ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ಕಳಪೆ ಆಹಾರ: ಸಂಘದ ವಿರುದ್ಧ ಎಫ್ಐಆರ್

ದೋರನಹಳ್ಳಿ ಬಿಸಿಯೂಟ ಸೇವನೆ ಘಟನೆ
Published 16 ಜೂನ್ 2024, 15:57 IST
Last Updated 16 ಜೂನ್ 2024, 15:57 IST
ಅಕ್ಷರ ಗಾತ್ರ

ಶಹಾಪುರ: ಕಳಪೆಮಟ್ಟದ ಆಹಾರವನ್ನು ಸರ್ಕಾರಿ ಶಾಲೆಗಳಿಗೆ ವಿತರಿಸಿ ಅಕ್ರಮ ಎಸಗಿದ್ದಾರೆ ಎಂದು ನಗರದ ನಿರ್ಮಲಾದೇವಿ ಮಹಿಳಾ ಮಂಡಳ ಸಂಘದ ಅಧ್ಯಕ್ಷೆ ರುದ್ರಮ್ಮ ವಿಶ್ವನಾಥರಡ್ಡಿ ದರ್ಶನಾಪುರ ಹಾಗೂ ಸಂಘದ ಸದಸ್ಯರ ವಿರುದ್ಧ ಶನಿವಾರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಎಸ್.ಸೂರ್ಯವಂಶಿ ದೂರು ದಾಖಲಿಸಿದ್ದಾರೆ.

‘ತಾಲ್ಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ವಿವಿಧ ಪ್ರಾಥಮಿಕ ಶಾಲೆ ಹಾಗೂ ಒಂದು ಪ್ರೌಢಶಾಲೆಗೆ ಮಧ್ಯಾಹ್ನದ ಬಿಸಿಯೂಟ ವಿತರಿಸುವ ಒಡಂಬಡಿಕೆಯನ್ನು  ಮಾಡಿಕೊಂಡಿದ್ದೀರಿ. ಶುಕ್ರವಾರ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ನೀಡದೆ ಕಳಪೆಮಟ್ಟದ ಆಹಾರ ಹಾಗೂ ಪಾನೀಯ ಪದಾರ್ಥವಾದ ಸಾಂಬಾರ್ ವಿತರಣೆ ಮಾಡಿದ್ದು, ಅದನ್ನು ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ’ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

ಶಹಾಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಲೋಕಾಯುಕ್ತ ತಂಡದಿಂದ ಬಯಲು: ಕಳಪೆಮಟ್ಟದ ಆಹಾರ ವಿತರಣೆ ಮಾಡಿ ಮಕ್ಕಳ ಅಸ್ವಸ್ಥಕ್ಕೆ ಕಾರಣವಾಗಿರುವ ಶಹಾಪುರ ನಗರದ ನಿರ್ಮಲಾದೇವಿ ಮಹಿಳಾ ಮಂಡಳ ಸಂಘದ ಕಚೇರಿಗೆ ಶನಿವಾರ ಲೋಕಾಯುಕ್ತ ತಂಡವು ಭೇಟಿ ನೀಡಿದಾಗ ಅಚ್ಚರಿ ಕಾದಿತ್ತು. ‘ಆಹಾರ ಧಾನ್ಯ ದಾಖಲಾತಿ ಪುಸ್ತಕ ಪರಿಶೀಲಿಸಿದಾಗ ಇಲ್ಲಿಯವರೆಗೆ ಯಾವುದೇ ಸಂಬಂಧಪಟ್ಟ ಮೇಲಧಿಕಾರಿಗಳು ಭೇಟಿ ನೀಡಿರುವುದಿಲ್ಲ. ಸಂಪೂರ್ಣ ಕಳಪೆಮಟ್ಟದ ಅಕ್ಕಿ ಹಾಗೂ ಇತರ ಪದಾರ್ಥಗಳು ಕಂಡು ಬಂದಿರುತ್ತವೆ’ ಎಂದು ಲೋಕಾಯುಕ್ತರ ತಂಡವು ಸಿದ್ಧಪಡಿಸಿದ ವರದಿಯಲ್ಲಿ ನಮೂದಿಸಿರುವುದು ಗೊತ್ತಾಗಿದೆ.

‘ಘಟನೆ ನಡೆದಿದ್ದು ಶುಕ್ರವಾರ. ಆದರೆ ಅಕ್ಷರ ದಾಸೋಹದ ಜಿಲ್ಲಾ ಮಟ್ಟದ ಅಧಿಕಾರಿ ಈಶ್ವರಪ್ಪ ನೀರಡಗಿ ಇವರು ನಿರ್ಮಲಾದೇವಿ ಮಹಿಳಾ ಮಂಡಳ ಕಚೇರಿಗೆ ಗುರುವಾರ ಭೇಟಿ ನೀಡಿದ ಹಾಗೆ ಬರೆದು ಶನಿವಾರ ಪರಿಶೀಲಿಸಿ ದಾಖಲಾತಿಯಲ್ಲಿ ಸಹಿ ಮಾಡಿರುತ್ತಾರೆ. ಅದರಲ್ಲಿ ‘ಎಲ್ಲವು ಸರಿ ಇದೆ’ ಅಂತ ಬರೆದಿದೆ. ಆದರೆ ಅದನ್ನು ಬರೆದವರು ಬೇರೆ ಇದ್ದು, ಸಹಿ ಮಾತ್ರ ಇವರದಾಗಿದೆ. ಬಿಸಿಯೂಟದ ಮೇಲಧಿಕಾರಿಗಳು ಇದರಲ್ಲಿ ನೇರ ಹೊಣೆಯಾಗಿದ್ದಾರೆ’ ಎಂದು ಲೋಕಾಯುಕ್ತರ ತಂಡವು ವರದಿಯಲಿ ತಿಳಿಸಿದೆ ಎಂದು ಗೊತ್ತಾಗಿದೆ.

ಕಾನೂನು ಪ್ರಾಧಿಕಾರಕ್ಕೆ ಮೊರೆ

‘ನಿರ್ಮಲಾದೇವಿ ಮಹಿಳಾ ಮಂಡಳ ಸಂಘವು 2007-08ರಲ್ಲಿ ನೋಂದಣಿಯಾಗಿದೆ. ಹಲವಾರು ವರ್ಷದಿಂದ ಮಧ್ಯಾಹ್ನ ಬಿಸಿಯೂಟ ಸರಬರಾಜು ಮಾಡುತ್ತಲೇ ಬಂದಿದೆ. ಆದರೆ ಸಂಘದ ಸದಸ್ಯರು ಯಾರು ಎಂಬುದು ಗೊತ್ತಾಗಿಲ್ಲ. ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರು ಸಂಘವನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಬಿಸಿಯೂಟದ ಅಧಿಕಾರಿಗಳನ್ನು ತೋರು ಬೆರಳಿನಲ್ಲಿಯೇ ಕರೆಯಿಸಿ ಕಡತಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಈ ವ್ಯಕ್ತಿಯ ವಿರುದ್ಧ ಹಾಗೂ ಕಳಪೆಮಟ್ಟದ ಆಹಾರ ವಿತರಣೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಮತ್ತು ಸಂಘವನ್ನು  ತಕ್ಷಣ ಅಮಾನತ್ತಿನಲ್ಲಿ ಇಟ್ಟು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಿಗೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT