ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸುರಪುರದಲ್ಲಿ ಪ್ರತಿಭಟನೆ

Last Updated 11 ಅಕ್ಟೋಬರ್ 2020, 4:09 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಆಲ್ದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಶನಿವಾರ ಇಲ್ಲಿ ಆಲ್ದಾಳ, ಹಾವಿನಾಳ, ಎಸ್.ಡಿ. ಗೋನಾಲ, ನಾಗರಾಳ, ಹಂದ್ರಾಳ, ಬೋನಾಳ, ಮಂಗ್ಯಾಳ ಗ್ರಾಮಗಳ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಮಾನಪ್ಪ ಸಾಹುಕಾರ ಮಾತನಾಡಿ, ‘ಆಲ್ದಾಳ ಗ್ರಾ.ಪಂ. ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ರೈತರಿಗೆ ಒಂದೇ ಫೀಡರ್ ಇದೆ. ಹೆಚ್ಚಿನ ಪಂಪ್‍ಸೆಟ್‍ಗಳು ಇರುವುದರಿಂದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಭತ್ತ ಕಾಳು ಕಟ್ಟುವ ಹಂತದಲ್ಲಿ ಇರುವಾಗ ತುರ್ತು ನೀರಿನ ಅಗತ್ಯವಿದೆ. ನೀರು ದೊರೆಯದಿದ್ದರೆ ಬೆಳೆ ನಾಶವಾಗುತ್ತದೆ. ರೈತರು ಬೀದಿಗೆ ಬೀಳಲಿದ್ದಾರೆ. ಸರ್ಕಾರ ಇದ್ದರೂ ರೈತರ ಪಾಲಿಗೆ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘10 ತಾಸು ವಿದ್ಯುತ್ ಪೂರೈಸಬೇಕು. 2 ಹಾಗೂ 3 ಫೇಸ್ ವಿದ್ಯುತ್ ನೀಡಬೇಕು. ನಿರಂತರ ಜ್ಯೋತಿ ಕಾಮಗಾರಿ ನಡೆಯುತ್ತಿದ್ದು, ಸಂಪೂರ್ಣವಾಗಿ ಕಳಪೆ ಮಟ್ಟದ್ದಾಗಿದೆ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವೈರ್ ಹರಿದು ಹೋಗಿವೆ. ಕೂಡಲೇ ದುರಸ್ತಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ವೆಂಕಟೇಶ ಬೇಟೆಗಾರ, ರಮೇಶ ದೊರೆ ಆಲ್ದಾಳ ಮಾತನಾಡಿದರು. ರೈತರ ಸಮಸ್ಯೆ ಆಲಿಸಿ ಮಾತನಾಡಿದ ಜೆಸ್ಕಾಂ ಎಇಇ ಈರಣ್ಣ ಅಳ್ಳಿಚಂಡಿ, ‘ಸರ್ಕಾರದ ನಿಯಮದಂತೆ 7 ತಾಸು ವಿದ್ಯುತ್ ಪೂರೈಸಲಾಗುವುದು. ನಿರಂತರ ವಿದ್ಯುತ್ ಜ್ಯೋತಿ ಇರುವುದರಿಂದ ಇದಕ್ಕಿಂತ ಹೆಚ್ಚಿನ ಸಮಯ ಕೊಡಲು ಸಾಧ್ಯವಿಲ್ಲ. ಶಿಫ್ಟ್ ಆಧಾರದ ವಿದ್ಯುತ್ ಪೂರೈಸಲಾಗುವುದು. ರಾತ್ರಿ ಪಾಳೆಯದಲ್ಲಿ 3 ರಿಂದ ನಾಲ್ಕು ತಾಸು ಕೊಟ್ಟರೆ ಬೆಳಿಗ್ಗೆ ಮೂರ್ನಾಲ್ಕು ಗಂಟೆ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ಮುಖಂಡರಾದ ರಾಜಪ್ಪ ಸಕಾಪುರ, ಅಮಾತೆಪ್ಪ ಅನಸೂರ, ದುರಗಪ್ಪ ಹುಲಿಕಲ್, ನಿಂಗಪ್ಪ ಸಾಹುಕಾರ, ಸಲೀಂ ಪಟೇಲ್, ಬಸವರಾಜ್ ದಿವಾನ್, ಸಿದ್ಧಣ್ಣ, ತಿರುಪತಿ ಹುದ್ದಾರ್, ವೈರಿನಾಥ್ ಹುದ್ದಾರ್, ಬಸವರಾಜ ದಿವಾಕರ್, ಭೀಮಾಶಂಕರ, ಅಯ್ಯಣ್ಣ, ದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT