾಯಣ್ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ಯಾವ ಭದ್ರತೆಯೂ ಬೇಕಿಲ್ಲ. ಅವರನ್ನು ನಾವೇ ಕಾಯುತ್ತೇವೆ. ಮೊದಲು ಕಾರ್ಯಕರ್ತರನ್ನು ಹೊಡೆದುಹಾಕಿ ಆಮೇಲೆ ಮುಂದೆ ಹೋಗಿ. ಜನರು ಎಲ್ಲವನ್ನು ನೋಡುತ್ತಿದ್ದಾರೆ, ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಮುಖಂಡರಾದ ನವೀನ್ ಕುಮಾರ್, ಅಬ್ರಾರ್, ರವಿಕುಮಾರ್, ಎಂ.ರಾಜೇಶ್, ದೀಪಕ್ ಶಿವಣ್ಣ, ಪೈಲ್ವಾನ್ ಸುನಿಲ್, ರಾಕೇಶ್ ಗೌಡ, ಮಲ್ಲೇಶ, ಭರತ್, ಆನಂದ್, ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT