ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್: ತಲೆಮೇಲೆ ಪೇಚಿಂಗ್ ಕಲ್ಲು ಬಿದ್ದು ಬಾಲಕಿ ಸಾವು

ಗಾಳಿ ಸಹಿತ ಸುರಿದ ಮಳೆಗೆ ಧರೆಗುರುಳಿದ ಮರಗಳು, ಸಾವು-ನೋವು
Published 26 ಮೇ 2024, 17:03 IST
Last Updated 26 ಮೇ 2024, 17:03 IST
ಅಕ್ಷರ ಗಾತ್ರ

ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ವೇಳೆ ಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ಒಬ್ಬ ಬಾಲಕಿ ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆಗೆ ಗಾಯವಾಗುವ ಜತೆಗೆ ಅಪಾರ ಗಿಡ-ಮರಗಳು ಧರೆಗುಳಿದಿವೆ.

ಪಟ್ಟಣದ ಹೊರವಲಯದ ಗುರುಮಠಕಲ್-ಹೈದರಾಬಾದ್ ರಸ್ತೆಯಲ್ಲಿ ಮರಗಳು ಉರುಳಿದ ಹಿನ್ನಲೆ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಜೆಸಿಬಿ ಮೂಲಕ ಮರಗಳನ್ನು ತೆರವು ಮಾಡಲಾಯಿತು.

ಚಪೆಟ್ಲಾ, ಯದ್ಲಾಪುರ, ದಂತಾಪುರ, ಎಂ.ಟಿ.ಪಲ್ಲಿ, ಗ್ರಾಮಗಳಲ್ಲಿ ಮರಗಳು ಉರುಳಿರುವುದಾಗಿ ಆಯಾ ಗ್ರಾಮಸ್ಥರು ಮಾಹಿತಿ ನೀಡಿದರು.

ಕಂದಕೂರ ಹೊರವಲಯದ ಗಣಪುರ ಕ್ರಾಸ್ ಹತ್ತಿರ ಮರಗಳು ರಸ್ತೆಗುರುಳಿದ್ದು, ತೆರವು ಕಾರ್ಯ ಜರುಗಿದೆ.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಾಳಿಯ ರಭಸಕ್ಕೆ ಮರಗಳು ಉರುಳಿವೆ. ಕಾಕಲವಾರ ಕ್ರಾಸ್ ಹತ್ತಿರ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬುಲೆರೋ ಪಿಕಪ್ ವಾಹನಗಳ ಮೇಲೆ ರಸ್ತೆ ಬದಿಯ ಮರಗಳು ಉರುಳಿದ್ದು, ವಾಹನ ಜಖಂಗೊಂಡಿದೆ.

ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಸಿದ್ದಮ್ಮ ಅಯ್ಯಪ್ಪ ಅವರಿಗೆ ಮನೆ ಮೇಲಿನ ಪತ್ರಾಸ್ ಬಿದ್ದು ಕೈಗೆ ಬಲವಾದ ಗಾಯವಾಗಿದ್ದು, ಗುರುಮಠಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ವಿದ್ಯುತ್ ಸಂಪರ್ಕ ಜಾಲ ಅಸ್ತವ್ಯಸ್ಥ:

ಭಾನುವಾರ ಸುರಿದ ಮಳೆ ಮತ್ತು ಭಾರಿ ಗಾಳಿಗೆ ತಾಲ್ಲೂಕಿನ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದಿವೆ.

ಮರಗಳು ಉರುಳಿದ ಪರಿಣಾಮ ವಿದ್ಯುತ್‌ ಸರಬರಾಜು ತಂತಿಗಳು ತುಂಡಾಗಿದ್ದು, ಜೆಸ್ಕಾಂ ಸಿಬ್ಬಂದಿ ಸದ್ಯ ಸಂಪರ್ಕ ಜಾಲದಲ್ಲಾದ ಸಮಸ್ಯೆಯನ್ನು ಗುರುತಿಸುತ್ತಿದ್ದು, ದುರಸ್ತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

//ಬಾಕ್ಸ್//

ಗಾಳಿಸಹಿತ ಮಳೆಗೆ ಬಾಲಕಿ ಸಾವು

ಗುರುಮಠಕಲ್: ಪಟ್ಟಣದ ಉಪ್ಪಾರಗಡ್ಡಾ ಬಡಾವಣೆಯ ನಿವಾಸಿ ತಿಮ್ಮಪ್ಪ ಯಾದವ ಅವರ ಪುತ್ರಿ ಮಾನಸಿ (4) ಗಾಳಿಯ ರಭಸಕ್ಕೆ ಪತ್ರಾಸ್ ಮೇಲಿಟ್ಟ ಪೇಚಿಂಗ್ ಕಲ್ಲು ತಲೆ ಮೇಲೆ ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.

ಪಟ್ಟಣದ ಹೊರವಲಯದ ತಮ್ಮ ಜಮೀನಿನಲ್ಲಿದ್ದ ಪತ್ರಾಸ್ ಮೇಲ್ಛಾವಣಿಯ ಕಟ್ಟಡದಲ್ಲಿದ್ದಾಗ ಗಾಳಿ ಸಹಿತ ಮಳೆ ಆರಂಭವಾಗಿದೆ. ಗಾಳಿಯ ರಭಸಕ್ಕೆ ಪತ್ರಾಸ್ ಹಾರಾಡಿದಾಗ, ಪತ್ರಾಸ್ ಮೇಲಿಟ್ಟಿದ್ದ ಪೇಚಿಂಗ್ ಕಲ್ಲು ಬಿದ್ದಿದೆ. ಆ ವೇಳೆಗೆ ಕೋಣೆಯಿಂದ ಹೊರಗೆ ಹೋಗಿದ್ದ ಬಾಲಕಿ ಮಾನಸಿ ತಲೆ ಮೇಲೆ ಕಲ್ಲು ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಮೃತ ಬಾಲಕಿ ಮನೆಗೆ ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಹಾಗೂ ಕಂದಾಯ ಸಿಬ್ಬಂದಿ ಭೆಟಿ ನೀಡಿ, ಪರಿಶೀಲಿಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT