ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಹೋಳಿ ಆಚರಣೆ

ಕೊರೊನಾ ಭೀತಿ ಮಧ್ಯೆಯೂ ಯಾದಗಿರಿ ನಗರದ ಹಲವೆಡೆ ಬಣ್ಣದಾಟದ ಸಂಭ್ರಮ
Last Updated 11 ಮಾರ್ಚ್ 2020, 13:59 IST
ಅಕ್ಷರ ಗಾತ್ರ

ಯಾದಗಿರಿ: ಭಾವೈಕ್ಯದ ಸಂಕೇತವಾದ ಹೋಳಿ ಹಬ್ಬವನ್ನು ಮಾರ್ಚ್ 9 ಮತ್ತು 10 ರಂದು ನಗರದಲ್ಲಿ ಶಾಂತಿಯುತವಾಗಿ ಸಂಭ್ರಮದಿಂದ ಆಚರಿಸಲಾಯಿತು.

ಅಧಿಕಾರಿಗಳು, ಯುವಕರು, ಮಕ್ಕಳು, ಮಹಿಳೆಯರು ಬಣ್ಣದಾಟದಲ್ಲಿ ತೊಡಗಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಣ್ಣದಲ್ಲಿ ಮಿಂದೆದ್ದು, ನಂತರ ಭೀಮಾ ನದಿಯಲ್ಲಿ ಸ್ನಾನ ಮಾಡಿದರು.

ಅಧಿಕಾರಿಗಳು ಭಾಗಿ: ಹೋಳಿ ಹಬ್ಬದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಉಪ ವಿಭಾಗಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರು.

ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಪಿಚಕಾರಿ ಹಿಡಿದು ಬಣ್ಣ ಎರಚುವ ದೃಶ್ಯ ಸಾಮಾನ್ಯವಾಗಿತ್ತು. ಹೆಂಗಳೆಯರು ಮನೆಗಳ ಬಳಿಯೇ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಯುವಕರು ಬೈಕ್‌ಗಳಲ್ಲಿ ತೆರಳಿ ತಮ್ಮ ಸ್ನೇಹಿತರಿಗೆ ಬಣ್ಣ ಹಚ್ಚಿ ಸಂತೋಷ ಪಡುತ್ತಿದ್ದರು.

ಸೋಮವಾರ ರಾತ್ರಿ ಎಲ್ಲ ವಾರ್ಡ್‌ಗಳಲ್ಲಿ ಕಾಮದಹನ ಕಾರ್ಯಕ್ರಮ ಜರುಗಿತು. ಮಂಗಳವಾರ ಸಂಪ್ರದಾಯದಂತೆ ಬೆಳಿಗ್ಗೆ ಬಣ್ಣದೋಕುಳಿ ಆಟ ಪ್ರಾರಂಭವಾಯಿತು. ಕೋಲಿವಾಡದಲ್ಲಿ 11 ಗಂಟೆಗೆ ಎರಡು ಬಣ್ಣದ ಬಂಡಿಗಳಿಗೆ ಡಿವೈಎಸ್ಪಿ ಯು.ಶರಣಪ್ಪ, ಸಿಪಿಐ ಶರಣಗೌಡ ನ್ಯಾಮಣ್ಣನವರ್ ಮತ್ತು ನಗರಸಭೆ ಸದಸ್ಯರಾದ ಪ್ರಭಾವತಿ ಮಾರುತಿ ಕಲಾಲ, ಚನ್ನಕೇಶವಗೌಡ ಬಾಣತಿಹಾಳ ಹಾಗೂ ಅಂಬಯ್ಯ ಶಾಬಾದಿ ಚಾಲನೆ ನೀಡಿದರು.

ಬಣ್ಣದ ಆಟದಲ್ಲಿ ಎಲ್ಲ ಸಮುದಾಯದವರು ಸಂತಸದಿಂದ ಪಾಲ್ಗೊಂಡು ಪರಸ್ಪರ ಬಣ್ಣ ಹಚ್ಚಿ ಸಡಗರದಿಂದ ಹಬ್ಬ ಆಚರಿಸಿ ಭಾವೈಕ್ಯ ಮೆರೆದರು.

ಶಾಂತಿ ಸಮಿತಿಯ ಸದಸ್ಯರಾದ ಅಯ್ಯಣ್ಣ ಹುಂಡೇಕಾರ, ಸಿದ್ದಪ್ಪ ಹೊಟ್ಟಿ, ನಾಗೇಂದ್ರ ಜಾಜಿ, ನೂರೊಂದಪ್ಪ ಲೇವಡಿ, ಪ್ರಮುಖರಾದ ಶಂಕರ ಗೋಸಿ, ಮಲ್ಲಯ್ಯ ಪೂಜಾರಿ, ಮಹಾದೇವಪ್ಪ ಗಣಪುರ, ಸಿದ್ದಯ್ಯ ಪೂಜಾರಿ, ಮಹಾದೇವಪ್ಪ, ಯಂಕಪ್ಪ ಗೋಸಿ, ವಿಜಯ ಪಾಟೀಲ ಸೇರಿದಂತೆ ಯುವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಣ್ಣದ ಬಂಡಿಗಳೊಂದಿಗೆ ನಗರ ಪ್ರದಕ್ಷಣೆ ಮಾಡಿ ಮೆರವಣಿಗೆಯಲ್ಲಿ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಹಾಗೂ ಗೃಹ ರಕ್ಷಕದಳದ ನಿಯೋಜನೆ ಮಾಡಲಾಗಿತ್ತು.

ಬಣ್ಣ ಖರೀದಿಗೆ ಹಿಂಜರಿಕೆ:ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೋಳಿ ಹಬ್ಬ ಆಚರಿಸುವರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಕೊರೊನಾ ಭೀತಿಯಿಂದ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಣ್ಣಗಳ ಪ್ಯಾಕೇಟ್ ಖರೀದಿಯೂ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನುತ್ತಾರೆ ಬಣ್ಣದ ಅಂಗಡಿಯ ಮಾಲೀಕರು.

ಗುರು ಭಕ್ತ ಬ್ರ್ಯಾಂಡ್ ಬಣ್ಣ, ಎಲ್ಲ ಬಣ್ಣಗಳಲ್ಲಿ ಪ್ರಸಿದ್ಧವಾಗಿದ್ದು, ಇದರ ಬೆಲೆ ₹ 20 ಇತ್ತು. ಸಾಧಾರಣ ಬಣ್ಣದ ಪ್ಯಾಕೆಟ್‌ಗಳು ₹10ಕ್ಕೆ ಲಭ್ಯ ಇತ್ತು. ಬಣ್ಣ ತುಂಬಿ ಹೊಡೆಯುವ ಪಿಚಕಾರಿಗಳು ₹ 10 ರಿಂದ ₹ 30 ರವರೆಗೆ ಇತ್ತು. ಆದರೆ, ಹಿಂದಿನ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಮಾರಾಟದಲ್ಲಿ ಕುಸಿತಗೊಂಡಿದೆ. ಕೇವಲ 20 ಡಬ್ಬಿಗಳು ಮಾರಿದ್ದೇವೆ ಎನ್ನುತ್ತಾರೆ ಗಾಂಧಿ ಚೌಕ್‌ನಲ್ಲಿ ಬಣ್ಣದ ಅಂಗಡಿ ಇಟ್ಟಿರುವ ಬಸವರಾಜ್ ಮೊಟ್ನಳ್ಳಿ.

ಈ ಬಾರಿ ಕೊರೊನಾ ಸೋಂಕಿನಿಂದಾಗಿ ಮಕ್ಕಳು ಬಣ್ಣ ಆಡಲು ಹಿಂಜರಿಯುತ್ತಿದ್ದು, ವ್ಯಾಪಾರದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಅನೇಕ ಟಿ.ವಿಗಳಲ್ಲಿ ಈ ಬಾರಿ ಹೋಳಿ ಆಡಬೇಡಿ ಎಂದು ಹೇಳುತ್ತಿರುವುದರಿಂದ ಬಣ್ಣ ಆಡಲು ಜನರು ನಿರಾಸಕ್ತಿ ತೋರುತ್ತಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ವ್ಯಾಪಾರ ಕುಂಠಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT