ಭಾನುವಾರ, ಜನವರಿ 26, 2020
28 °C
‘ಪ್ರಜಾವಾಣಿ ಫೋನ್‌’ ಕಾರ್ಯಕ್ರಮದಲ್ಲಿ ಆರೋಗ್ಯ, ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಸ್‌.ಪಾಟೀಲ

ಯಾದಗಿರಿ| ಕ್ರಾಂತಿಕಾರ ಬದಲಾವಣೆಗೆ ಆರೋಗ್ಯ ಇಲಾಖೆ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಪ್ರಜಾವಾಣಿ’ ಯಾದಗಿರಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಲ್ಲನಗೌಡ ಎಸ್‌.ಪಾಟೀಲ ಅವರಿಗೆ ಜಿಲ್ಲೆಯ ವಿವಿಧೆಡೆಯಿಂದ ನಿರೀಕ್ಷೆಗಳು ಮೀರಿ ಕರೆಗಳು ಬಂದವು.

ಆರೋಗ್ಯ ಇಲಾಖೆಯಲ್ಲಿ ಕೈಗೊಂಡ ಸುಧಾರಣೆ ಕ್ರಮ, ಆರೋಗ್ಯ ಕ್ಷೇತ್ರದಲ್ಲಿನ ಹೊಸ ವಿಧಾನ, ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ, ವೈದ್ಯರ ಕೊರತೆ, ಆಸ್ಪತ್ರೆ ಸ್ವಚ್ಛತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಡಿಎಚ್‌ಒ ಅವರು ಸಮಾಧಾನದಿಂದ ಉತ್ತರಿಸಿದರು.

l ಆರ್‌.ವಿಶ್ವನಾಥರೆಡ್ಡಿ, ಅಬ್ಬೆತುಮಕೂರ
ಸಾಂಕ್ರಾಮಿಕ ರೋಗ ಹೇಗೆ ತಡೆಗಟ್ಟಬೇಕು?

ಉ: ಮನೆ ಅಕ್ಕಪಕ್ಕದಲ್ಲಿ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ. ಆಶಾ, ಕಿರಿಯ ಆರೋಗ್ಯ ಸಹಾಯಕರು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಪತ್ತೆ ಹಚ್ಚುತ್ತಿದ್ದಾರೆ. ಮಲೇರಿಯಾ ಹೆಚ್ಚಿದ್ದರೆ ಆ ಭಾಗದಲ್ಲಿ ಔಷಧ ಸಿಂಪಡಿಸಲಾಗುವುದು. ಜಾಗೃತಿ ಇದ್ದಷ್ಟು ಸಾಂಕ್ರಾಮಿಕ ರೋಗ ನಿವಾರಣೆ ಸಾಧ್ಯ.

l ಸಂಗನಗೌಡ, ರಾಜನಕೋಳೂರ
ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ವಿಕಲಚೇತರಿಗೆ, ಶ್ರವಣ ದೋಷ ಉಳ್ಳವರಿಗೆ ಏನು ಸೌಲಭ್ಯ ಇದೆ.

ಉ: ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಶ್ರವಣ ದೋಷಕ್ಕೆ ಸಂಬಂಧಿಸಿದ ಪರಿಣಿತರು ಅರ್ಜಿ ಸಲ್ಲಿಸಿದರೆ ನೇಮಕ ಮಾಡಿಕೊಂಡು ಜನರ ಸಮಸ್ಯೆ ಬಗೆಹರಿಸುತ್ತೇನೆ.

l ಶ್ರೀಕಾಂತ, ಯಾದಗಿರಿ
ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದರೆ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ವ್ಯವಸ್ಥೆ ಇಲ್ಲ. ವೈದ್ಯರು ಕಲಬುರ್ಗಿ, ರಾಯಚೂರಿಗೆ ಹೋಗಿ ಎನ್ನುತ್ತಾರೆ.

ಉ: ಅರ್ಥೋಪೆಡಿಷನ್‌ (ಎಲುಬಿನ ಚಿಕಿತ್ಸೆ) ವೈದ್ಯರ ಕೊರತೆ ಇರುವುದರಿಂದ ಚಿಕಿತ್ಸೆಗೆ ಸಮಸ್ಯೆ ಆಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸಂಬಂಧಿಸಿದ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ಎರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು.

l ಶಿವರಾಜ ಪಾಟೀಲ, ಸುರಪುರ
ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಪ್ರಕರಣ ಹೆಚ್ಚಾಗಿದೆ. ಇಲಾಖೆ ವತಿಯಿಂದ ಏನು ಕ್ರಮ ಕೈಗೊಳ್ಳಲಾಗಿದೆ.

ಉ: ಈ ವರ್ಷ ಡೆಂಗಿ ಮತ್ತೆ ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಾಗಿವೆ. 248 ಜನರಲ್ಲಿ ಡೆಂಗಿ ದೃಢಪಟ್ಟಿದೆ. ಜನರು ವಾಸಿಸುವ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಿ. ನೀರು ಸಂಗ್ರಹಿಸಿದ ಮೇಲೆ ಮುಚ್ಚಿ. ಮುಂಜಾಗೃತೆ ವಹಿಸಿ.

l ಜುಮ್ಮಣ್ಣ, ಹುಣಸಗಿ
ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇದನ್ನು ಬಗೆಹರಿಸಿ.

ಉ: ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಹೊಸ ವೈದ್ಯರ ನೇಮಕ ಮಾಡಲಾಗಿದೆ. ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್‌ ಅಳವಡಿಸಲಾಗಿದೆ. ಎಲ್ಲ ಸಮಯದಲ್ಲೂ ರೋಗಿಗಳನ್ನು ಪರೀಕ್ಷಿಸಲು ವೈದ್ಯರು ಸಿಗುತ್ತಾರೆ. ಶೀಘ್ರವೇ ಹೊಸ ವೈದ್ಯರನ್ನು ನೇಮಿಸುತ್ತೇವೆ.

l ಅಭಿಷೇಕ ದಾಸನಕೇರಿ, ಯಾದಗಿರಿ
ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಏನು ಸುಧಾರಣೆ ಕೈಗೊಂಡಿದ್ದಿರಿ.

ಉ: ವೈದ್ಯರ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ವೈದ್ಯರು ಕೆಲಸಕ್ಕೆ ಹಾಜರಾಗುತ್ತಿರುವ ಕುರಿತು ಆನ್‌ಲೈನ್‌ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ. ಔಷಧಿ ಬೇಕಾದರೆ ಸ್ಟೋರ್‌ನಿಂದ ತರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಚೀಟಿ ಬರೆದುಕೊಡುವುದನ್ನು ನಿಷೇಧಿಸಲಾಗಿದೆ.

l ಸೋಮಶೇಖರ, ರಾಜನಕೋಳೂರ
ರಾಜನಕೋಳೂರ ತಾಂಡಾದಲ್ಲಿ ಡೆಂಗಿ ಪ್ರಕರಣ ಹೆಚ್ಚಾಗಿವೆ. ಏನು ಕ್ರಮ ವಹಿಸಿದ್ದಿರಿ.

ಉ: ತಾಂಡಾದಲ್ಲಿ ಲಾರ್ವಾ ಸರ್ವೆ ನಡೆಸಲಾಗಿದೆ. ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸಿ. ಡೆಂಗಿ ಪೀಡಿತ ಇಲ್ಲಿನ ನಿವಾಸಿಗಳಿಗೆ ಶಹಾಪುರ, ಕಲಬುರ್ಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

l ರಮೇಶ ಬಿರಾದಾರ, ಕೊಡೆಕಲ್ಲ
ಆಸ್ಪತ್ರೆಗಳು ಸ್ವಂತ ಔಷಧಿ ಖರೀದಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಸುತ್ತೋಲೆ ಹೊರಡಿಸಿದ್ದಾರೆ. ಏನು ಕ್ರಮ ಕೈಗೊಳ್ಳಲಾಗಿದೆ.

ಉ: ತಾಲ್ಲೂಕು ಆಸ್ಪತ್ರೆಗಳಿಗೆ ₹ 2 ಲಕ್ಷ, ಜಿಲ್ಲಾ ಆಸ್ಪತ್ರೆಗೆ ₹ 5 ಲಕ್ಷ ವೆಚ್ಚದಲ್ಲಿ ಔಷಧಿ ಖರೀದಿಗೆ ಅನುಮತಿ ನೀಡಲಾಗಿದೆ. ಇದನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಇನ್ನ ಮೇಲೆ ಯಾವುದೇ ಆಸ್ಪತ್ರೆಯಲ್ಲಿ ಔಷಧಿ ಚೀಟಿ ಬರೆದರೆ ನನ್ನ ಗಮನಕ್ಕೆ ತನ್ನಿ. ಸೂಕ್ತ ಕ್ರಮಕೈಗೊಳ್ಳುತ್ತೇನೆ.

l ಸಂಗಮೇಶ, ಕೆಂಭಾವಿ
ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಇದೆ. ಅದನ್ನು ಪರಿಹರಿಸಿ.

ಉ: ಬಳಸಿದ ವಸ್ತುಗಳನ್ನು ಆಸ್ಪತ್ರೆಯಲ್ಲಿ ಬಿಸಾಡು ವುದಿಲ್ಲ. ಮುಂಜಾಗೃತೆ ದೃಷ್ಟಿಯಿಂದ ಅದನ್ನು ಕಾಮನ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ ವಿಲೇವಾರಿ ಮಾಡಲಾಗುತ್ತಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದೇವೆ.

l ಪ್ರಥಮ, ಯಾದಗಿರಿ
ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಗರ್ಭಿಣಿಯರಿಗೆ ಸಮಸ್ಯೆಯಾಗುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ.

ಉ: ಗರ್ಭಿಣಿ ಮಹಿಳೆಯರನ್ನು ಲ್ಯಾಬ್‌ ಟೆಕ್ನಿಷಿಯನ್‌ ಅವರೇ ಪರೀಕ್ಷೆ ನಡೆಸುತ್ತಾರೆ. ಈ ಬಗ್ಗೆ ಜನರಿಗೆ ವೈದ್ಯರ ಮೇಲೆ ಅನುಮಾನವಿದ್ದರೆ ಆಸ್ಪತ್ರೆಯ ಹೆಲ್ತ್‌ ಡೆಸ್ಕ್‌ನಲ್ಲಿ ದೂರು ಬರೆದು ಹಾಕಿ. ಖಂಡಿತ ಕ್ರಮ ಕೈಗೊಳ್ಳುತ್ತೇನೆ.

l ಶಾಂತಪ್ಪ ಖಾನಳ್ಳಿ, ಯಾದಗಿರಿ
ರೋಗಿಗಳು ತುರ್ತು ಚಿಕಿತ್ಸೆಗೆ ಅಂತ ಬಂದಾಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವಂತೆ ಮಾಡಿ.

ಉ: ಆಸ್ಪತ್ರೆಗೆ ಹೆಚ್ಚು ವೈದ್ಯರನ್ನು ನೇಮಿಸಲು ಪ್ರಸ್ತಾವನೆ ಸಲ್ಲಿಸಿದ್ದೇನೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಮೆಡಿಕಲ್‌ ಕಾಲೇಜು ಆರಂಭವಾಗುತ್ತಿರುವುದರಿಂದ ಎಲ್ಲ ಖಾಯಿಲೆಗೂ ಸೂಕ್ತ ಚಿಕಿತ್ಸೆ ಸಿಗಲಿದೆ.

l ಭೀಮರಾಯ, ಹೊಸಳ್ಳಿ
ಜಿಲ್ಲಾಸ್ಪತ್ರೆ ಇದ್ದರೂ ವೈದ್ಯರು ಬೇರೆ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಏಕೆ ಈ ಸಮಸ್ಯೆ.

ಉ: ಖಾಯಿಲೆಗಳಿಗೆ ಸಂಬಂಧಿಸಿದ ವೈದ್ಯರು ಇಲ್ಲದಿದ್ದಾಗ ಹೀಗೆ ಮಾಡಲಾಗುತ್ತದೆ. ಶೀಘ್ರವೇ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆಗ ಈ ಸಮಸ್ಯೆ ಉದ್ಭವಿಸುವುದಿಲ್ಲ. ಇಲಾಖೆ ಸದಾ ಜನರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತದೆ.

l ಸಂಗಣ್ಣ ಎಸ್‌. ಹಡಗಲಿ, ಕಕ್ಕೇರಾ
ಪಟ್ಟಣ ಆಸ್ಪತ್ರೆಯಲ್ಲಿ ಕಡಿಮೆ ಸಿಬ್ಬಂದಿಗಳಿದ್ದಾರೆ. ಹೆಚ್ಚಿಸಿ.

ಉ: ಪ್ರಸ್ತುತ ಒಬ್ಬರು ವೈದ್ಯರು ಕಾರ್ಯನಿರ್ವಹಿ ಸುತ್ತಿದ್ದಾರೆ. ಕೆಲವೇ ದಿನದಲ್ಲಿ ಆಯುಷ್‌ ವೈದ್ಯರನ್ನು ಮಂಜೂರು ಮಾಡಲಾಗುವುದು.

l ಚಂದ್ರಶೇಖರ ಚವ್ಹಾಣ, ನಾರಾಯಣಪುರ
6 ಸಾವಿರ ಜನಸಂಖ್ಯೆ ಇರುವ ನಾರಾಯಣಪುರದಲ್ಲಿ ಆಸ್ಪತ್ರೆ ಇಲ್ಲ. ಮಂಜೂರು ಮಾಡಿಸಿ.

ಉ: ನಾರಾಣಪುರ ಮತ್ತು ಆಲಮಟ್ಟಿಯಲ್ಲಿ ಯುಕೆಪಿ ಆಸ್ಪತ್ರೆ ಇದೆ. ಅದು ನಮ್ಮ ವ್ಯಾಪ್ತಿಗೆ ಬರುವು ದಿಲ್ಲ. ಹೀಗಾಗಿ ಅಲ್ಲಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುತ್ತೇನೆ. ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

l ಉಸ್ತಾದ್‌ ವಜಾಹತ್‌ ಹುಸೇನ್‌, ಸುರಪುರ
ನಗರದ ಹಳೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ಸಿಗುವಂತೆ ಮಾಡಿ.

ಉ: ನಗರ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆ ಅವಕಾಶ ಇಲ್ಲ. ತುರ್ತು ಸಮಸ್ಯೆ ಇದ್ದರೆ 108ಕ್ಕೆ ಕರೆ ಮಾಡಿ ವಾಹನ ಬಂದು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು