ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಸರಿನಲ್ಲಿ ಲೂಟಿ; ಶ್ವೇತಪತ್ರ ಹೊರಡಿಸಲು ಮುಖಂಡರ ಆಗ್ರಹ

Last Updated 1 ಆಗಸ್ಟ್ 2020, 16:11 IST
ಅಕ್ಷರ ಗಾತ್ರ

ಯಾದಗಿರಿ: ಬಿಜೆಪಿ ಸರ್ಕಾರ ವೈದ್ಯಕೀಯ ಪರಿಕರ ಖರೀದಿಯಲ್ಲಿ ₹2,000 ಕೋಟಿ ಅಕ್ರಮ ಎಸಗಿದೆ. ವಿರೋಧ ಪಕ್ಷವಾಗಿ ಪ್ರಧಾನಿಯವರು ಹೇಳಿದಂತೆ ಚಪ್ಪಾಳೆ ತಟ್ಟಿದ್ದೇವೆ. ಜಾಗಟೆ ಬಾರಿಸಿದ್ದೇವೆ. ಪುಷ್ಪಾರ್ಚನೆ ಮಾಡಿದ್ದೇವೆ. ಆದರೆ, ಭ್ರಷ್ಟಾಚಾರಕ್ಕೆ ಸಹಕಾರ ನೀಡಿ ಎಂದರೆ ಹೇಗೆ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 60 ಸಾವಿರ ವೆಂಟಿಲೇಟರ್ ನೀಡುತ್ತೇವೆ ಎಂದಿದ್ದರು. ಆದರೆ, ಅವು ಎಲ್ಲಿ ಹೋದವು. ಕೊರೊನಾ ಹೆಸರಿನಲ್ಲಿ ಸರ್ಕಾರ ಲೂಟಿ ಹೊಡೆಯುತ್ತಿದೆ. ಪಾಸಿಟಿವ್ ಬಂದವರು ಹಲವಾರು ಗಂಟೆಗಳ ಕಾಲ ಆಂಬುಲೆನ್ಸ್‌ಗಾಗಿ ಕಾಯಬೇಕು. ಬೆಡ್‌ ಸಿಗುತ್ತಿಲ್ಲ. ಪ್ಯಾಕೇಜ್‌ ಹಣ ಕೊಟ್ಟು ಸಾರ್ವಜನಿಕರು ನರಳುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಕಳಪೆ ಪಿಪಿಇ ಕಿಟ್‌ ನೀಡಲಾಗಿದೆ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಸೋಂಕು ತಡೆಗಟ್ಟಲು ಸಂಪೂರ್ಣ ವಿಫಲವಾಗಿದೆ. 4 ಬಾರಿ ಲಾಕ್‌ಡೌನ್‌ ಮಾಡಿದರೂಸೋಂಕಿತರ ಪ್ರಮಾಣ ತಗ್ಗಲಿಲ್ಲ. ಬದಲಾಗಿ ಹೆಚ್ಚಾಗುತ್ತಾ ಹೋಗಿದೆ. ಕಡಿಮೆ ಸೋಂಕು ಇದ್ದಾಗ ಲಾಕ್‌ಡೌನ್‌ ಮಾಡಿದರು. ಹೆಚ್ಚಾದಾಗ ಅನ್‌ ಲಾಕ್‌ ಮಾಡಿದರು. ಇದರಿಂದ ನಿಯಂತ್ರಣಕ್ಕೆ ಬಾರದ ಸ್ಥಿತಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ಈ ಹಿಂದೆ ನಮ್ಮ ನಾಯಕ ರಾಹುಲ್‌ ಗಾಂಧಿಯವರು ಜನವರಿಯಲ್ಲಿಯೇಎಚ್ಚರಿಕೆ ನೀಡಿದ್ದರು. ವಿದೇಶಗಳಿಂದ ಬಂದವರನ್ನು ಕ್ವಾರಂಟೈನ್‌ ಮಾಡಲು ಸರ್ಕಾರಕ್ಕೆ ಸೂಚಿಸಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ದೇಶದೊಳಗೆ ಸೋಂಕು ಹೆಚ್ಚುತ್ತಾ ಹೋಯಿತು ಎಂದರು.

ನ್ಯಾಯಾಂಗ ತನಿಖೆಯಾಗಲಿ: ಬಿಜೆಪಿ ಸರ್ಕಾರ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಹಣ ನೀಡಿದ ಕುರಿತು ದಾಖಲೆ ಬಿಡುಗಡೆ ಮಾಡಿ ಮಾತನಾಡಿದಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಬಿಜೆಪಿ ಸರ್ಕಾರ ಕೋವಿಡ್ –19 ವಿರುದ್ಧ ಹೋರಾಡಲು ಮೂಲಸೌಕರ್ಯ ಒದಗಿಸುವ ನೆಪದಲ್ಲಿ 4,000 ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ. ಇದರಲ್ಲಿ 2,000 ಕೋಟಿಗಿಂತ ಹೆಚ್ಚು ಹಣ ದುರುಪಯೋಗವಾಗಿದೆ.ಹೀಗಾಗಿಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಅವ್ಯವಹಾರ ಆಗದಿದ್ದರೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿಎಂದು ಸವಾಲು ಎಸೆದರು.

ಜಮಖಂಡಿಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ವ್ಯಾಪಕ ಭ್ರಷ್ಟಾಚಾರ ಮಾಡಿ ಅಧಿಕಾರ ಕಳೆದುಕೊಂಡಿತ್ತು. ಈ ಬಾರಿಯೂ ಆರೋಗ್ಯ ಕ್ಷೇತ್ರದಲ್ಲಿ ಅವ್ಯವಹಾರ ನಡೆಸಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಅದು ಸಾಧ್ಯವಿಲ್ಲ ಎಂದರು.

ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ,ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿಪಾಟೀಲ ತುನ್ನೂರು, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ,ಯುವ ಕಾಂಗ್ರೆಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾನಸಗಲ್, ಕಿಸಾನ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್ ರಜಾಕ್‌, ಉಪಾಧ್ಯಕ್ಷ ಅವಿನಾಶ ಜಗನ್ನಾಥ, ಸಂಜಯಕುಮಾರ ಕವಲಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT