ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್‌ಐ ಆತ್ಮಹತ್ಯೆ | 14ರೊಳಗೆ ಶಾಸಕ, ಪುತ್ರನ ಬಂಧಿಸಿ: ಮಲ್ಲಿಕಾರ್ಜುನ ಕ್ರಾಂತಿ

Published 5 ಆಗಸ್ಟ್ 2024, 15:51 IST
Last Updated 5 ಆಗಸ್ಟ್ 2024, 15:51 IST
ಅಕ್ಷರ ಗಾತ್ರ

ಯಾದಗಿರಿ: ‘ನಗರಠಾಣೆ ಪಿಎಸ್‌ಐ ಪರಶುರಾಮ್‌ ಸಾವಿಗೆ ಕಾರಣರಾದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪ‍ನಗೌಡ ಅವರನ್ನು ಆ.14ರೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.‌

‘ಸಾವಿನ ನಂತರ ಸುಮಾರು 18 ಗಂಟೆಗಳ ನಂತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಮೂರು ದಿನಗಳಾದರೂ ಇನ್ನೂ ಬಂಧಿಸಿಲ್ಲ. ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಮೃತ ಪರಶುರಾಮ್‌ ನಗರ ಠಾಣೆಯಲ್ಲಿ ಸೇವೆ ಸಲ್ಲಿಸಲು 7 ತಿಂಗಳಾಗಿತ್ತು. ಇಲ್ಲೇ ಮುಂದುವರಿಸಲು ₹30 ಲಕ್ಷ ಹಣ ಕೇಳಿದ್ದರು. ಆದರೆ, ನೀಡದ ಕಾರಣ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದಿದ್ದ ಅಧಿಕಾರಿಗೆ ಒತ್ತಡ ಹೆಚ್ಚಾಗಿತ್ತು. ಭ್ರಷ್ಟರ ಹಣದಾಹದಿಂದ ರೋಸಿ ಹೋಗಿದ್ದರು’ ಎಂದು ಹೇಳಿದರು.

‘ಕಾಂಗ್ರೆಸ್‌ ಸರ್ಕಾರಕ್ಕೆ ನಾವು ಬಹಿರಂಗ ಬೆಂಬಲ ನೀಡಿದ್ದೆವು. ಆದರೆ, ಅವರು ಹಗರಣಗಳ ಮೇಲೆ ಹಗರಣ ಮಾಡಿಕೊಂಡು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ಹಗರಣ ಈಗ ವರ್ಗಾವಣೆ ದಂಧೆ ಬೆಳಕಿಗೆ ಬಂದಿದೆ’ ಎಂದರು.

ಎಂಆರ್‌ಎಚ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಮಾತನಾಡಿ, ‘ಶಾಸಕರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇಬ್ಬರನ್ನೂ ಬಂಧಿಸಿದರೆ ಪರಶುರಾಮ್‌ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪತ್ನಿಗೆ ಸಮಾಧಾನ ಸಿಗುತ್ತದೆ. ಕೂಡಲೇ ಸರ್ಕಾರ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಭೀಮುನಾಯಕ ಮಾತನಾಡಿ, ‘ಸಾಮಾನ್ಯ ಜನರನ್ನು ಒಂದೇ ದಿನದಲ್ಲಿ ಬಂಧಿಸುತ್ತಾರೆ. ಆದರೆ, ಎರಡು ದಿ‌ನ ಕಳೆದರೂ ಶಾಸಕರನ್ನು ಬಂಧಿಸಿಲ್ಲ. ಜಿಲ್ಲೆಯಲ್ಲಿ ವಿವಿಧ ಪೋಸ್ಟ್‌ಗಳು ಸಂತೆಯಲ್ಲಿ ಮಾರಾಟ ಮಾಡಿದಂತೆ ಆಗಿದೆ. ಸಿಐಡಿ ಬದಲಾಗಿ ಸಿಬಿಐಗೆ ಪ್ರಕರಣ ವಹಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಿವಪುತ್ರ ಜವಳಿ, ನಾಗಣ್ಣ ಕಲ್ಲದೇವನಹಳ್ಳಿ, ಪರಶುರಾಮ್‌ ಕುರಕುಂದಿ, ಎಂ.ಡಿ.ತಾಜ್‌ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಈ ಘಟನೆಗೆ ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆರೋಪಿಗಳನ್ನು ಉಸ್ತುವಾರಿ ಸಚಿವರು ಬಚಾವ್ ಮಾಡಲು ಯತ್ನಿಸಿದ್ದಾರೆ. ಪರಶುರಾಮ್‌ ಅವರಿಗೆ ಜಿಲ್ಲಾಡಳಿತದಿಂದ ಗೌರವ ತೋರಿಸಿಲ್ಲ’ ಎಂದು ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಮರೆಪ್ಪ ಚಟ್ಟರಕರ್, ಸಿದ್ದಪ್ಪ ನಾಯಕ, ಮರಳಸಿದ್ದ ನಾಯ್ಕಲ್‌, ಕಾಶಿನಾಥ ನಾಟೇಕರ್‌, ಗೋಪಾಲ ದಾಸನಕೇರಿ, ಮಲ್ಲು ಮಾಳಿಕೇರಿ, ಪ್ರಭು ಬುಕ್ಕಲ್‌, ಮಹಾದೇವಪ್ಪ ದಿಗ್ಗಿ, ಮರಪ್ಪ ಕ್ರಾಂತಿ, ಅಜೀಜ್‌ ಸಾಬ್‌ ಐಕೂರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT