ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಲಂಚಕ್ಕೆ ಬೇಡಿಕೆ: ಸಿಡಿದೆದ್ದ ಪ್ರಗತಿಪರ ಸಂಘಟನೆಗಳು

ಜಿಲ್ಲೆಯ ದಲಿತ–ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ
Published : 14 ಆಗಸ್ಟ್ 2024, 15:34 IST
Last Updated : 14 ಆಗಸ್ಟ್ 2024, 15:34 IST
ಫಾಲೋ ಮಾಡಿ
Comments

ಯಾದಗಿರಿ: ನಗರ ಠಾಣೆಯ ಪಿಎಸ್‌ಐ ಪರಶುರಾಮ್‌ ಶಂಕಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಪುತ್ರ ಪಂಪನಗೌಡ ಇವರನ್ನು ಈ ಕೂಡಲೇ ಬಂಧಿಸಬೇಕು. ಪರಶುರಾಮ್‌ ತಂದೆ-ತಾಯಿ ಹೆಸರಿಗೆ ಸರ್ಕಾರದಿಂದ 10 ಎಕರೆ ಜಮೀನು ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ವಿವಿಧ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ನಗರದ ಮೈಲಾಪುರ ಅಗಸಿಯಲ್ಲಿ ಜಮಾಯಿಸಿದ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಶಾಸಕ, ಅವರ ಪುತ್ರ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಲ್ಲಿಂದ ಮಹಾತ್ಮಗಾಂಧಿ ವೃತ್ತ, ನಗರಸಭೆ ಮಾರ್ಗವಾಗಿ ಕನಕದಾಸ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ, ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದ ಮೂಲಕ ನೇತಾಜಿ ಸುಭಾಶ್ಚಂದ್ರ ಬೋಸ್‌ ವೃತ್ತದಲ್ಲಿ ಸೇರಿದರು. ‌

ಇದರಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸುತ್ತುವರೆದು ವಾಹನಗಳು ಸಂಚಾರ ಮಾಡುವ ಪರಿಸ್ಥಿತಿ ಏರ್ಪಟ್ಟಿತ್ತು.

‌ಈ ವೇಳೆ ಮಾತನಾಡಿದ ಮುಖಂಡರು, ಪಿಎಸ್‌ಐ ಪರಶುರಾಮ್‌ ಅವರ ಕುಟುಂಬಕ್ಕೆ ಸರ್ಕಾರದಿಂದ ₹ 5 ಕೋಟಿ ಪರಿಹಾರ ನೀಡಬೇಕು. ಮೃತ ಪಿಎಸ್‌ಐ ಪತ್ನಿ ಶ್ವೇತಾ ಅವರಿಗೆ ಸರ್ಕಾರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.

ಚಿತ್ರನಟ ಹಾಗೂ ಹೋರಾಟಗಾರ ಚೇತನ್‌ ಅಂಹಿಸಾ ಮಾತನಾಡಿ, ಯಾದಗಿರಿ ನಗರ ಠಾಣೆಯ ದಕ್ಷ ಹಾಗೂ ಪ್ರಾಮಾಣಿಕ ಪಿಎಸ್ಐ ಪರಶುರಾಮ್‌ ಶಂಕಾಸ್ಪದ ಸಾವಿಗೆ ಕಾರಣಿಕರ್ತರಾದ ಶಾಸಕ ಚನ್ನಾರೆಡ್ಡಿ ಪಾಟೀಲ ಹಾಗೂ ಪುತ್ರ ಪಂಪನಗೌಡ ಅವರನ್ನು ಕೂಡಲೇ ಬಂಧಿಸಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಕೊಡುವಂತೆ ಆಗ್ರಹಿಸಿದರು.

ಕುಟುಂಬ ವರ್ಗದವರ ದೂರಿನ ಪ್ರಕಾರ ನಗರ ಠಾಣೆಯಲ್ಲಿ ಪಿಎಸ್‌ಐ ಆಗಿ ಮುಂದುವರೆಯಲು ಶಾಸಕ, ಅವರ ಪುತ್ರ ಸುಮಾರು ₹30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎನ್ನುವ ದೂರಿನ ಮೇಲೆ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಾಗಿ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ. ಆದರೆ, ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

₹30 ಲಕ್ಷ ಬೇಡಿಕೆ ಇಟ್ಟಿದ್ದರಿಂದ ಆದನ್ನು ಈಡೇರಿಸಲಾಗದೆ ಮನನೊಂದಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ ತೊಡಗಿದೆ. ಕೂಡಲೇ ಈ ಸರ್ಕಾರವನ್ನು ವಜಾಗೊಳಿಸಬೇಕು. ಎಸ್‌ಐಟಿ, ಸಿಐಡಿ ತನಿಖೆ ಬೇಡ, ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

‌ಅಂಹಿದ ಮುಖಂಡ ಹನುಮೇಗೌಡ ಬೀರನಕಲ್‌ ಮಾತನಾಡಿ, ಜಾತಿ ನಿಂದನೆ ಪ್ರಕರಣದಲ್ಲಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಆದರೆ, ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ರಾಜಕಾರಣಗಳನ್ನು ಬಚಾವ್‌ ಮಾಡಲು ಸರ್ಕಾರ ಕೆಲ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಬರುತ್ತಿದೆ. ಕೂಡಲೇ ಪರಶುರಾಮ್‌ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.
ಚೇತನ್‌ ಅಂಹಿಸಾ, ಹೋರಾಟಗಾರ 

ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರಾದ ವೆಂಕಟೇಶ್ ಮರಿಯಪ್ಪ ಹಳ್ಳಿ, ನಾಗಣ್ಣ ಬಡಿಗೇರ, ನಾಗಣ್ಣ ಕಲ್ಲದೇವನಹಳ್ಳಿ ಅರ್ಜುನ್ ಭದ್ರೆ, ಮಲ್ಲಿಕಾರ್ಜುನ ಕ್ರಾಂತಿ, ಮರೆಪ್ಪ ಚಟ್ಟರ್‌ಕರ್, ಮರೆಪ್ಪ ನಾಯಕ ಮಗ್ದಂಪುರ, ಟಿ.ಎನ್.ಭೀಮುನಾಯಕ, ಶಿವಪುತ್ರ ಜವಳಿ, ನಿಂಗಪ್ಪ ಹತ್ತಿಮನಿ, ಮಲ್ಲಿಕಾರ್ಜುನ ಜಲ್ಲಪ್ಪನವರ್, ಮಾನಪ್ಪ ಕಟ್ಟಿಮನಿ, ಬಿ.ಎನ್.ವಿಶ್ವನಾಥನಾಯಕ, ಸದ್ದಾಂ ಹುಸೇನ್‌, ಕಾಶಿನಾಥ್ ನಾಟೇಕಾರ, ರವಿ ಕೆ ಮುದ್ನಾಳ, ಅಶೋಕ ಐಕೂರು, ಹಣಮಂತ, ಗೋಪಾಲ ತಳಗೇರಿ, ರೇಣುಕಾ ಸರಡಗಿ, ಮಲ್ಲಿಕಾರ್ಜುನ ಪೂಜಾರಿ, ಭೀಮಪ್ಪ, ಸಂತೋಷ್ ಕುಮಾರ್ ನಿರ್ಮಲಕರ್, ನಿಂಗಪ್ಪ ಶಹಾಪುರ, ಭೀಮಣ್ಣ ಹೊಸಮನಿ, ಎಸ್‌.ಎಸ್.ನಾಯಕ, ಭೀಮರಾಯ ಲಿಂಗೇರಿ, ಮಾನಪ್ಪ ಕಲ್ಲದೇವನಹಳ್ಳಿ, ವಿಜಯ್ ಕುಮಾರ, ನಾಗೇಂದ್ರ ರಾಯಚೂರಕರ್, ವೆಂಕೋಬ ಕಟ್ಟಿಮನಿ, ಚಂದ್ರು ಚಕ್ರವರ್ತಿ, ಭೀಮಾಶಂಕರ, ರಾಹುಲ್‌ ಹುಲಿಮನಿ, ಮರಳು ಸಿದ್ದಪ್ಪನಾಯ್ಕಲ್, ಚಂದ್ರಶೇಖರ್ ದಾಸನಕೇರಿ, ಮಲ್ಲಿನಾಥ್ ಸುಂಕಲ್ಕರ್, ಅಬ್ದುಲ್ ಕರೀಂ, ನಿಂಗಣ್ಣ ಬೀರನಾಳ ಮರೆಪ್ಪ ಕ್ರಾಂತಿ, ಭೀಮಣ್ಣ ಲಕ್ಷ್ಮೀಪುರ ಪೂಜಾರಿ, ಬೆಂಜಮೀನ್, ಮಲ್ಲು ಬೆಳಗೇರಾ, ದೇವು‌ ಲಿಂಗೇರಿ, ಚಂದ್ರು ನಡುಮನಿ,‌ ಮಲ್ಲು ಕುಮನೂರ್, ವಿಲ್ಸನ್, ಪ್ರಭು ಹಾಲಗೇರಾ ಭಾಗವಹಿಸಿದ್ದರು.

‘ಸಾವಲ್ಲ; ವ್ಯವಸ್ಥಿತ ಕೊಲೆ’

ಪ್ರತಿಭಟನೆಯಲ್ಲಿ ಮಾತನಾಡಿದ ಚಿತ್ರನಟ ಹಾಗೂ ಹೋರಾಟಗಾರ ಚೇತನ್‌ ಅಂಹಿಸಾ ಪಿಎಸ್‌ಐ ಪರಶುರಾಮ್‌ ಅವರ ಸಾವಲ್ಲ. ಇದು ವ್ಯವಸ್ಥಿತ ಕೊಲೆ ಎಂದು ದೂರಿದರು. ‌ಎಸ್ಸಿ–ಎಸ್ಟಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಶಾಸಕರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ. ಸ್ವಜಾತಿ ನಾಯಕ ಅವರು. ಕಾಂಗ್ರೆಸ್‌ ಬಿಜೆಪಿ ದಲಿತ ವಿರೋಧಿ ಪಕ್ಷಗಳು ಎಂದು ಆಪಾದಿಸಿದರು. ಎಸ್ಸಿ ಎಸ್ಟಿ ಸಮುದಾಯದ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಹಿಂದ ನಾಯಕ ಅಲ್ಲ. ಅಧಿಕಾರದ ಹಪಾಹಪಿ ನಾಯಕ ಎಂದು ಹೇಳಿದರು.

ಶಾಸಕರ ಕಚೇರಿ ಮುತ್ತಿಗೆ ಯತ್ನ‌‌

ಮೈಲಾ‍‍‍ಪುರ ಅಗಸಿಯಿಂದ ಆಗಮಿಸಿದ ಪ್ರತಿಭಟನಾ ರ್‍ಯಾಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತ ಸಮೀಪದ ಶಾಸಕರ ಸಂಪರ್ಕ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಕಚೇರಿಗೆ ನುಗ್ಗಿದಂತೆ ಅಡ್ಡಗಟ್ಟಿದರು. ‌ಇದಾದ ನಂತರ ನೇತಾಜಿ ಸುಭಾಷಚಂದ್ರಬೋಸ್‌ ವೃತ್ತದಲ್ಲಿ ಜಮಾಯಿಸಿದ ಮುಖಂಡರು ‌ಶಾಸಕ ಹಾಗೂ ಪುತ್ರನ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿ ಭಾವಚಿತ್ರ ಮೇಲೆ ನಾಣ್ಯಗಳನ್ನು ಸುರಿದರು. ಪಿಎಸ್‌ಐ ಪರಶುರಾಮ್‌ ಅವರ ತಂದೆ ಜನಕಮುನಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಯಾದಗಿರಿಯಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಹಲಗೆ ಮೂಲಕ ಪ್ರತಿಭಟನೆ ನಡೆಸಲಾಯಿತು

ಯಾದಗಿರಿಯಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಹಲಗೆ ಮೂಲಕ ಪ್ರತಿಭಟನೆ ನಡೆಸಲಾಯಿತು 

ಯಾದಗಿರಿಯಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರಿಗೆ ಮನವಿ ಸಲ್ಲಿಸಲಾಯಿತು

ಯಾದಗಿರಿಯಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರಿಗೆ ಮನವಿ ಸಲ್ಲಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT