ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬಿಪಿಎಲ್‌ ಕಾರ್ಡ್‌ ಹೊಂದಿದ ಸರ್ಕಾರಿ ನೌಕರರಿಗೆ ದಂಡ

Published 15 ಸೆಪ್ಟೆಂಬರ್ 2023, 5:21 IST
Last Updated 15 ಸೆಪ್ಟೆಂಬರ್ 2023, 5:21 IST
ಅಕ್ಷರ ಗಾತ್ರ

ಯಾದಗಿರಿ: ಬಡತನ ರೇಖೆಗಿಂತ ಕೆಳಗೆ ಇರುವ (ಬಿಪಿಎಲ್‌) ಕಾರ್ಡ್‌ ಹೊಂದಿದ ಸರ್ಕಾರಿ ನೌಕರರು, ಉದ್ಯಮಿಗಳು, ಖಾಸಗಿ ನೌಕರರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದಂಡ ವಿಧಿಸಿದೆ.

ಜಿಲ್ಲೆಯಲ್ಲಿ ಅಂದಾಜು 528 ಸರ್ಕಾರಿ ನೌಕರರಿದ್ದಾರೆ. ವಾರ್ಷಿಕ ₹1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಅಂತ್ಯೋದಯ ಅನ್ನಯೋಜನೆ (ಎಎವೈ) 1,037, ಬಿಪಿಎಲ್‌ 10,651 ಸೇರಿದಂತೆ 11,688 ಕಾರ್ಡ್‌ದಾರರಿದ್ದಾರೆ.

ಇದರಲ್ಲಿ 405 ಎಎವೈ, ಬಿಪಿಎಲ್‌ 5,375 ಸೇರಿ 5,780 ಕಾರ್ಡ್‌ದಾರರಿಗೆ ಬಿಪಿಎಲ್‌ ಕಾರ್ಡ್‌ ಅರ್ಹತೆ ಇಲ್ಲದಿದ್ದರೂ ಕಾರ್ಡ್‌ ಹೊಂದಿದ್ದರಿಂದ ದಂಡ ವಿಧಿಸಲಾಗಿದೆ. ಜೊತೆಗೆ ಎಎವೈ, ಬಿಪಿಎಲ್‌ಗಳ ಬದಲಾಗಿ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ.

ಜಿಲ್ಲೆಯಲ್ಲಿ ಅಂತ್ಯೋದಯ ಅನ್ನಯೋಜನೆ (ಎಎವೈ) 29,364 ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗಳಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ ಹಾಗೂ ಬಿಪಿಎಲ್ 8,84,797 ಪಡಿತರ ಸದಸ್ಯರಿದ್ದು, ಪ್ರತಿ ಪಡಿತರ ಸದಸ್ಯರಿಗೆ 3 ಕೆಜಿ ಎನ್‌ಎಫ್‌ಎಸ್‌ಎ ಅಕ್ಕಿ ಮತ್ತು 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುತ್ತಿದೆ.

ಜಿಲ್ಲೆಯಲ್ಲಿ 29,364 ಎಎವೈ, 1,14,690 ಫಲಾನುಭವಿಗಳು, 2,40,434 ಬಿಪಿಎಲ್‌ ಕಾರ್ಡ್‌ಗಳಿವೆ. 8,84,797 ಫಲಾನುಭವಿಗಳಿದ್ದಾರೆ. 17,555 ಎಪಿಎಲ್‌ ಕಾರ್ಡ್‌ಗಳಿವೆ. 58,271 ಫಲಾನುಭವಿಗಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 2,87,353 ಕಾರ್ಡ್‌ಗಳಿವೆ.

ಜಿಲ್ಲೆಯಲ್ಲಿ 401 ನ್ಯಾಯಬೆಲೆ ಅಂಗಡಿಗಳಿವೆ. ಸಹಕಾರ ಸಂಘದ 108, ಎಸ್ಸಿ 63, ಎಸ್‌ಟಿ 23, ಮಹಿಳಾ ಕೇಂದ್ರಿತಾ 43, ಇನ್ನಿತರ 162 ಅಂಗಡಿಗಳಿವೆ. ಯಾದಗಿರಿ ನಗರದಲ್ಲಿ 28, ಶಹಾಪುರ ನಗರದಲ್ಲಿ 17, ಸುರಪುರ ನಗರದಲ್ಲಿ 15 ಸೇರಿದಂತೆ 401 ನ್ಯಾಯ ಬೆಲೆ ಅಂಗಡಿಗಳಿವೆ.

‘ಜಿಲ್ಲೆಯಲ್ಲಿ ಹಲವಾರು ಕಡೆ ಹೆಸರುಗಳು ಪಡಿತರ ಚೀಟಿಗಳಲ್ಲಿ ಹೆಸರು ಡಿಲಿಟ್‌ ಆಗಿಲ್ಲ. ಇದರಿಂದ ಅವರ ಹೆಸರಿನಲ್ಲಿ ಕುಟುಂಬಸ್ಥರು ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಇದು ಸರ್ಕಾರಕ್ಕೆ ಮಾಡುತ್ತಿರುವ ಮೋಸವಾಗಿದೆ. ಈಗ ಅಧಿಕಾರಿಗಳು ಎಚ್ಚೆತ್ತು ಪಡಿತರ ಚೀಟಿಯಲ್ಲಿನ ಹೆಸರು ಅಳಿಸಲು ಮುಂದಾಗಿದ್ದಾರೆ. ಇದನ್ನು ಯಾವಾಗಲೋ ಮಾಡಬೇಕಿತ್ತು’ ಎಂದು ನ್ಯಾಯ ಬೆಲೆ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ಸರ್ಕಾರಿ ಉದ್ಯೋಗಿಗಳು ಬಿಪಿಎಲ್‌ ಕಾರ್ಡ್‌ ಇಲಾಖೆಗೆ ಒಪ್ಪಿಸಿ ಎಪಿಎಲ್‌ ಕಾರ್ಡ್‌ ಪರಿವರ್ತನೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡವಿಧಿಸಲಾಗುವುದು. ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ ಪೊಲೀಸ್‌ ತಹಶೀಲ್ದಾರ್‌ಗೆ ತಲಾ ₹8 ಸಾವಿರ ₹6300 ದಂಡ ವಿಧಿಸಲಾಗಿದೆ
- ಭೀಮರಾಯ ಎಂ, ಉಪ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
8447 ಪಡಿತರ ಸದಸ್ಯರ ಹೆಸರು ಡಿಲಿಟ್‌
ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಪಡಿತರ ಚೀಟಿಗಳಲ್ಲಿ ಸತ್ತವರ ಹೆಸರು ಚಾಲ್ತಿಯಲ್ಲಿತ್ತು. ಈಚೆಗೆ ಗೃಹಲಕ್ಷ್ಮಿಗಾಗಿ ಕುಟುಂಬದ ಯಜಮಾನಿಗೆ ₹2000 ಸಾವಿರ ನೀಡುವ ಯೋಜನೆಗೆ ಚಾಲನೆ ನಂತರ ಸದಸ್ಯರ ಸಂಖ್ಯೆ ಪತ್ತೆಯಾಗಿದೆ. ಇದರಿಂದ 8447 ಹೆಸರುಗಳನ್ನು ಅಳಿಸಲಾಗಿದೆ. ಪರಿಶೀಲನೆಯ ನಂತರ ₹7812 ಹೆಸರುಗಳನ್ನು ತೆರವುಗೊಳಿಸಲಾಗಿದೆ. 635 ಪರಿಶೀಲನೆಗೆ ಬಾಕಿ ಇವೆ.
ಬಿಪಿಎಲ್‌ ಕಾರ್ಡ್‌ಗೆ ಯಾರು ಅರ್ಹರಲ್ಲ?
ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಗಳಿಗಿಂತ ಹೆಚ್ಚು ಇರುವ ಕುಟುಂಬಗಳು ಬಿ‍ಪಿಎಲ್‌ ಕಾರ್ಡ್‌ ಹೊಂದಲು ಅರ್ಹರಲ್ಲ. ಕಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಮಂಡಳಿಗಳು/ ನಿಗಮಗಳು/ ಸ್ವಾಯತ್ತ ಸಂಸ್ಥೆಗಳೂ ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ವ್ಯಾಪ್ತಿಗೆ ಬರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್ ಮ್ಯಾಕ್ಸಿಕ್ಯಾಬ್ ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬ ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲಾ ಕುಟುಂಬಗಳು ಅರ್ಹರಲ್ಲ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT