ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲನಾಯಕ ₹9 ಕೋಟಿ ಒಡೆಯ

Published 16 ಏಪ್ರಿಲ್ 2024, 14:18 IST
Last Updated 16 ಏಪ್ರಿಲ್ 2024, 14:18 IST
ಅಕ್ಷರ ಗಾತ್ರ

ಸುರಪುರ: ಸುರಪುರ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜಾ ವೇಣುಗೋಪಾಲ ನಾಯಕ ಬುಧವಾರ ಚುನಾವಣಾಧಿಕಾರಿ ಕಾವ್ಯಾರಾಣಿ ಅವರಿಗೆ ಎರಡು ಪ್ರತಿಗಳಲ್ಲಿ  ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿ ಹೊರಬಂದ ಅವರು ಮಾತನಾಡಿ, ‘ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ. 19ರಂದು ಮುಖಂಡರ ಮತ್ತು ಕಾರ್ಯಕರ್ತರ ಅಭಿಲಾಷೆ ಮೇರೆಗೆ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

‘ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತು ಪ್ರಚಾರ ಮಾಡಿದ್ದೇವೆ. ಒಳ್ಳೆಯ ಪ್ರತಿಕ್ರಿಯೆ ಇದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ತಂದೆ ದಿ. ರಾಜಾ ವೆಂಕಟಪ್ಪನಾಯಕ ಅವರ ಪ್ರಭಾವ ಎಲ್ಲೆಡೆ ಇದೆ. ಅವರ ಅಭಿವೃದ್ಧಿ ಕೆಲಸಗಳು, ಜನಪರ ಕಾರ್ಯಗಳನ್ನು ಜನರು ಮೆಲುಕು ಹಾಕುತ್ತಿದ್ದಾರೆ’ ಎಂದರು.

‘ರಾಜ್ಯದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿದ್ದು ಜನ ಸಂತುಷ್ಟರಾಗಿದ್ದಾರೆ. ನಮ್ಮ ತಂದೆಯ ಜೊತೆ ಇದ್ದ ಹಿರಿಯರು, ಮುಖಂಡರು ನನ್ನ ಬೆನ್ನಿಗೆ ಇದ್ದಾರೆ. ನನ್ನ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ರಾಜಾ ಕೃಷ್ಣಪ್ಪನಾಯಕ, ರಾಜಶೇಖರಗೌಡ ಪಾಟೀಲ, ರಾಜಾ ಕುಮಾರನಾಯಕ, ರಾಜಾ ಸಂತೋಷನಾಯಕ, ರಾಜಾ ಹನುಮಂತ್ರಾಯ ನಾಯಕ, ಅಬ್ದುಲ ಗಫಾರ್ ನಗನೂರಿ, ಪ್ರಕಾಶ ಗುತ್ತೇದಾರ, ರವಿ ಸಾಹುಕಾರ, ಭೀಮರಾಯ ಮೂಲಿಮನಿ, ವೆಂಕಟೇಶ ಹೊಸಮನಿ, ದಾನಪ್ಪ ಕಡಿಮನಿ ಇತರರು ಜೊತೆಗಿದ್ದರು.

₹ 9 ಕೋಟಿ ಒಡೆಯ, 2 ಐಷಾರಾಮಿ ಕಾರುಗಳು: ಹಿಂದೂ ಅವಿಭಕ್ತ ಕುಟುಂಬದ ನಿಯಮದಂತೆ ತಮ್ಮ ತಂದೆ ದಿ. ರಾಜಾ ವೆಂಕಟಪ್ಪನಾಯಕ ಅವರ ಆಸ್ತಿಯ 1/3 ಆಸ್ತಿಯನ್ನು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ರಾಜಾ ವೇಣುಗೋಪಾಲ ನಾಯಕ ಘೋಷಿಸಿಕೊಂಡಿದ್ದಾರೆ.
ಅವರ ವಿರುದ್ಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ 2, ಹುಣಸಗಿ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು ಸುರಪುರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಬಾಕಿ ಇವೆ.
ಒಂದು ಟೊಯೊಟೊ ಫಾರ್ಚುನರ್ ಮತ್ತು ಎಂ.ಜಿ. ಗ್ಲೋಸ್ಟರ್ ಕಾರು ಹೊಂದಿದ್ದಾರೆ. ತಮ್ಮ ಕೈಯಲ್ಲಿ ನಗದು ₹3 ಲಕ್ಷ, ಪತ್ನಿ ರಾಣಿ ಲಿಖಿತಾ ನಾಯಕ ಅವರಲ್ಲಿ ನಗದು₹ 1 ಲಕ್ಷ, 500 ಗ್ರಾಂ ಚಿನ್ನ ಇದೆ. ₹ 1.5 ಕೋಟಿ ಚರಾಸ್ತಿ, ₹ 7.7 ಕೋಟಿ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ರಾಜಾ ವೇಣುಗೋಪಾಲ ಆಸ್ತಿ ವಿವರ ಪಟ್ಟಿ

ಒಟ್ಟು ಆಸ್ತಿ;₹ 9 ಕೋಟಿ (ಸ್ಥಿರ ಮತ್ತು ಚರ)

ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿ;₹45 ಲಕ್ಷ

ಬಂಗಾರದ ಒಡವೆ;600 ಗ್ರಾಂ

ಸಾಲ;₹ 33 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT