ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರಿ ಹೇಳಿಕೆ
Last Updated 16 ಡಿಸೆಂಬರ್ 2022, 20:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ ಅವರೊಂದಿಗೆ ಶುಕ್ರವಾರ ‘ಪ್ರಜಾವಾಣಿ’ ವತಿಯಿಂದಫೋನ್‌ಇನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಮಿಕ ಇಲಾಖೆ ಸೌಲಭ್ಯ, ಸ್ಮಾರ್ಟ್‌ ಕಾರ್ಡ್‌, ಶಿಷ್ಯ ವೇತನ, ಸೌಲ ಸೌಲಭ್ಯ, ಕಾರ್ಮಿಕ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಕಾಯ್ದೆಗಳಾವವು? ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೆಂದು ನೋಂದಣಿಗೆ ಯಾವ ದಾಖಲೆ ಬೇಕು?, ನೋಂದಾಯಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಯಾವುವು?, ಅಸಂಘಟಿತ ಕಾರ್ಮಿಕರಿಗೆ ಇರುವ ಸರ್ಕಾರದ ಯೋಜನೆಗಳೇನು? ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲಾಖೆಯ ಕ್ರಮಗಳೇನು? ಎನ್ನುವ ಕುರಿತು ಓದುಗರು ಪ್ರಶ್ನೆ ಕೇಳಿದರು.

- ಭೀಮಣ್ಣ ಚಂಡ್ರಕಿ, ಹಣಮಂತ, ರಘು ಕಕ್ಕೇರಾ, ಸಿದ್ದಪ್ಪ ಅಸ್ಕಿ

ಎರಡು ವರ್ಷಗಳಿಂದ ಮಕ್ಕಳ ಸ್ಕಾಲರ್‌ ಶಿಪ್‌ ಬಂದಿಲ್ಲ. ಬಸ್‌ ಪಾಸ್‌ ಕೂಡ ಸಿಕ್ಕಿಲ್ಲ.

ಸ್ಕಾಲರ್‌ ಶಿಪ್‌ ಕೇಂದ್ರ ಕಚೇರಿಯಿಂದ ನಿರ್ವಹಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ಪರಿಶೀಲನೆ ನಂತರ ಜಮಾ ಆಗುತ್ತದೆ. ಆನ್‌ಲೈನ್‌ನಲ್ಲಿ ಹೊಂದಾಣಿಕೆಯಾಗದಿದ್ದರೆ ತಿರಸ್ಕೃತವಾಗುತ್ತದೆ. ಹೆಚ್ಚಿನ ಮಾಹಿತಿಗೆ ಕಚೇರಿಗೆ ಬಂದು ಪರಿಶೀಲನೆ ಮಾಡಿಕೊಳ್ಳಬಹುದು. ತಾಂತ್ರಿಕ ಲೋಪದಿಂದಲೂ ಸಮಸ್ಯೆ ಆಗಿದೆ.

- ಪ್ರಕಾಶ, ಸುರಪುರ

ಕಾರ್ಮಿಕ ಇಲಾಖೆಯಿಂದ ಕಿಟ್‌ ವಿತರಿಸಲಾಗುತ್ತಿಲ್ಲ.

ಈಗಾಗಲೇ ಕಿಟ್‌ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಕಚೇರಿಯಿಂದ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಹೀಗಾಗಿ ಮತ್ತಷ್ಟು ವಿತರಿಸಲು ಪತ್ರ ಬರೆಯಲಾಗಿದೆ.

- ಗುಂಡೂರಾವ್, ಹುಣಸಗಿ, ಚನ್ನಬಸಪ್ಪ ಪಾಟೀಲ ಯಾದಗಿರಿ, ಖಾಜಾ ಹುಸೇನ್‌ ಗುಂಡ್ಲೂರು

ಆನ್‌ಲೈನ್‌ನಲ್ಲಿ ಕಾರ್ಮಿಕ ಕಾರ್ಡ್‌ ಅರ್ಜಿ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳುತ್ತಿಲ್ಲ

ತಾಂತ್ರಿಕ ಕಾರಣದಿಂದ ಕಳೆದ ಒಂದು ತಿಂಗಳಿಂದ ಆನ್‌ಲೈನ್‌ನಲ್ಲಿ ಕಾರ್ಮಿಕ ಕಾರ್ಡ್‌ ಸಮಸ್ಯೆ ಆಗಿದೆ. ನಂಬರ್‌ ಜನರೆಟ್ ಆಗುತ್ತಿಲ್ಲ. ಈ ಬಗ್ಗೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ.

- ರಾಘವೇಂದ್ರ ಭಕ್ರಿ, ಸುರಪುರ

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಗೊಂಡಿರುವ ಕ್ರಮಗಳೇನು?

ಕಾರ್ಮಿಕ ಇಲಾಖೆಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲೂ ಮಾಹಿತಿ ನೀಡಲಾಗುತ್ತಿದೆ. ಕಳೆದ 20 ದಿನಗಳಿಂದ ವಿವಿಧೆಡೆ ದಾಳಿ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ಹತ್ತಿ ಬಿಡಿಸುವುದು, ಹೋಟೆಲ್‌ನಲ್ಲಿ ಕೆಲಸ ಮಾಡುವ ಮಕ್ಕಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

- ಹಣಮಂತರಾಯ

ಕಾರ್ಮಿಕ ಇಲಾಖೆಯ ಕಾಯ್ದೆಗಳಿಂದ ಏನು ಉಪಯೋಗ?

ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಗಳಿಗೆ ಸೌಲಭ್ಯಗಳಿವೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

- ನಾಗರಾಜ, ಸುರಪುರ

ಸುರಪುರದಲ್ಲಿ ಕಾರ್ಮಿಕ ಇಲಾಖೆ ಕೆಲಸ ನಿರ್ವಹಿಸುತ್ತಿಲ್ಲ

ಸುರಪುರದಲ್ಲಿ ಕಾಯಂ ಕಾರ್ಮಿಕ ನಿರೀಕ್ಷಕರು ಇಲ್ಲ. ಯಾದಗಿರಿ ಮತ್ತು ಶಹಾಪುರದಲ್ಲಿ ಮಾತ್ರ ಕಾರ್ಮಿಕ ನಿರೀಕ್ಷಕರು ಇದ್ದಾರೆ. ಇದರಿಂದ ಕಾರ್ಮಿಕ ಇಲಾಖೆಯಿಂದ ಸಮಸ್ಯೆಯಾಗಿದೆ. ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

- ವಿಜಯಲಕ್ಷ್ಮಿ, ನಗನೂರ

ನಗನೂರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿದೆ. ಹತ್ತಿ ಹೊಲಗಳಲ್ಲಿ ಚಿಕ್ಕಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ. ಮಕ್ಕಳನ್ನು ಪೋಷಕರು ಶಾಲೆಗಳಿಗೆ ಕಳಿಸುತ್ತಿಲ್ಲ.

ಈ ಬಗ್ಗೆ ಎರಡು ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಶಾಲೆಗೆ ಮಕ್ಕಳನ್ನು ಕಳಿಸುವುದರಲ್ಲಿ ಪೋಷಕರ ಪಾತ್ರವೂ ಇದೆ. ಕೂಲಿಗೆ ಕಳಿಸುವುದು ಸರಿಯಲ್ಲ. ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಬಾರದು.

- ಪ್ರಜ್ವಲ್‌, ಕಣೇಕಲ್‌

ನಮ್ಮ ತಾಯಿ ಕಟ್ಟಡ ಕಾರ್ಮಿಕರಿದ್ದು, ಮನೆ ಕಟ್ಟಲು ಸಾಲ ಸಿಗುತ್ತದೇಯೇ?

ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ₹ 2 ಲಕ್ಷ ಸಾಲ ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಮಾರ್ಗಸೂಚಿ ಬಂದಿಲ್ಲ. ಬಂದ ನಂತರ ಈ ಬಗ್ಗೆ ತಿಳಿಸಲಾಗುವುದು.

- ವಿಶ್ವನಾಥರೆಡ್ಡಿ, ಅಬ್ಬೆತುಮಕೂರು

ಕಾರ್ಮಿಕ ಇಲಾಖೆಯಿಂದ ಅಂಗವಿಕಲರಿಗೆ ಯಾವ ಸೌಲಭ್ಯ ನೀಡಿದ್ದೀರಿ?

ಕಾರ್ಮಿಕ ಇಲಾಖೆಯಿಂದ ಅಂಗವಿಕಲರಿಗೆ ಎಂದು ಪ್ರತ್ಯೇಕ ಅನುದಾನವಿಲ್ಲ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅರ್ಜಿ ಸಲ್ಲಿಸಿದರೆ ಅವರಿಗೆ ಸೌಲಭ್ಯ ವಿತರಿಸಲಾಗುವುದು.

- ಯೇಸುಮಿತ್ರ, ಯಾದಗಿರಿ

ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಅರಿವು ನೆರವು ಕಾರ್ಯಕ್ರಮ ನೀಡಲಾಗುತ್ತಿದೆಯೇ?

ಸದ್ಯಕ್ಕೆ ಖಾಸಗಿ ಸಂಸ್ಥೆಗಳಿಗೆ ಇ–ಶ್ರಮ್‌ ಕಾರ್ಡ್‌ ಬಗ್ಗೆ ಜಾಗೃತಿ ಮೂಡಿಸಲು ಅನುಮತಿ ನೀಡಲಾಗಿತ್ತು. ಬಾಲ ಕಾರ್ಮಿಕ ನಿರ್ಮೂಲನೆ ಬಗ್ಗೆ ಬೀದಿ ನಾಟಕ ಮಾಡಲು ಅವಕಾಶವಿದೆ.

- ಮಲ್ಲಪ್ಪ

ಶಾಲೆಯ ಮಕ್ಕಳು ಹತ್ತಿ ಮತ್ತಿತರ ಕೂಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ.

ಕಾರ್ಮಿಕ ಇಲಾಖೆಯಿಂದ ಅನೇಕ ಕಡೆ ದಾಳಿ ಮಾಡಿ ಕೂಲಿ ಮಾಡುವ ಮಕ್ಕಳನ್ನು ರಕ್ಷಿಸಲಾಗುತ್ತಿದೆ. ಮಕ್ಕಳ ಜವಾಬ್ದಾರಿ 11 ಇಲಾಖೆಗಳಿಗೆ ಸೇರಿದ್ದು, ಎಲ್ಲರೂ ಕೂಡಿ ಮಕ್ಕಳನ್ನು ರಕ್ಷಿಸಬೇಕು ಎಂದು ಈಚೆಗೆ ಸಭೆ, ಕಾರ್ಯಾಗಾರ ನಡೆಸಲಾಗಿದೆ.

- ಗುಂಡಪ್ಪ ದೇವಾಪುರ, ಹುಣಸಗಿ

ಕಾರ್ಮಿಕ ಕಾರ್ಡ್‌ ಇನ್ನೂ ಬಂದಿಲ್ಲ. ಇದರಿಂದ ಹಲವಾರು ಯೋಜನೆಗಳಿಗೆ ಸಮಸ್ಯೆಯಾಗಿದೆ.

ಈಗಾಗಲೇ ಕಾರ್ಡ್‌ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲೇ ತಮ್ಮ ಸಮಸ್ಯೆ ಬಗೆ ಹರಿಸಲಾಗುವುದು.

- ಸಂತೋಷ, ಯರಗೋಳ

ಕೆಲವರಿಗೆ ಮಾತ್ರ ಕಿಟ್‌ಗಳು ಬಂದಿದ್ದು, ಎಲ್ಲರಿಗೂ ವಿತರಿಸಿ.

ಸರ್ಕಾರದಿಂದ ಕಿಟ್‌ ಬಂದಿರುವುದನ್ನು ವಿತರಿಸಲಾಗುತ್ತಿದೆ. ಮೇಷನ್ ಕಿಟ್‌ ಖಾಲಿ ಆಗಿದೆ. ಪೇಂಟರ್‌, ಎಲೆಕ್ಟ್ರಿಷಿಯನ್‌ ಕಿಟ್‌ಗಳಿದ್ದು, ವಿತರಿಸಲಾಗುವುದು.

- ಸಂಗಮೇಶ, ಹುಣಸಗಿ

ನಮ್ಮದು ಫೋಟೊ ಸ್ಟುಡಿಯೊ ಇದ್ದು, ಕಾರ್ಮಿಕ ಇಲಾಖೆ ಕಾರ್ಡ್‌ ಮಾಡಿಸಬಹುದೇ?

* ಫೋಟೋಗ್ರಾಫರ್‌ಗಳು ಕಾರ್ಮಿಕ ಇಲಾಖೆಯ ಇ–ಶ್ರಮ್‌ ಕಾರ್ಡ್‌ ಮಾಡಿಸಿಕೊಳ್ಳಬಹುದು. ಕಟ್ಟಡ ಕಾರ್ಮಿಕ ಕಾರ್ಡ್‌ ಬರುವುದಿಲ್ಲ.

- ನೆಹರೂ ಯಳವಾರ, ಹಳಿಸಗರ

ಮದುವೆ ಸಹಾಯಧನ ಪಡೆಯಲು ಯಾವ ದಾಖಲಾತಿ ನೀಡಬೇಕು.

ಕಟ್ಟಡ ಕಾರ್ಮಿಕರಿಗೆ ಮತ್ತು ಮಕ್ಕಳಿಗೆ ಮದುವೆ ಸಹಾಯಧನ ವಿತರಿಸಲಾಗುತ್ತಿದೆ. ಲೇಬರ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಮದುವೆ ಆಮಂತ್ರಣ ಪತ್ರಿಕೆ, ನೋಂದಣಿ ಪತ್ರ ಇನ್ನಿತರ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು.

***

ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯ

ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಮಾಸಿಕಪಿಂಚಣಿ ₹ 2,000, ಕುಟುಂಬ ಪಿಂಚಣಿ ಸೌಲಭ್ಯ ಮೃತ ಪಿಂಚಣಿದಾರರ ಪತ್ನಿ, ಪತ್ನಿಗೆ ಮಾಸಿಕ ₹ 1,000, ದುರ್ಬಲತೆ ಪಿಂಚಣಿ ₹ 2,000 ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆನ್ನಾಧರಿಸಿ ₹ 2 ಲಕ್ಷವರೆಗೆ ಅನುಗ್ರಹ ರಾಶಿ ಸಹಾಯಧನ ನೀಡಲಾಗುತ್ತಿದೆ.

ವೈದ್ಯಕೀಯ ಸಹಾಯಧನ, ಶಿಕ್ಷಣ ತರಬೇತಿ, ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮಿ ಬಾಂಡ್‌), ತಾಯಿ ಮಗು ಸಹಾಯ ಹಸ್ತ, ಶೈಕ್ಷಣಿಕ ಸಹಾಯ ಹಸ್ತ, ಬಸ್‌ ಸೌಲಭ್ಯ, ಶ್ರಮಿಕ್‌ ಸಂಜೀವಿನಿ ಹೀಗೆ ಹಲವಾರು ಸೌಲಭ್ಯಗಳು ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿದೆ.

***

ಕಾರ್ಮಿಕ ಮಕ್ಕಳಿಗೆ ಟ್ಯಾಬ್‌

ಕಟ್ಟಡ ಮತ್ತು ಇತರೆ ಕಾರ್ಮಿಕ ಮಕ್ಕಳಿಗೆ ಟ್ಯಾಬ್‌ ವಿತರಿಸಲಾಗುತ್ತಿದೆ. ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಶಿಶುಪಾಲನೆಯಿಂದ ಪಿಯು ವರೆಗೆ ಶಿಕ್ಷಣಕ್ಕೆ ಸ್ಕಾಲರ್‌ ಶಿಪ್‌ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ ಮಕ್ಕಳಿಗೆ ಕಿಟ್‌: ಕಾರ್ಮಿಕ ಇಲಾಖೆ ಕೂಲಿಕಾರ ಮಾಡುತ್ತಿರುವ ವೇಳೆ ದಾಳಿ ಮಾಡಿ ಸಿಕ್ಕಿ ಬಿದ್ದಾಗ ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ಇದ್ದರೆ ಅವರಿಗೆ ಆಹಾರ ಕಿಟ್‌ ವಿತರಿಸಲಾಗುತ್ತಿದೆ. ಎನ್‌ಜಿಒ ಸಹಕಾರದಿಂದ ಅವರ ಸಂರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು.

lಚಾಲಕರಿಗೆ ಅಪಘಾತ ವಿಮೆ

ಚಾಲನೆ ವೇಳೆ ಅಥವಾ ಬೇರೆ ಸಮಯದಲ್ಲಿ ಖಾಸಗಿ ವಾಣಿಜ್ಯ ಚಾಲಕರು ಸಾವನ್ನಪ್ಪಿದರೆ, ₹5 ಲಕ್ಷ ವರೆಗೆ ಪರಿಹಾರ ವಿಮೆ ಸಿಗುತ್ತದೆ.

ಆರ್‌ಟಿಒ, ಅಪಘಾತದ ಬಗ್ಗೆ ಎಫ್‌ಐಆರ್‌ ಪ್ರತಿ, ಮರಣೋತ್ತರ ಪರೀಕ್ಷೆ ಇನ್ನಿತರ ದಾಖಲೆಗಳು ಸಲ್ಲಿಸಬೇಕು.

***

ಸ್ಮಾರ್ಟ್‌ ಕಾರ್ಡ್‌ ಪಡೆಯಲು ದಾಖಲೆಗಳು

90 ದಿನಗಳು ಕೆಲಸ ಮಾಡಿರುವ ಉದ್ಯೋಗ ಪ್ರಮಾಣ ಪತ್ರ, ಮಾಲೀಕರಿಂದ ಪತ್ರ, ವೇತನ ಪತ್ರ, ಪಡಿತರ ಕಾರ್ಡ್‌, ಆಧಾರ್‌ ಕಾರ್ಡ್‌ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.

ಕಾರ್ಮಿಕ ಮಾಲಿಕರ ನಡುವೆ ಸೌಹಾರ್ದ

ಕಾರ್ಮಿಕ ಇಲಾಖೆ ಕಾರ್ಮಿಕ ಮತ್ತು ಮಾಲೀಕರ ನಡುವೆ ಸೌಹಾರ್ದತೆ ಏರ್ಪಡಲು ಸಹಾಯ ಮಾಡುತ್ತದೆ. ವೇತನ ನೀಡದಿರುವುದು, ಕನಿಷ್ಠ ವೇತನ ಪಾವತಿ ಇನ್ನಿತರ ಸಮಸ್ಯೆಗಳ ಬಗ್ಗೆ ದೂರು ಬಂದರೆ ಕಾರ್ಮಿಕ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಮಿಕ ಇಲಾಖೆಯಿಂದ 23 ಕಾಯ್ದೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ 33 ಪ್ರಕರಣಗಳನ್ನು ದಾಖಲಿಸಿದ್ದು, ಅಂತಿಮ ಹಂತಕ್ಕೆ ಬಂದಿವೆ ಎಂದು ಉಮಾಶ್ರೀ ಕೋಳಿ ಮಾಹಿತಿ ನೀಡಿದರು.

****

ಫೋನ್‌ ಇನ್‌ ನಿರ್ವಹಣೆ:ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT